Sat. Jun 6th, 2026

ಯೋಗೀಶ್ ಗೌಡ ಕೊಲೆ ಕೇಸ್:ಶಾಸಕ ವಿನಯ್ ಕುಲಕರ್ಣಿ ದೋಷಿ

Share this with Friends

ಬೆಂಗಳೂರು:ಸುಮಾರು ಹತ್ತು ವರ್ಷಗಳ ಕಾಲ ಇಡೀ ರಾಜ್ಯದ ಗಮನ ಸೆಳೆದಿದ್ದ ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಕೊನೆಗೂ ಕಾನೂನಿನ ಚಾಟಿ ಬೀಸಿದೆ. ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಜನರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ದೋಷಿಗಳೆಂದು ಘೋಷಿಸಿದೆ.

ಬುಧವಾರ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು, ವಿನಯ್ ಕುಲಕರ್ಣಿ ಮೇಲೆ ಹೊರಿಸಲಾಗಿದ್ದ ಕೊಲೆ ಸಂಚು (IPC 120B) ಮತ್ತು ಹತ್ಯೆ (IPC 302) ಆರೋಪಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದರು. ಆದರೆ, ಸರಿಯಾದ ತಾಂತ್ರಿಕ ಅನುಮತಿ ಇಲ್ಲದ ಕಾರಣ ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿದ್ದ ಆರೋಪಗಳಿಂದ ಅವರನ್ನು ಮುಕ್ತಗೊಳಿಸಲಾಗಿದೆ.

ಜೈಲಿನತ್ತ ಶಾಸಕ:

ತೀರ್ಪು ಪ್ರಕಟವಾದ ಬೆನ್ನಲ್ಲೇ ಶಾಸಕರನ್ನು ಪೊಲೀಸರು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ತೀವ್ರ ಭಾವುಕರಾದ ವಿನಯ್ ಕುಲಕರ್ಣಿ ಅವರು ಕಣ್ಣೀರು ಹಾಕುತ್ತಲೇ ಕಾರು ಹತ್ತಿದ ದೃಶ್ಯಗಳು ಕಂಡುಬಂದವು. ಬಿಗಿ ಭದ್ರತೆಯ ನಡುವೆ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು.

ಏನಿದು ಪ್ರಕರಣ?

2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ಜಿಮ್‌ನಲ್ಲಿ ಯೋಗೀಶ್ ಗೌಡ ಅವರನ್ನು ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರೂ, ನಂತರ ಪ್ರಕರಣವನ್ನು ಸಿಬಿಐಗೆ (CBI) ಹಸ್ತಾಂತರಿಸಲಾಗಿತ್ತು. ಸಿಬಿಐ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ವಿನಯ್ ಕುಲಕರ್ಣಿ ಅವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿತ್ತು.

ದೋಷಿಗಳೆಂದು ಸಾಬೀತಾಗಿರುವ ಎಲ್ಲಾ 17 ಮಂದಿಗೆ ಎಷ್ಟು ವರ್ಷಗಳ ಶಿಕ್ಷೆ ವಿಧಿಸಲಾಗುತ್ತದೆ ಎಂಬ ವಿಚಾರವನ್ನು ನ್ಯಾಯಾಲಯವು ಏಪ್ರಿಲ್ 16ರ ಗುರುವಾರ ಪ್ರಕಟಿಸಲಿದೆ. ಜನಪ್ರತಿನಿಧಿಯೊಬ್ಬರು ಕೊಲೆ ಪ್ರಕರಣದಲ್ಲಿ ದೋಷಿಯಾಗಿರುವುದು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಹಾದಿಮಾಡಿಕೊಟ್ಟಿದೆ.

 


Share this with Friends

Related Post