Sat. Jun 6th, 2026

ವಿನಯ್ ಕುಲಕರ್ಣಿ ಸೇರಿ 17 ಮಂದಿಗೆ ನಾಳೆ ಶಿಕ್ಷೆ ಪ್ರಕಟ; ತೀರ್ಪು ನೀಡಿದ ಬೆನ್ನಲ್ಲೇ ನ್ಯಾಯಾಧೀಶರ ವರ್ಗಾವಣೆ

Share this with Friends

ಬೆಂಗಳೂರು: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿರುವ ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ದೋಷಿಯಾಗಿರುವ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಾಳೆ (ಏಪ್ರಿಲ್ 17) ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ಇದರ ನಡುವೆಯೇ, ಈ ಮಹತ್ವದ ತೀರ್ಪು ನೀಡಿದ ನ್ಯಾಯಾಧೀಶರ ವರ್ಗಾವಣೆಯಾಗಿದೆ.

ಶಿಕ್ಷೆಯ ಪ್ರಮಾಣ ಇಂದು ನಿರ್ಧಾರ:

ಕಳೆದ ಏಪ್ರಿಲ್ 15ರಂದು ವಿನಯ್ ಕುಲಕರ್ಣಿ ಮತ್ತು ಇತರ 16 ಮಂದಿ ವಿರುದ್ಧ ಕೊಲೆ ಹಾಗೂ ಕ್ರಿಮಿನಲ್ ಸಂಚು ರೂಪಿಸಿದ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ಘೋಷಿಸಿತ್ತು. ನಾಳೆ ನ್ಯಾಯಾಧೀಶರು ದೋಷಿಗಳಿಗೆ ಎಷ್ಟು ವರ್ಷ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಿದ್ದಾರೆ ಎಂಬ ಅಂತಿಮ ಆದೇಶ ಹೊರಬೀಳಲಿದೆ. ನಿಯಮದಂತೆ 2 ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದಲ್ಲಿ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ರದ್ದಾಗುವ ಭೀತಿ ಎದುರಾಗಿದೆ.

ನ್ಯಾಯಾಧೀಶರ ವರ್ಗಾವಣೆ:

ಈ ಸುದೀರ್ಘ ಮತ್ತು ಸಂಕೀರ್ಣ ಪ್ರಕರಣದ ವಿಚಾರಣೆ ನಡೆಸಿ ಐತಿಹಾಸಿಕ ತೀರ್ಪು ನೀಡಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರನ್ನು ಹೈಕೋರ್ಟ್ ರಿಜಿಸ್ಟ್ರಾರ್ (ವಿಜಿಲೆನ್ಸ್) ಹುದ್ದೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅವರ ಸ್ಥಾನಕ್ಕೆ ಪ್ರಿನ್ಸಿಪಲ್ ಡಿಸ್ಟ್ರಿಕ್ಟ್ ಅಂಡ್ ಸೆಷನ್ಸ್ ಜಡ್ಜ್ ಬಿ. ಜಯಂತ್ ಕುಮಾರ್ ಅವರು ನೇಮಕಗೊಂಡಿದ್ದಾರೆ.

ಪ್ರಕರಣದ ಗಂಭೀರತೆ:

ಸಿಬಿಐ ಪರ ವಕೀಲರು ದೋಷಿಗಳಿಗೆ ಯಾವುದೇ ರಿಯಾಯಿತಿ ನೀಡದೆ ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ಈಗಾಗಲೇ ವಾದ ಮಂಡಿಸಿದ್ದಾರೆ. “ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಕೊಲೆಯಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಗಂಭೀರವಾದದ್ದು” ಎಂದು ಸಿಬಿಐ ವಾದಿಸಿದೆ. ಸದ್ಯ ದೋಷಿಗಳೆಲ್ಲರೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದು, ನಾಳೆ ನ್ಯಾಯಾಲಯದ ಅಂತಿಮ ತೀರ್ಪನ್ನು ಎದುರಿಸಲಿದ್ದಾರೆ.

 


Share this with Friends

Related Post