Sat. Jun 6th, 2026

ಇಂಧನ ನಿರ್ವಹಣೆಯಲ್ಲಿ ಬೆಂಗಳೂರು ಜಲಮಂಡಳಿ ವಿಶ್ವದಾಖಲೆ: ‘ISO’ ಮನ್ನಣೆ ಪಡೆದ ದೇಶದ ಮೊದಲ ಮಂಡಳಿ

Share this with Friends

ಬೆಂಗಳೂರು:ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಇಂಧನ ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದೆ. ಇಂಧನ ದಕ್ಷತೆಗಾಗಿ ನೀಡಲಾಗುವ ಪ್ರತಿಷ್ಠಿತ ISO 50001:2018 ಪ್ರಮಾಣಪತ್ರವನ್ನು ತನ್ನದಾಗಿಸಿಕೊಂಡಿರುವ BWSSB, ಈ ಮನ್ನಣೆ ಪಡೆದ ಭಾರತದ ಮೊದಲ ಜಲಮಂಡಳಿ ಎಂಬ ಐತಿಹಾಸಿಕ ದಾಖಲೆ ಬರೆದಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಮಂಡಳಿಯು ಕೈಗೊಂಡ ಸುಧಾರಣಾ ಕ್ರಮಗಳನ್ನು ಪರಿಗಣಿಸಿ ಈ ಪ್ರಮಾಣಪತ್ರ ನೀಡಲಾಗಿದೆ. ಅಂತಾರಾಷ್ಟ್ರೀಯ ಮಾನ್ಯತೆ ನೀಡುವ ಬ್ಯೂರೋ ವೆರಿಟಾಸ್ (Bureau Veritas) ಸಂಸ್ಥೆಯು ಏಪ್ರಿಲ್ 14, 2026 ರಂದು ಅಧಿಕೃತವಾಗಿ ಈ ಪ್ರಮಾಣಪತ್ರವನ್ನು ಹಸ್ತಾಂತರಿಸುವ ಮೂಲಕ ಜಲಮಂಡಳಿಯ ಇಂಧನ ನಿರ್ವಹಣಾ ವ್ಯವಸ್ಥೆಯನ್ನು ಶ್ಲಾಘಿಸಿದೆ.

ಮಂಡಳಿಯ ಪ್ರಮುಖ ಪಂಪಿಂಗ್ ಸ್ಟೇಷನ್‌ಗಳಾದ ಟಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿ ಘಟಕಗಳಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿದ್ಯುತ್ ಉಳಿತಾಯ ಕ್ರಮಗಳು ಈ ಸಾಧನೆಗೆ ಪ್ರಮುಖ ಕಾರಣವಾಗಿವೆ. ಕಾವೇರಿ ನೀರನ್ನು ನಗರಕ್ಕೆ ಪೂರೈಸುವ ಈ ಬೃಹತ್ ಕೇಂದ್ರಗಳಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೇವಲ ಪಂಪಿಂಗ್ ಸ್ಟೇಷನ್‌ಗಳಲ್ಲದೆ, ಕಾವೇರಿ ಭವನದಲ್ಲಿರುವ ಪ್ರಧಾನ ಕಚೇರಿಯ ಆಡಳಿತಾತ್ಮಕ ಕೆಲಸಗಳು ಮತ್ತು ಇಡೀ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ (GBA Limits) ನಡೆಯುವ ನೀರು ಸರಬರಾಜು ಪ್ರಕ್ರಿಯೆಯನ್ನು ಈ ಪ್ರಮಾಣೀಕರಣವು ಒಳಗೊಂಡಿದೆ. ಇದು ಮಂಡಳಿಯ ಒಟ್ಟಾರೆ ಕಾರ್ಯದಕ್ಷತೆ ಮತ್ತು ಪರಿಸರ ಸ್ನೇಹಿ ನಿಲುವಿಗೆ ಸಾಕ್ಷಿಯಾಗಿದೆ.

ಈ ಪ್ರಮಾಣಪತ್ರವು ಜಲಮಂಡಳಿಯ ಆರ್ಥಿಕ ಹೊರೆ ತಗ್ಗಿಸಲು ಮತ್ತು ಇಂಧನ ವ್ಯರ್ಥವಾಗುವುದನ್ನು ತಡೆಯಲು ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ಜನಪರ ಮತ್ತು ತಾಂತ್ರಿಕ ಸುಧಾರಣೆಗಳನ್ನು ಜಾರಿಗೆ ತರಲು ಮಂಡಳಿ ನಿರ್ಧರಿಸಿದೆ.

ಉಪಮುಖ್ಯಮಂತ್ರಿಗೆ ‘ISO’ ಪ್ರಮಾಣಪತ್ರ ಹಸ್ತಾಂತರ:

ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರ ನೇತೃತ್ವದ ಹಿರಿಯ ಅಧಿಕಾರಿಗಳ ತಂಡವು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಅಧಿಕೃತ ಪ್ರಮಾಣಪತ್ರವನ್ನು ಹಸ್ತಾಂತರಿಸಿತು. ಮಂಡಳಿಯ ಈ ಐತಿಹಾಸಿಕ ಮೈಲಿಗಲ್ಲಿಗೆ ಮಾರ್ಗದರ್ಶನ ನೀಡಿದ ಡಿಸಿಎಂ ಅವರಿಗೆ ಅಧಿಕಾರಿಗಳು ವಿಶೇಷ ಧನ್ಯವಾದ ಅರ್ಪಿಸಿದರು.

ಈ ಸಾಧನೆಯನ್ನು ಶ್ಲಾಘಿಸಿದ ಡಿ.ಕೆ. ಶಿವಕುಮಾರ್, ಬೆಂಗಳೂರು ನಗರಕ್ಕೆ ವಿಶ್ವದರ್ಜೆಯ ಮತ್ತು ಸುಸ್ಥಿರ ಜಲ ಮೂಲಸೌಕರ್ಯವನ್ನು ಒದಗಿಸುವ ಸರ್ಕಾರದ ಬದ್ಧತೆಗೆ ಈ ಪ್ರಮಾಣಪತ್ರ ಸಾಕ್ಷಿಯಾಗಿದೆ ಎಂದರು. ಪಂಪಿಂಗ್ ಸ್ಟೇಷನ್‌ಗಳಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಜಾರಿಗೆ ತರುವ ಮೂಲಕ ಜಲಮಂಡಳಿಯು ರಾಷ್ಟ್ರೀಯ ಮಟ್ಟದಲ್ಲಿ ಹೊಸ ಮಾನದಂಡ ಸ್ಥಾಪಿಸಿದೆ. ಲಕ್ಷಾಂತರ ನಾಗರಿಕರಿಗೆ ದಕ್ಷ ಮತ್ತು ತಡೆರಹಿತ ಸೇವೆ ನೀಡುವುದರ ಜೊತೆಗೆ, ‘ಬ್ರ್ಯಾಂಡ್ ಬೆಂಗಳೂರು’ ಅನ್ನು ಭವಿಷ್ಯದ ಜಾಗತಿಕ ಮಹಾನಗರವನ್ನಾಗಿ ರೂಪಿಸಲು ಇದು ಪೂರಕವಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮಾತನಾಡಿ, ಈ ಐತಿಹಾಸಿಕ ಮನ್ನಣೆಯು ಜಲಮಂಡಳಿಯ ಪ್ರತಿಯೊಬ್ಬ ಸಿಬ್ಬಂದಿಯ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವಕ್ಕೆ ಸಂದ ಜಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಾಮ್ ಪ್ರಸಾತ್ ಮನೋಹರ್, “ಪ್ರತಿ ಮನೆಗೂ ಶುದ್ಧ ನೀರು ಒದಗಿಸುವ ಸರ್ಕಾರದ ಸಂಕಲ್ಪಕ್ಕೆ ನಾವು ಬದ್ಧರಾಗಿದ್ದೇವೆ. ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಸಮರ್ಥ ನಾಯಕತ್ವದಲ್ಲಿ ನಾವು ತಂತ್ರಜ್ಞಾನವನ್ನು ನಿರಂತರವಾಗಿ ಮೇಲ್ದರ್ಜೆಗೇರಿಸುತ್ತಿದ್ದೇವೆ. ಈ ಸಾಧನೆಯಲ್ಲಿ ಮುಖ್ಯ ಅಭಿಯಂತರರಾದ ಡಾ. ರಾಜೀವ್ ಹಾಗೂ ರಾಜಶೇಖರ್ ಸೇರಿದಂತೆ ಮಂಡಳಿಯ ಇಡೀ ತಂಡದ ಕಠಿಣ ಪರಿಶ್ರಮ ಅಡಗಿದೆ,” ಎಂದು ಶ್ಲಾಘಿಸಿದರು.

ರಾಷ್ಟ್ರೀಯ ಮನ್ನಣೆಯ ಬೆನ್ನಲ್ಲೇ ಅಂತಾರಾಷ್ಟ್ರೀಯ ಗೌರವ:

BWSSB ಇತ್ತೀಚಿನ ವರ್ಷಗಳಲ್ಲಿ ಸತತವಾಗಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಕಳೆದ ವರ್ಷವಷ್ಟೇ ಕೊಳವೆ ಮೂಲಕ ಕುಡಿಯುವ ನೀರು ಸರಬರಾಜು ವ್ಯವಸ್ಥೆಗಾಗಿ ಭಾರತೀಯ ಮಾನದಂಡಗಳ ಬ್ಯೂರೋ (BIS) ಪ್ರಮಾಣಪತ್ರ ಪಡೆದ ಭಾರತದ ಮೊದಲ ಜಲಮಂಡಳಿ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಇದೀಗ ISO 50001:2018 ಅಂತರಾಷ್ಟ್ರೀಯ ಪ್ರಮಾಣೀಕರಣವು ಜಲಮಂಡಳಿಯ ಕಾರ್ಯವೈಖರಿ ಮತ್ತು ಸೇವೆಯ ಗುಣಮಟ್ಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದೆ.

ಟಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿ ಪಂಪಿಂಗ್ ಸ್ಟೇಷನ್‌ಗಳಲ್ಲಿನ ಇಂಧನ ಉಳಿತಾಯ ಕ್ರಮಗಳು ಈ ಜಾಗತಿಕ ಮನ್ನಣೆಗೆ ಪ್ರಮುಖ ಕಾರಣವಾಗಿದ್ದು, ಬೆಂಗಳೂರು ಇಂದು ಜಾಗತಿಕ ಮಟ್ಟದ ಪರಿಸರ ಸ್ನೇಹಿ ಮಹಾನಗರವಾಗಿ ಹೊರಹೊಮ್ಮುತ್ತಿದೆ.

 


Share this with Friends

Related Post