ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಇತ್ತೀಚೆಗೆ ಪ್ರಕಟಿಸಿರುವ ಒಳ ಮೀಸಲಾತಿ ಜಾರಿ ನಿರ್ಧಾರವು ಕೇವಲ ರಾಜಕೀಯ ಗಿಮಿಕ್ ಆಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ದೊಡ್ಡ ಮಟ್ಟದ ದ್ರೋಹ ಎಸಗುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಸಿದ್ದರಾಮಯ್ಯನವರು ನೇಮಿಸಿದ್ದ ನ್ಯಾ. ನಾಗಮೋಹನ್ ದಾಸ್ ಸಮಿತಿಯೇ ಮೀಸಲಾತಿಯನ್ನು ಶೇ. 17ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿತ್ತು. ಆದರೆ, ಆ ವರದಿಯನ್ನು ಅವೈಜ್ಞಾನಿಕ ಎಂದು ಹಣೆಪಟ್ಟಿ ಕಟ್ಟಿ ಈಗ ಕೇವಲ ಶೇ. 15ಕ್ಕೆ ಸೀಮಿತಗೊಳಿಸಿರುವುದು ಯಾವ ನ್ಯಾಯ?” ಎಂದು ಅವರು ಗುಡುಗಿದರು. ಸಾವಿರಾರು ಕೋಟಿ ವೆಚ್ಚದ ಕೆಂಪರಾಜ್ ವರದಿ, ಜಯಪ್ರಕಾಶ್ ಹೆಗ್ಡೆ ಮತ್ತು ಮಧುಸೂದನ ನಾಯಕ್ ವರದಿಗಳನ್ನು ಕಸದ ಬುಟ್ಟಿಗೆ ಹಾಕಿರುವುದು ಸರ್ಕಾರದ ಇಬ್ಬಂದಿ ನೀತಿಯನ್ನು ತೋರಿಸುತ್ತದೆ ಎಂದರು.
ಸಮಿತಿಗಳಿಗೆ ಅವಮಾನ:
ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ತಜ್ಞರ ವರದಿಗಳನ್ನು ಕಡೆಗಣಿಸುವುದನ್ನೇ ಕಾಯಕ ಮಾಡಿಕೊಂಡಿದೆ. “ಯಾವುದೇ ಆಯೋಗಕ್ಕೆ ನಿಮ್ಮನ್ನು ನೇಮಿಸಿದರೆ ದಯವಿಟ್ಟು ಒಪ್ಪಿಕೊಳ್ಳಬೇಡಿ. ವರದಿ ಪಡೆದ ಬಳಿಕ ಅದನ್ನು ತಿರಸ್ಕರಿಸಿ ನಿಮಗೆ ಅವಮಾನ ಮಾಡುವುದೇ ಈ ಸರ್ಕಾರದ ಕೆಲಸ” ಎಂದು ತಜ್ಞರಿಗೆ ಮನವಿ ಮಾಡಿದರು. ಬಿಜೆಪಿ ಸರ್ಕಾರವಿದ್ದಾಗ ಮಾಧುಸ್ವಾಮಿ ಅವರ ಸಮಿತಿ ಮೂಲಕ ಶೇ. 17ರಷ್ಟು ವೈಜ್ಞಾನಿಕ ಹಂಚಿಕೆ ಮಾಡಲಾಗಿತ್ತು. ಆದರೆ ಈಗಿನ ಸರ್ಕಾರ ರಾಜಕೀಯ ಕಾರಣಗಳಿಗಾಗಿ ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಿದೆ ಎಂದು ದೂರಿದರು.
ವಿಳಂಬ ಮತ್ತು ಗುಪ್ತ ಅಜೆಂಡಾ:
2013ರಲ್ಲೇ ಭರವಸೆ ನೀಡಿದ್ದ ಕಾಂಗ್ರೆಸ್, 2023ರವರೆಗೂ ಕಾಲಹರಣ ಮಾಡಿದೆ. ಈಗ ಅಧಿಕಾರ ಉಳಿಸಿಕೊಳ್ಳಲು ಗೊಂದಲ ಸೃಷ್ಟಿಸುತ್ತಿದೆ ಎಂದು ಕಿಡಿಕಾರಿದ ಕಾರಜೋಳ, “ಒಳ ಜಾತಿಗಳ ನಡುವೆ ಜಗಳ ಹಚ್ಚುವುದು ಮತ್ತು ಈ ಪ್ರಕರಣ ನ್ಯಾಯಾಲಯದಲ್ಲಿ ಬಿದ್ದು ಹೋಗುವಂತೆ ಮಾಡುವುದೇ ಮುಖ್ಯಮಂತ್ರಿಗಳ ಗುಪ್ತ ಅಜೆಂಡಾ. ನಂತರ ‘ನಾನು ಜಾರಿಗೆ ಪ್ರಯತ್ನಿಸಿದೆ, ಆದರೆ ಕೋರ್ಟ್ ತಡೆಯೊಡ್ಡಿತು’ ಎಂದು ಹೇಳಿ ಜಾರಿಕೊಳ್ಳಲು ಸಿದ್ದರಾಮಯ್ಯನವರು ಈಗಿನಿಂದಲೇ ಮೋಸದ ಆಟವಾಡುತ್ತಿದ್ದಾರೆ” ಎಂದು ಲೇವಡಿ ಮಾಡಿದರು.

