ಬೆಂಗಳೂರು: ಹೆಸರಘಟ್ಟದ ಮತ್ತೂರು ಗ್ರಾಮದ ರಾಜ್ಯ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಕಾಣಿಸಿಕೊಂಡಿದ್ದ H5N1 ಹಕ್ಕಿಜ್ವರದ ಭೀತಿಯನ್ನು ಹತ್ತಿಕ್ಕುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಆರೋಗ್ಯ ಮತ್ತು ಪಶುಪಾಲನಾ ಇಲಾಖೆಯ ಜಂಟಿ ಕಾರ್ಯಾಚರಣೆಯು 10 ದಿನಗಳ ತೀವ್ರ ನಿಗಾವಹಿಕೆಯ ನಂತರ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಈ ಭಾಗದಲ್ಲಿ ನೈರ್ಮಲೀಕರಣ ಪ್ರಮಾಣಪತ್ರ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಯಶಸ್ವಿ ಕಾರ್ಯಾಚರಣೆ ಮತ್ತು ತಪಾಸಣೆ:
ಸೋಂಕು ಪತ್ತೆಯಾದ ತಕ್ಷಣ 10 ಕಿ.ಮೀ ವ್ಯಾಪ್ತಿಯ 22 ಗ್ರಾಮಗಳ ಸುಮಾರು 28,172 ಜನರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಕ್ಯಾರಂಟೈನ್‌ನಲ್ಲಿದ್ದ ಸಿಬ್ಬಂದಿಗಳ ಪೈಕಿ ಯಾರಿಗೂ ಸೋಂಕು ತಗುಲಿಲ್ಲ ಎಂದು ವರದಿಗಳು ದೃಢಪಡಿಸಿವೆ. ಪ್ರಸ್ತುತ ಈ ಭಾಗದಲ್ಲಿ ಯಾವುದೇ ಮಾನವ ಹಕ್ಕಿಜ್ವರ ಪ್ರಕರಣಗಳು ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆಯಾಗಿ ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳಿಗೆ ಐಎಲ್‌ಐ (ILI) ಮತ್ತು ಸಾರಿ (SARI) ಪ್ರಕರಣಗಳ ಮೇಲೆ ನಿರಂತರ ನಿಗಾ ಇಡಲು ಸೂಚಿಸಲಾಗಿದೆ.
3 ತಿಂಗಳು ನಿಗಾವಹಿಕೆ:
ಪಶುಪಾಲನಾ ಇಲಾಖೆಯು ನೈರ್ಮಲೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ಮುಂದಿನ 90 ದಿನಗಳವರೆಗೆ ಯಾವುದೇ ಕೋಳಿ ಸಾಕಾಣಿಕೆ ಚಟುವಟಿಕೆಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗಿದೆ. ಈ ಅವಧಿಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಫಾರ್ಮ್ ಪ್ರದೇಶದಲ್ಲಿ ಧೂಮೀಕರಣ (Fumigation) ಮತ್ತು ಸಿಂಪಡಣೆ ಮೂಲಕ ಶುದ್ಧೀಕರಣ ಪ್ರಕ್ರಿಯೆ ಮುಂದುವರಿಯಲಿದೆ.
ಸಾರ್ವಜನಿಕರಿಗೆ ಮಾರ್ಗಸೂಚಿಗಳು:
ಅನಾರೋಗ್ಯ ಅಥವಾ ಸತ್ತ ಕೋಳಿಗಳ ಮಾಂಸ ಅಥವಾ ಮೊಟ್ಟೆಗಳನ್ನು ಮುಟ್ಟಬಾರದು ಹಾಗೂ ಸೇವಿಸಬಾರದು.
ಅಸಹಜವಾಗಿ ಪಕ್ಷಿಗಳು ಸತ್ತಿರುವುದು ಕಂಡುಬಂದಲ್ಲಿ ಕೂಡಲೇ ಪಶುವೈದ್ಯರಿಗೆ ಮಾಹಿತಿ ನೀಡಬೇಕು.
ಮಾಂಸ ಮತ್ತು ಮೊಟ್ಟೆಗಳನ್ನು ಕಡ್ಡಾಯವಾಗಿ ಚೆನ್ನಾಗಿ ಬೇಯಿಸಿ ಸೇವಿಸಬೇಕು, ಇದು ವೈರಸ್‌ಗಳನ್ನು ನಿಷ್ಕ್ರಿಯಗೊಳಿಸುತ್ತದೆ.
ಅನಗತ್ಯ ಆತಂಕ ಬೇಡ, ಅಧಿಕೃತ ಮಾಹಿತಿಯನ್ನು ಮಾತ್ರ ನಂಬಿ ಎಂದು ಇಲಾಖೆ ತಿಳಿಸಿದೆ.
ಅಗತ್ಯವಿರುವ ಪಿಪಿಇ ಕಿಟ್, ಮಾಸ್ಕ್ ಹಾಗೂ ಔಷಧಿಗಳ ದಾಸ್ತಾನು ಸಿದ್ಧವಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ.

