ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಗಜಪಡೆಗೆ ಆನೆಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆ ಮಹತ್ವದ ತೀರ್ಮಾನ ಕೈಗೊಂಡಿದೆ. ತನ್ನ ಉಗ್ರ ನಡವಳಿಕೆಯಿಂದ ಸದಾ ಸುದ್ದಿಯಾಗುತ್ತಿದ್ದ ‘ಕಂಜನ್’ ಆನೆಗೆ ದಸರಾ ಪಡೆಯಿಂದ ಶಾಶ್ವತವಾಗಿ ಗೇಟ್ ಪಾಸ್ ನೀಡಲಾಗಿದೆ. ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಸಹವರ್ತಿ ಆನೆಯ ಮೇಲೆ ಕಂಜನ್ ನಡೆಸಿದ ಭೀಕರ ದಾಳಿಯೇ ಈ ಕಠಿಣ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ.
ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳನ್ನು ನದಿಗೆ ಕರೆದೊಯ್ದಿದ್ದಾಗ ‘ಕಂಜನ್’ ಹಾಗೂ ‘ಮಾರ್ತಾಂಡ’ ಆನೆಗಳ ನಡುವೆ ಭೀಕರ ಕಾಳಗ ನಡೆದಿತ್ತು. ರೊಚ್ಚಿಗೆದ್ದ ಕಂಜನ್ ತನ್ನ ಹರಿತವಾದ ದಂತಗಳಿಂದ 44 ವರ್ಷದ ಮಾರ್ತಾಂಡ ಆನೆಯ ಹೊಟ್ಟೆ ಹಾಗೂ ಕಾಲಿನ ಭಾಗಕ್ಕೆ ತೀವ್ರವಾಗಿ ಚುಚ್ಚಿತ್ತು. ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡು ಆಂತರಿಕ ರಕ್ತಸ್ರಾವದಿಂದ ಬಳಲುತ್ತಿದ್ದ ಮಾರ್ತಾಂಡ ಆನೆಗೆ ಪಶುವೈದ್ಯರು ತುರ್ತು ಚಿಕಿತ್ಸೆ ನೀಡಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ತಾಂಡ ಸಾವನ್ನಪ್ಪಿದೆ.
ಹಳೆಯ ಇತಿಹಾಸ ಹಾಗೂ ಸುರಕ್ಷತೆಯ ಆತಂಕ
ಕಂಜನ್ ಆನೆಯು ಈ ಹಿಂದೆಯೂ ಮೈಸೂರು ಅರಮನೆ ಆವರಣದಲ್ಲಿ ದಸರಾ ತಾಲೀಮಿನ ವೇಳೆ ಮತ್ತೊಂದು ಆನೆಯೊಂದಿಗೆ ಜಗಳವಾಡಿತ್ತು. ಆ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಸಾರ್ವಜನಿಕ ರಸ್ತೆಗೆ ಓಡಿಹೋಗಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿತ್ತು. ದಸರಾ ಮಹೋತ್ಸವದ ಸಂದರ್ಭದಲ್ಲಿ ಲಕ್ಷಾಂತರ ಪ್ರವಾಸಿಗರು ಆಗಮಿಸುವುದರಿಂದ, ಇಂತಹ ಆಕ್ರಮಣಕಾರಿ ಗುಣ ಹೊಂದಿರುವ ಆನೆಯನ್ನು ಜಂಬೂ ಸವಾರಿಯಲ್ಲಿ ಬಳಸುವುದು ಅತ್ಯಂತ ಅಪಾಯಕಾರಿ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ಪ್ರವಾಸಿಗರ ಹಾಗೂ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಕಂಜನ್‌ನನ್ನು ದಸರಾ ಗಜಪಡೆಯಿಂದ ದೂರ ಇಡಲು ನಿರ್ಧರಿಸಲಾಗಿದೆ.
ಕಂಜನ್‌ಗೆ ದಸರಾ ನಿಷೇಧ:
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ದುಬಾರೆ ಘಟನೆಗೆ ಕಾರಣವಾದ ಆಕ್ರಮಣಕಾರಿ ನಡವಳಿಕೆಯ ಕಂಜನ್ ಆನೆಯನ್ನು ಮುಂಬರುವ ಯಾವುದೇ ಮೈಸೂರು ದಸರಾ ಉತ್ಸವ ಹಾಗೂ ಜಂಬೂ ಸವಾರಿಯಲ್ಲಿ ಬಳಸದಂತೆ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದ್ದು ಅದನ್ನು ಇಲಾಖೆ ಜಾರಿಗೆ ತಂದು ಆದೇಶ ಹೊರಡಿಸಿದೆ.

