Sat. Jun 6th, 2026

ಅನ್ನದಾತರ ಸಮಾಧಿಯ ಮೇಲೆ ಸರ್ಕಾರ ಸಮರ್ಪಣಾ ಸಮಾವೇಶ ನಡೆಸಿದೆ:ಕುಮಾರಸ್ವಾಮಿ ಕಿಡಿ

Share this with Friends

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕನ್ನಡಿಗರ ತಲಾ ಆದಾಯ ಹೆಚ್ಚಾಗಿದೆ ಎಂದು ಸಂಭ್ರಮಿಸುತ್ತಿರುವ ಬೆನ್ನಲ್ಲೇ, ಕಳೆದ ಎರಡು ವರ್ಷಗಳಲ್ಲಿ ಸರಣಿಯಾಗಿ ನಡೆದಿರುವ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಸರ್ಕಾರ ಜಾಣ್ಮೆಯಿಂದ ಮುಚ್ಚಿಟ್ಟಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರವಾಗಿ ಆರೋಪಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ “ಅನ್ನದಾತರ ಆತ್ಮಹತ್ಯೆ ಹೆಚ್ಚಳ” ಎನ್ನುವ ವರದಿಯನ್ನು ಕಂಡು ತಮಗೆ ತೀವ್ರ ಆಘಾತವಾಗಿದೆ ಎಂದರು. ಈ ವರದಿ ಪ್ರಕಟವಾಗಿ ಹನ್ನೆರಡು ದಿನಗಳೇ ಕಳೆದಿದ್ದರೂ, ಕೇವಲ ಸಾಧನಾ ಸಮಾವೇಶಗಳನ್ನು ಮಾಡುವುದರಲ್ಲೇ ಬ್ಯುಸಿಯಾಗಿರುವ ಸರ್ಕಾರಕ್ಕೆ ರೈತರ ಹಿತಾಸಕ್ತಿ ಬೇಕಾಗಿಲ್ಲ ಎಂದು ಅವರು ಕಿಡಿಕಾರಿದರು.

NCRB ಅಂಕಿ ಅಂಶಗಳನ್ನು ಬಿಚ್ಚಿಟ್ಟ ಹೆಚ್‌ಡಿಕೆ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಅಧಿಕೃತ ಅಂಕಿ ಅಂಶಗಳನ್ನು ಉಲ್ಲೇಖಿಸಿದ ಕೇಂದ್ರ ಸಚಿವರು, ರಾಜ್ಯದಲ್ಲಿ 2023ರಲ್ಲಿ 2,423 ಹಾಗೂ 2024ರಲ್ಲಿ 2,971 ರೈತರು ಮತ್ತು ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇವಲ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು 5,394 ರೈತರು ಜೀವ ಕಳೆದುಕೊಂಡಿದ್ದು, ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಕರ್ನಾಟಕ ಇಡೀ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ರಾಜ್ಯ ಸರ್ಕಾರಕ್ಕೆ ಈ ಭೀಕರ ಅಂಕಿ ಅಂಶಗಳು ಗೊತ್ತಿದ್ದರೂ ಮುಚ್ಚಿಟ್ಟಿದೆಯೇ ಎಂದು ಅವರು ಪ್ರಶ್ನಿಸಿದರು.

ಇಷ್ಟು ಬೃಹತ್ ಪ್ರಮಾಣದ ಅನ್ನದಾತರ ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ಮರೆಮಾಚಿ, ಇವರು ತುಮಕೂರಿನಲ್ಲಿ ಮಾಡಿದ್ದು “ಸಾಧನಾ ಸಮರ್ಪಣಾ” ಸಮಾವೇಶವೇ ಅಥವಾ “ರೈತರ ಆತ್ಮಹತ್ಯೆಗಳ ಸಮರ್ಪಣಾ” ಸಮಾವೇಶವೇ ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡರು

ಸಾಧನಾ ಸಮಾವೇಶದ ಹೆಸರಲ್ಲಿ ಇಲಾಖೆಗಳ ದುರ್ಬಳಕೆ:  “ಕೇವಲ ಹತ್ತು ನಿಮಿಷಗಳ ಕಾಲ ಮಳೆ ಬಂದರೆ ಸಾಕು, ಇಲ್ಲಿನ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ನೀರು ನಿಲ್ಲುತ್ತದೆ. ಇಂತಹ ಮೂಲಸೌಕರ್ಯದ ಕೊರತೆ ಇರುವಾಗ ಸರ್ಕಾರ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣವನ್ನು ಸಮಾವೇಶಕ್ಕಾಗಿ ದುಂದುವೆಚ್ಚ ಮಾಡುತ್ತಿದೆ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಆಡಳಿತ ಪಕ್ಷದ ಕಾರ್ಯಕ್ರಮಗಳಿಗೆ ಜನ ಸಾಮಾನ್ಯರು ಸ್ವಯಂಪ್ರೇರಿತರಾಗಿ ಬರುತ್ತಿಲ್ಲ. ಹೀಗಾಗಿ ಅಧಿಕಾರಿಗಳಿಗೆ ಇಂತಿಷ್ಟು ಜನರನ್ನು ಕರೆತರಲೇಬೇಕೆಂದು ಕಡ್ಡಾಯ ಗುರಿ (ಟಾರ್ಗೆಟ್) ನೀಡಲಾಗಿದ್ದು, ಇಡೀ ಸರ್ಕಾರಿ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಗ್ಯಾರಂಟಿ ಹೆಸರಿನಲ್ಲಿ ಹಬ್ಬ; ರೈತರ ಬದುಕು ಸಮಾಧಿ

“ಈ ಸರ್ಕಾರವು ಸರಣಿಯಾಗಿ ಸಾಯುತ್ತಿರುವ ರೈತರ ಜೀವನದ ಮೇಲೆ ಸಮಾಧಿ ಕಟ್ಟಿ, ಅದರ ಮೇಲೆ ತಮ್ಮ ರಾಜಕೀಯ ವೈಭವದ ಪ್ರದರ್ಶನ ಮಾಡುತ್ತಿದೆ. ಇಂತಹ ಜನವಿರೋಧಿ ಧೋರಣೆಯನ್ನು ನಾಡಿನ ಜನತೆ ಎಂದಿಗೂ ಕ್ಷಮಿಸುವುದಿಲ್ಲ” ಎಂದು ಹೆಚ್‌ಡಿಕೆ ತೀಕ್ಷ್ಣವಾಗಿ ನುಡಿದರು. ಒಂದೆಡೆ ಸಾಲಬಾಧೆಯಿಂದ ಅನ್ನದಾತರು ನಿತ್ಯವೂ ಜೀವ ಕಳೆದುಕೊಳ್ಳುತ್ತಿದ್ದರೆ, ಇತ್ತ ಸರ್ಕಾರ ಮಾತ್ರ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಹಬ್ಬ ಆಚರಿಸುತ್ತಿದೆ. ಸರ್ಕಾರದ ಗ್ಯಾರಂಟಿಗಳು ನಿಜವಾಗಿಯೂ ಬಡವರ ಮತ್ತು ರೈತರ ಬದುಕನ್ನು ಹಸನು ಮಾಡಿದ್ದರೆ, ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದು ಅವರು ಪ್ರಶ್ನಿಸಿದರು.

ಕಂದಾಯ ಇಲಾಖೆಯಲ್ಲಿ ದೂರುಗಳ ಸರಣಿ: ಪುಕ್ಕಟೆ ಪ್ರಚಾರ

ಕಂದಾಯ ಇಲಾಖೆಯ ಸಾಧನೆಗಳ ಪ್ರಚಾರದ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅವರು, ಕಳೆದ ವರ್ಷವೂ ಹಕ್ಕು ಪತ್ರಗಳ ವಿತರಣೆಯ ಬಗ್ಗೆಯೇ ದೊಡ್ಡದಾಗಿ ಮಾತನಾಡಿದ್ದರು. ಆದರೆ ನಾವು ಬೇರೆ ಬೇರೆ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಾಗ ಮತ್ತು ರೈತರು ನಮ್ಮನ್ನು ಭೇಟಿಯಾದಾಗ ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ ಹಾಗೂ ಗೊಂದಲಗಳ ಬಗ್ಗೆಯೇ ಹೆಚ್ಚಾಗಿ ಅಳಲು ತೋಡಿಕೊಳ್ಳುತ್ತಾರೆ ಎಂದರು.

ಸರ್ಕಾರವು ಈಗ “ಭೂ ಗ್ಯಾರಂಟಿ” ಎಂಬ ಹೊಸ ಘೋಷಣೆಯಡಿ 6ನೇ ಗ್ಯಾರಂಟಿ ನೀಡುತ್ತಿದ್ದೇವೆ ಎಂದು ಪುಕ್ಕಟೆ ಪ್ರಚಾರ ಪಡೆಯಲು ಹವಣಿಸುತ್ತಿದೆ. ಆದರೆ ರಾಜ್ಯದಲ್ಲಿ ನಿರಂತರವಾಗಿ ವರದಿಯಾಗುತ್ತಿರುವ ಅನ್ನದಾತರ ಸರಣಿ ಆತ್ಮಹತ್ಯೆ ಪ್ರಕರಣಗಳೇ ಈ ಸರ್ಕಾರದ ಆಡಳಿತ ಯೋಗ್ಯತೆಯನ್ನು ಸಾರಿ ಸಾರಿ ಹೇಳುತ್ತಿವೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು

ಅಖಂಡ ಶ್ರೀನಿವಾಸ ಮೂರ್ತಿ ಜೆಡಿಎಸ್ ಸೇರುತ್ತಾರೆ:

ಎರಡು ಬಾರಿ ಶಾಸಕರಾಗಿ ಗೆದ್ದಿರುವ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಮಂಗಳವಾರ ಬೆಳಗ್ಗೆ ಭೇಟಿ ನೀಡಿದ್ದಾಗಿ ಸಚಿವ ಕುಮಾರಸ್ವಾಮಿ ಅವರು ತಿಳಿಸಿದರು. ಇದೊಂದು ಗೌರವಪೂರ್ವಕ ಭೇಟಿ ಎಂದ ಅವರು, ಜೆಡಿಎಸ್ ಪಕ್ಷ ಸೇರಲು ಅವರು ಉತ್ಸುಕರಾಗಿದ್ದಾರೆ. ಸದ್ಯದಲ್ಲೇ ದಿನಾಂಕ ನಿಗದಿ ಮಾಡಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು. ಪಕ್ಷದ ಬಲವರ್ಧನೆಗೆ ನಾವು ಆದ್ಯತೆ ಕೊಟ್ಟು ಕೆಲಸ ಮಾಡುತ್ತಿದ್ದೇವೆ. ಈಗಿನ ತಲೆ ಪಕ್ಷಕ್ಕೆ ಶಕ್ತಿ ತುಂಬುತ್ತಿದ್ದೇವೆ. ಅದರ ಭಾಗವಾಗಿ ಅಖಂಡ ಶ್ರೀನಿವಾಸ ಮೂರ್ತಿ ಅವರು ಜೆಡಿಎಸ್ ಸೇರುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು. ಪಕ್ಷದ ಕಚೇರಿಗೆ ಆಗಮಿಸುವುದಕ್ಕೂ ಮುನ್ನ ಸಚಿವರು ಬೆಂಗಳೂರಿನ ಕಾವಲ್ ಭೈರಸಂದ್ರದಲ್ಲಿರುವ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಭೇಟಿ ನೀಡಿದ್ದರು. ಸುಮಾರು ಒಂದು ತಾಸಿನ ಈ ಭೇಟಿ ಸಂದರ್ಭದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಮಲ್ಲೇಶ್ ಬಾಬು, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಮ್. ರಮೇಶ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಸೇರಿದಂತೆ ಅನೇಕ ಮುಖಂಡರು ಸಚಿವರ ಜೊತೆಯಲ್ಲಿ ಇದ್ದರು.

 


Share this with Friends

Related Post