ಬೆಂಗಳೂರು: “ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದ ಜನ ಹೆಮ್ಮೆಪಡುವಂತಹ ಯಾವ ಕೆಲಸವನ್ನು ನೀವು ಮಾಡಿದ್ದೀರಿ ಎಂಬುದನ್ನು ಕಾಂಗ್ರೆಸ್ ನಾಯಕರು ಬಹಿರಂಗಪಡಿಸಲಿ” ಎಂದು ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಸಾಧನಾ ಸಮಾವೇಶದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಹಗರಣಗಳ ಸರಣಿ ಆರೋಪಗಳನ್ನು ಹೊರಿಸಿದ ಸಿ.ಟಿ. ರವಿ, “ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂಪಾಯಿ ಲೂಟಿ ಹೊಡೆದು, ಇಲಾಖೆಯ ಸಚಿವರೇ ಜೈಲಿಗೆ ಹೋಗಿರುವುದು ಈ ಸರ್ಕಾರದ ಸಾಧನೆಯೇ? ದಲಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಎಸ್‌ಸಿಪಿ ಮತ್ತು ಟಿಎಸ್‌ಪಿ (SCP-TSP) ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ನಿಮ್ಮ ಸಾಧನೆಯೇ?” ಎಂದು ಪ್ರಶ್ನಿಸಿದರು.
ರೈತರಿಗೆ ವಿದ್ಯುತ್ ಇಲ್ಲ, ನೌಕರರ ಆತ್ಮಹತ್ಯೆ
ರಾಜ್ಯದ ವಿವಿಧ ವಲಯಗಳ ಬಿಕ್ಕಟ್ಟನ್ನು ಉಲ್ಲೇಖಿಸಿದ ಅವರು, “ಸರ್ಕಾರದ ತಪ್ಪು ನೀತಿಗಳಿಂದಾಗಿ ಇಂದು ಕೆಎಸ್‌ಆರ್‌ಟಿಸಿ (KSRTC) ನೌಕರರು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಇತ್ತ ಅನ್ನದಾತರಿಗೆ ದಿನಕ್ಕೆ ಕನಿಷ್ಠ 3 ಗಂಟೆಯೂ ಸಹ ಸಮರ್ಪಕವಾಗಿ 3 ಫೇಸ್ ವಿದ್ಯುತ್ ಪೂರೈಕೆ ಮಾಡಲು ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸರ್ಕಾರಿ ನೌಕರರು ಸರಣಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಶೇಕಡಾ 60 ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಇವೆಲ್ಲವೂ ಕಾಂಗ್ರೆಸ್ ಸರ್ಕಾರದ ಸಾಧನೆಗಳೇ?” ಎಂದು ವ್ಯಂಗ್ಯವಾಡಿದರು.
ಸಿಎಂ ಕುರ್ಚಿಗೇ ಗ್ಯಾರಂಟಿ ಇಲ್ಲ!
ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಚಾರದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿ.ಟಿ. ರವಿ, “ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಾವೇ ಇನ್ನು ಎಷ್ಟು ದಿನ ಸಿಎಂ ಕುರ್ಚಿಯಲ್ಲಿ ಇರುತ್ತೇನೆ ಎನ್ನುವ ಗ್ಯಾರಂಟಿ ಇಲ್ಲ. ಸ್ವತಃ ಮುಖ್ಯಮಂತ್ರಿಗಳ ಸ್ಥಾನಕ್ಕೇ ಗ್ಯಾರಂಟಿ ಇಲ್ಲದಿರುವಾಗ, ಇವರು ರಾಜ್ಯದ ಜನರಿಗೆ ಇನ್ಯಾವ ಗ್ಯಾರಂಟಿ ನೀಡಲು ಸಾಧ್ಯ?” ಎಂದು ಲೇವಡಿ ಮಾಡಿದರು. ಮೂರು ವರ್ಷಗಳ ಅವಧಿಯಲ್ಲಿ ಇಡೀ ದೇಶದ ಮುಂದೆ ಕರ್ನಾಟಕ ತಲೆತಗ್ಗಿಸುವಂತಹ ಪರಿಸ್ಥಿತಿಯನ್ನು ಸರ್ಕಾರ ನಿರ್ಮಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಸಾಲ 10 ಲಕ್ಷ ಕೋಟಿಗೆ ಏರಿಕೆ: ಸೆಸ್ ಹೆಸರಲ್ಲಿ ಲೂಟಿ
ಆರ್ಥಿಕ ಪರಿಸ್ಥಿತಿಯ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿ.ಟಿ. ರವಿ, “ಪ್ರಸ್ತುತ ಕರ್ನಾಟಕ ರಾಜ್ಯದ ಸಮಗ್ರ ಸಾಲದ ಮೊತ್ತ ಬರೋಬ್ಬರಿ 10 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಬೇರೆ ಯಾವುದೇ ಅಭಿವೃದ್ಧಿ ಕೆಲಸಗಳಿಲ್ಲದೆ, ಕೇವಲ ಸಾಲದ ಹಣದಿಂದಲೇ ಗ್ಯಾರಂಟಿ ಯೋಜನೆಗಳನ್ನು ಮುನ್ನಡೆಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಇವರು ಹೆಮ್ಮೆ ಪಟ್ಟುಕೊಳ್ಳುವಂತಹ ಸಾಧನೆ ಏನಿದೆ?” ಎಂದು ಪ್ರಶ್ನಿಸಿದರು.
ಇದೇ ವೇಳೆ ಇಂಧನ ಬೆಲೆ ಏರಿಕೆಯ ಕುರಿತು ಮಾತನಾಡಿದ ಅವರು, “ಕೇಂದ್ರ ಸರ್ಕಾರ ತೈಲ ಬೆಲೆ ಇಳಿಸಿದ ಮೇಲೂ ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮೂರು ಬಾರಿ ಸೆಸ್ (Cess) ವಿಧಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ತೆರಿಗೆಯ ವಿಷಯದಲ್ಲಿ ಯಾರ ಕೊಡುಗೆ ಎಷ್ಟು ಎಂಬುದರ ಬಗ್ಗೆ ಬಹಿರಂಗ ಚರ್ಚೆಯಾಗಲಿ. ಮೊದಲು ರಾಜ್ಯ ಸರ್ಕಾರ ವಿಧಿಸಿರುವ ಸೆಸ್ ದರವನ್ನು ಇಳಿಸಲಿ” ಎಂದು ಸವಾಲು ಹಾಕಿದರು.
ಉಪಚುನಾವಣೆಯಲ್ಲಿ ಜನಾದೇಶದ ಖರೀದಿ!
ಇತ್ತೀಚಿನ ಉಪಚುನಾವಣೆಗಳ ಫಲಿತಾಂಶದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರವಿ, “ಉಪಚುನಾವಣೆಯ ಗೆಲುವಿನ ಅಸಲಿ ಮರ್ಮ ಏನೆಂಬುದನ್ನು ಖಾಸಗಿಯಾಗಿ ಕೇಳಿದರೆ ಸ್ವತಃ ಕಾಂಗ್ರೆಸ್ ನಾಯಕರೇ ಒಪ್ಪಿಕೊಳ್ಳುತ್ತಾರೆ. ಆಡಳಿತಾರೂಢ ಸರ್ಕಾರವು ತನ್ನ ಸಂಪೂರ್ಣ ಅಧಿಕಾರ, ಸಂಪತ್ತು ಮತ್ತು ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಂಡು ಜನಾದೇಶವನ್ನು ಹಣದ ಬಲದಿಂದ ಖರೀದಿ ಮಾಡುತ್ತದೆ” ಎಂದು ಗಂಭೀರವಾಗಿ ಆರೋಪಿಸಿದರು.
ಹಳೆಯ ಇತಿಹಾಸವನ್ನು ನೆನಪಿಸಿದ ಅವರು, “ಹಿಂದೆ ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಇದೇ ರೀತಿ ಗೆದ್ದಿತ್ತು. ಆದರೆ ಕೇವಲ ಐದೇ ತಿಂಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನ ಇವರನ್ನು ಸೋಲಿಸಿ ಮನೆಗೆ ಕಳುಹಿಸಿದರು. ಅಷ್ಟೇ ಏಕೆ, ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಸೋಲನುಭವಿಸಿದ್ದನ್ನು ಇವರು ಮರೆತಿದ್ದಾರೆಯೇ?” ಎಂದು ತಿರುಗೇಟು ನೀಡಿದರು

