Sat. Jun 6th, 2026

ವೈದ್ಯಕೀಯ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ: ದೂರು ನೀಡಲು ಪ್ರವೇಶ ಮೇಲ್ವಿಚಾರಣಾ ಸಮಿತಿ ಸೂಚನೆ

Share this with Friends

ಬೆಂಗಳೂರು: ರಾಜ್ಯದ ಕೆಲವು ವೈದ್ಯಕೀಯ ಕಾಲೇಜುಗಳು ಯುಜಿ (UG) ಮತ್ತು ಪಿಜಿ (PG) ಪ್ರವೇಶಾತಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಕಾನೂನುಬಾಹಿರವಾಗಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇಂತಹ ಕಾಲೇಜುಗಳ ವಿರುದ್ಧ ದೂರು ನೀಡುವಂತೆ ಪ್ರವೇಶ ಮೇಲ್ವಿಚಾರಣಾ ಸಮಿತಿ (AOC) ಪ್ರಕಟಣೆ ಹೊರಡಿಸಿದೆ.

ವಿಶ್ವವಿದ್ಯಾಲಯದ ಶುಲ್ಕ ಡಬಲ್ ವಸೂಲಿ:

ವಿದ್ಯಾರ್ಥಿಗಳು ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಸೀಟು ಹಂಚಿಕೆಯ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಶುಲ್ಕವನ್ನು ಪಾವತಿಸಿದ್ದಾರೆ. ಈ ಶುಲ್ಕವನ್ನು ಕೆಇಎ ನೇರವಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (RGUHS) ವರ್ಗಾಯಿಸುತ್ತದೆ. ಆದಾಗ್ಯೂ, ಕೆಲವು ಕಾಲೇಜುಗಳು ಪ್ರವೇಶಾತಿ ಸಮಯದಲ್ಲಿ ವಿದ್ಯಾರ್ಥಿಗಳಿಂದ ಮತ್ತೊಮ್ಮೆ ಈ ಶುಲ್ಕವನ್ನು ವಸೂಲಿ ಮಾಡುತ್ತಿರುವುದು ಪತ್ತೆಯಾಗಿದೆ.

ನಿಯಮಬಾಹಿರವಾಗಿ ‘ಕೌಶನ್ ಮನಿ’ ವಸೂಲಿ:

ರಾಜ್ಯ ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ನಡುವಿನ ಪರಸ್ಪರ ಒಪ್ಪಂದದ ಪ್ರಕಾರ, ಯಾವುದೇ ‘ಕೌಶನ್ ಮನಿ’ (Caution Money) ಡೆಪಾಸಿಟ್ ಅಥವಾ ಇತರೆ ಅನಧಿಕೃತ ಶುಲ್ಕಗಳನ್ನು ಪಡೆಯಲು ಅವಕಾಶವಿಲ್ಲ. ಆದರೂ ಕೆಲವು ಕಾಲೇಜುಗಳು ವಿದ್ಯಾರ್ಥಿಗಳಿಗೆ ಈ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿವೆ.

ಅನುಮತಿ ಇರುವ ಅಧಿಕೃತ ಶುಲ್ಕಗಳು ಮಾತ್ರ:

ಒಪ್ಪಂದದ ಪ್ರಕಾರ ಕಾಲೇಜುಗಳು ನಿಗದಿಪಡಿಸಿದ ಕೋರ್ಸ್ ಶುಲ್ಕದ ಹೊರತಾಗಿ ಕೇವಲ ಈ ಕೆಳಗಿನ ಎರಡು ಶುಲ್ಕಗಳನ್ನು ಮಾತ್ರ ಪಡೆಯಲು ಅವಕಾಶವಿದೆ:

ಸ್ಕಿಲ್ ಲ್ಯಾಬ್ ಶುಲ್ಕ (Skill Lab Fee): ರೂ. 30,000/-

ಇತರೆ ಶುಲ್ಕಗಳು (Misc. Fee): ರೂ. 15,000/-

ದೂರು ಸಲ್ಲಿಸಲು ಸಮಿತಿ ಕರೆ:

ಯಾವುದೇ ವೈದ್ಯಕೀಯ ಕಾಲೇಜುಗಳು ಒಪ್ಪಂದಕ್ಕೆ ವಿರುದ್ಧವಾಗಿ ಹೆಚ್ಚುವರಿ ಶುಲ್ಕ, ಕೌಶನ್ ಮನಿ ಅಥವಾ ಇತರೆ ಯಾವುದೇ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟರೆ ಅಥವಾ ಈಗಾಗಲೇ ಹಣ ವಸೂಲಿ ಮಾಡಿದ್ದರೆ, ಅಂತಹ ಸಂತ್ರಸ್ತ ವಿದ್ಯಾರ್ಥಿಗಳು ಮತ್ತು ಪೋಷಕರು ನ್ಯಾಯಕ್ಕಾಗಿ ತಕ್ಷಣವೇ ಪ್ರವೇಶ ಮೇಲ್ವಿಚಾರಣಾ ಸಮಿತಿಯನ್ನು (Admission Overseeing Committee) ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದು ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ತಿಳಿಸಿದ್ದಾರೆ.

ದೂರು ಸಲ್ಲಿಸಬೇಕಾದ ವಿಳಾಸ ಮತ್ತು ಸಂಪರ್ಕ ಮಾಹಿತಿ:

ವಿಳಾಸ: ಅಧ್ಯಕ್ಷರು, ಪ್ರವೇಶ ಮೇಲ್ವಿಚಾರಣಾ ಸಮಿತಿ, ಕೆ.ಇ.ಎ. ಕಟ್ಟಡ, 2ನೇ ಮಹಡಿ, 18ನೇ ಅಡ್ಡರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು – 560012.

ದೂರವಾಣಿ ಸಂಖ್ಯೆ: 080 – 23466844

ಇ-ಮೇಲ್: aoc.kea@gmail.com

 


Share this with Friends

Related Post