ಮೈಸೂರು, ಮಾ.11: ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಎಲ್ಲಾ ಇಲಾಖೆಗಳ ಸಮನ್ವಯ ಪ್ರಮುಖ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ.ದಿನೇಶ್ ತಿಳಿಸಿದರು.
ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿ, ಲೈಂಗಿಕ ದೌರ್ಜನ್ಯ ಸೇರಿದಂತೆ ಮಕ್ಕಳ ಮೇಲೆ ಯಾವುದೇ ದೌರ್ಜನ್ಯವಾದರೂ ಅದು ಸಾಂವಿಧಾನಿಕವಾದ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅವರು ಹೇಳಿದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್ ಇಲಾಖೆ ಇಂದು ಜಿಲ್ಲಾ ಪೋಲಿಸ್ ವರೀಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಾಲನ್ಯಾಯಕಾಯ್ದೆ, ಮಿಷನ್ ವಾತ್ಸಲ್ಯ, ಬಾಲ್ಯವಿವಾಹ ನಿಷೇಧ ಕಾಯ್ದೆಗಳ ಕುರಿತ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಮೇಲೆ ಆಗುವ ದೌರ್ಜನ್ಯಗಳ ವಿರುದ್ಧ ಕ್ರಮಗಳನ್ನು ಯಾವ ಯಾವ ಇಲಾಖೆಗಳು ತೆಗೆದುಕೊಳ್ಳಬೇಕೆಂಬುದನ್ನು ಕಾನೂನಿನಲ್ಲಿ ಸೂಚಿಸಲಾಗಿದೆ.
ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈ ಗೊಂಡರೆ ಮಾತ್ರ ಮುಂದೆ ಕಾನೂನನ್ನು ಬಳಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ಸಮನ್ವಯತೆ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಮಕ್ಕಳೊಂದಿಗೆ ಸಂವೇದನೆ ಶೀಲತೆಯಿಂದ ವರ್ತಿಸಬೇಕು,ಆ ಸೂಕ್ಷ್ಮತೆಯನ್ನು ನಾವು ಅಳವಡಿಸಿಕೊಳ್ಳದಿದ್ದರೆ ಮಕ್ಕಳ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವಲ್ಲಿ ವಿಫಲರಾಗುತ್ತೇವೆ ಎಂದು ಹೇಳಿದರು.
ಕೆಲಸದ ಒತ್ತಡದ ನಡುವೆಯೂ ಮಕ್ಕಳ ಮೇಲಿನ ಯಾವುದೇ ಪ್ರಕರಣ ಬಂದರೂ ನಾವು ಸಂವೇದನ ಶೀಲತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಸೂಕ್ಷರೀತಿಯಲ್ಲಿ ತ್ವರಿತವಾಗಿ ಕ್ರಮವನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಮಕ್ಕಳು ಮತ್ತೊಂದು ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಕ್ಕಳ ದೌರ್ಜನ್ಯ ತಡೆಯಲು ಹಲವಾರು ಕಾನೂನುಗಳಿದ್ದರೂ ಸಹ ಎಲ್ಲೋ ಒಂದು ಕಡೆ ನಾವೆಲ್ಲ ಎಡವುತ್ತಿದ್ದೇವೆ ಎಂದು ಪಿರಿಯಾಪಟ್ಟಣದ ಪ್ರಕರಾಣವನ್ನು ಉದಾಹರಿಸಿದರು.
ಮೈಸೂರಿನಂತಹ ನಗರ ಪ್ರದೇಶಗಳಲ್ಲಿ ಹೀಗಾಗುತ್ತಿರುವುದು ಆಘಾತಕಾರಿ, ಕಾನೂನು ಸಿ.ಆರ್.ಪಿ.ಸಿ, ಜೆ.ಜೆ ಆ್ಯಕ್ಟ್, ಪೊಕ್ಸೊ ಕಾಯ್ದೆ ಇರಬಹುದು, ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು ಯಾವುದೇ ಮಾಹಿತಿ ಬಂದರೆ ಪ್ರಕರಣ ತ್ವರಿತವಾಗಿ ಪ್ರಕರಣವನ್ನು ದಾಖಲಿಸಿಕೊಳ್ಳಬೇಕೆಂದು ಹೇಳಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಎಸ್.ಮಂಜು ಅವರು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಅಧಿಕಾರಿಗಳು ಕ್ರಿಯಾಶೀರಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಆಯುಕ್ತರಾದ ಎಸ್ ಜಾಹ್ನವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಬಿ.ಎನ್ ಮತ್ತಿತರರು ಹಾಜರಿದ್ದರು.