Fri. Jun 12th, 2026

ಪ್ರಜಾಪ್ರಭುತ್ವದ ಉಳಿವಿಗಾಗಿ ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು: ವಿಧಾನಸೌಧದಲ್ಲಿ ಮಲ್ಲಿಕಾರ್ಜುನ ಖರ್ಗೆ

Share this with Friends

ಬೆಂಗಳೂರು: ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ನಿಷ್ಪಕ್ಷಪಾತವಾಗಿ ಬೆಳೆಯಬೇಕಾದರೆ ಮಾಧ್ಯಮ ರಂಗವು ಯಾವುದೇ ಹಂಗಿಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಸುದೀರ್ಘ ರಾಜಕೀಯ ಪಯಣದ ಅನುಭವಗಳನ್ನು ಹಂಚಿಕೊಂಡರು.”ನನಗೆ ಜೀವನದಲ್ಲಿ ಸತತವಾಗಿ ಸಾರ್ವಜನಿಕ ಸೇವೆ ಮಾಡಲು ಸಿಗುತ್ತಿರುವ ಈ ಅವಕಾಶವು ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ. ಈ ಬಾರಿ 13ನೇ ಸಲ ಜನಪ್ರತಿನಿಯಾಗುವ ಮಹತ್ತರ ಅವಕಾಶ ಲಭಿಸಿದೆ. ಇದಕ್ಕಾಗಿ ಕಲಬುರ್ಗಿ ಜನತೆಗೆ, ಪಕ್ಷದ ಸಮಸ್ತ ಕಾರ್ಯಕರ್ತರಿಗೆ ಹಾಗೂ ನಾಯಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಂದಿರಾಗಾಂಧಿ ಅವರ ಕಾಲದಿಂದ ಹಿಡಿದು ಸೋನಿಯಾ ಗಾಂಧಿ ಅವರವರೆಗೆ ಹೈಕಮಾಂಡ್ ನನಗೆ ಸತತವಾಗಿ ಪ್ರೋತ್ಸಾಹ ನೀಡಿದೆ. ರಾಹುಲ್ ಗಾಂಧಿ ಅವರು ಸಹ ನನ್ನೊಂದಿಗೆ ಅತ್ಯಂತ ಸೌಹಾರ್ದತೆಯಿಂದ ವರ್ತಿಸುತ್ತಾ ಒಟ್ಟಿಗೆ ಕೆಲಸ ಮಾಡಲು ಶಕ್ತಿ ತುಂಬಿದ್ದಾರೆ” ಎಂದು ಖರ್ಗೆ ನೆನಪಿಸಿಕೊಂಡರು.

ಬದಲಾದ ಮಾಧ್ಯಮ ರಂಗ ಹಾಗೂ ಕಾರ್ಪೊರೇಟ್ ನಿಯಂತ್ರಣ:

ತಾವು 1972ರಲ್ಲಿ ಮೊದಲ ಬಾರಿಗೆ ವಿಧಾನಸೌಧಕ್ಕೆ ಕಾಲಿಟ್ಟ ದಿನಗಳನ್ನು ಸ್ಮರಿಸಿದ ಖರ್ಗೆ, “ಕಳೆದ ಆರು ದಶಕಗಳಲ್ಲಿ ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಕಷ್ಟು ಏರುಪೇರು ಮತ್ತು ಬದಲಾವಣೆಗಳನ್ನು ಕಂಡಿದ್ದೇನೆ. ಮುಂಚಿನ ಕಾಲದಲ್ಲಿ ಪತ್ರಕರ್ತರು ಯಾವುದೇ ಪೂರ್ವಗ್ರಹವಿಲ್ಲದೆ, ಅತ್ಯಂತ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದರು. ರಾಜಕಾರಣಿಗಳ ಲೋಪದೋಷಗಳನ್ನು ಎತ್ತಿ ತೋರಿಸುವುದು ಮಾಧ್ಯಮಗಳ ಕರ್ತವ್ಯ ಹೌದು. ಆದರೆ, ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಸದ್ಯ ಮಾಧ್ಯಮಗಳು ಕಾರ್ಪೊರೇಟ್ ಸಂಸ್ಥೆಗಳ ಸಂಪೂರ್ಣ ನಿಯಂತ್ರಣಕ್ಕೆ ಸಿಲುಕಿರುವಂತೆ ಕಾಣಿಸುತ್ತಿವೆ” ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಪೊರೇಟ್‌ ಸಂಸ್ಥೆಗಳಿಗೆ ಪಾಠ ಕಲಿಸುವವರು ಯಾರು?:

ರಾಜಕಾರಣಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಅಥವಾ ತತ್ವ ಸಿದ್ಧಾಂತಗಳ ಅಡಿಯಲ್ಲಿ ಆಡಳಿತ ನಡೆಸದಿದ್ದರೆ ದೇಶದ ಪ್ರಜೆಗಳು ಮುಂಬರುವ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಿ ಅಧಿಕಾರದಿಂದ ದೂರವಿಡುತ್ತಾರೆ. ರಾಜಕೀಯದಲ್ಲಿ ಬದಲಾವಣೆಯ ಈ ಸೌಲಭ್ಯ ಜನಸಾಮಾನ್ಯರ ಕೈಯಲ್ಲಿದೆ. ಆದರೆ, ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವ ಕಾರ್ಪೊರೇಟ್ ಸಂಸ್ಥೆಗಳಿಗೆ ಬುದ್ಧಿ ಹೇಳುವವರು ಯಾರು? ಅವರನ್ನು ಬದಲಾಯಿಸುವ ಶಕ್ತಿ ಯಾರಿಗಿದೆ? ಎಂದು ಖರ್ಗೆ ಅವರು ಇದೇ ವೇಳೆ ಗಂಭೀರ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

 

 


Share this with Friends

Related Post