Fri. Jun 12th, 2026

ಧರ್ಮಸ್ಥಳ ಸನ್ನಿಧಿಗೆ ಕಳಂಕ ತರಲು ದೊಡ್ಡ ಷಡ್ಯಂತ್ರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ಗಂಭೀರ ಆರೋಪ

Share this with Friends

ಬೆಂಗಳೂರು: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸ್ವಾಮಿ ಸನ್ನಿಧಿಗೆ ಕಳಂಕ ತರಲು ಮತ್ತು ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ಕೊಡಲಿ ಪೆಟ್ಟು ಕೊಡಲು ಬಹಳ ದೊಡ್ಡ ಷಡ್ಯಂತ್ರ ನಡೆದಿತ್ತು ಎಂದು ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಭೀರವಾಗಿ ಆರೋಪಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಸಿದ್ದರಾಮಯ್ಯ ನಡೆಗೆ ತೀವ್ರ ಆಕ್ಷೇಪ:

ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಸತ್ಯಾಸತ್ಯತೆಯನ್ನು ಪರಾಮರ್ಶೆ ಮಾಡದೆ, ಯಾರೋ ಬೀದಿಯಲ್ಲಿ ಹೋಗುವವರು ಹೇಳಿಕೆ ನೀಡಿದರೆಂದು ವಿಶೇಷ ತನಿಖಾ ತಂಡಕ್ಕೆ (SIT) ತನಿಖೆಯ ಆದೇಶ ನೀಡಿದ್ದು ಸರಿಯಾದ ಕ್ರಮವಾಗಿರಲಿಲ್ಲ. ಮುಖ್ಯಮಂತ್ರಿಯವರ ಈ ನಿರ್ಧಾರವು ಅಂದೇ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು ಎಂದು ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದರು.

ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವ:

“ಎಸ್ಐಟಿ ತನಿಖೆಯ ಆದೇಶ ಹೊರಡಿಸುವ ಒಂದು ದಿನ ಮುಂಚಿತವಾಗಿ ಮುಖ್ಯಮಂತ್ರಿಗಳೇ ಯಾವುದೇ ತನಿಖೆಯ ಅಗತ್ಯವಿಲ್ಲ ಎಂದು ಹೇಳಿದ್ದರು. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ ತಕ್ಷಣವೇ ಮುಖ್ಯಮಂತ್ರಿಗಳು ಏಕಾಏಕಿ ಈ ನಿಲುವನ್ನು ಬದಲಾಯಿಸಿ ತನಿಖೆಗೆ ಆದೇಶಿಸಿದರು. ಈ ಷಡ್ಯಂತ್ರದ ವಿರುದ್ಧವೇ ಬಿಜೆಪಿ ಹಿಂದೆ ‘ಧರ್ಮಸ್ಥಳ ಚಲೋ’ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು” ಎಂದು ಅವರು ನೆನಪಿಸಿಕೊಂಡರು.

ವಿದೇಶಿ ಶಕ್ತಿಗಳ ಕೈವಾಡದ ತನಿಖೆಗೆ ಒತ್ತಾಯ:

ಈ ಇಡೀ ಪ್ರಕರಣದಲ್ಲಿ ನೂರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆದಿರುವುದು ಈಗ ಬೆಳಕಿಗೆ ಬರುತ್ತಿದೆ. ಇಷ್ಟೊಂದು ದೊಡ್ಡ ಮೊತ್ತದ ಹಣದ ಹರಿವಿರುವುದರಿಂದ ಇದರ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿರುವ ಶಂಕೆ ಇದ್ದು, ಆ ನಿಟ್ಟಿನಲ್ಲೂ ತನಿಖೆಯಾಗಬೇಕು. ಇಂತಹ ವ್ಯವಸ್ಥಿತ ಸಂಚುಗಳಿಗೆ ಕಾಂಗ್ರೆಸ್ ಸರ್ಕಾರವು ಪ್ರೋತ್ಸಾಹ ನೀಡುತ್ತಿರುವುದು ತೀವ್ರ ನೋವಿನ ಸಂಗತಿಯಾಗಿದೆ. ಈ ಕೃತ್ಯದ ಹಿಂದೆ ಯಾರಿದ್ದಾರೆ? ಯಾರು ಬಂಡವಾಳ ಹೂಡಿದ್ದಾರೆ? ಮತ್ತು ಅಂದಿನ ಸಿಎಂ ಯಾವ ಒತ್ತಡಕ್ಕೆ ಮಣಿದು ಕಣ್ಮುಚ್ಚಿ ತನಿಖೆಗೆ ಆದೇಶಿಸಿದರು ಎಂಬ ಸತ್ಯ ನಾಡಿನ ಜನತೆಗೆ ಮತ್ತು ಹಿಂದೂಗಳಿಗೆ ತಿಳಿಯಬೇಕಿದೆ ಎಂದು ಬಿ.ಯಿ.ವಿಜಯೇಂದ್ರ ಆಗ್ರಹಿಸಿದರು.

ಬಿಎಲ್‌ಒಗಳ ದುರುಪಯೋಗ:

ರಾಜ್ಯ ಸರ್ಕಾರವು ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಸಮರ್ಪಕವಾದ ಮಾರ್ಗದರ್ಶನ ಮತ್ತು ಆದೇಶಗಳನ್ನು ನೀಡುತ್ತಿಲ್ಲ. ನಿಯಮಾನುಸಾರ ಮತದಾರರ ಪಟ್ಟಿಯಿಂದ ನಕಲಿ ಹೆಸರುಗಳನ್ನು ಹಾಗೂ ಮೃತರ ಹೆಸರುಗಳನ್ನು ಕೈಬಿಡುವ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯಬೇಕಿದೆ. ಆದರೆ, ಆಡಳಿತ ಪಕ್ಷವು ಬಿಎಲ್‌ಒಗಳನ್ನು ತನ್ನ ರಾಜಕೀಯ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಇದರಿಂದಾಗಿ ಕರ್ನಾಟಕದಲ್ಲಿ ಮತದಾರರ ಪಟ್ಟಿ ನವೀಕರಣ ಕಾರ್ಯವು ಸಮರ್ಪಕವಾಗಿ ಆಗುತ್ತಿಲ್ಲ ಎಂದು ಅವರು ದೂರಿದರು.

ಬಿಜೆಪಿಯಿಂದ ಮುಂದಿನ ಹೋರಾಟದ ಮುನ್ಸೂಚನೆ:

ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಗೆ ಧಕ್ಕೆ ತರುತ್ತಿರುವ ಸರ್ಕಾರದ ಈ ಧೋರಣೆಯ ವಿರುದ್ಧ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಯಾವ ರೀತಿಯ ಕಾನೂನಾತ್ಮಕ ಮತ್ತು ರಾಜಕೀಯ ಹೋರಾಟದ ಹಾದಿ ಹಿಡಿಯಬೇಕು ಎಂಬುದರ ಕುರಿತು ಮುಖಂಡರ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

 


Share this with Friends

Related Post