ಬೆಂಗಳೂರು: ಬೆಂಗಳೂರು ಮತ್ತು ತುಮಕೂರು ನಗರಗಳ ನಡುವೆ ಪ್ರಯಾಣಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಹೊಸದಾಗಿ ‘ವಜ್ರ’ ವಿಸ್ತಾರ ಹವಾನಿಯಂತ್ರಿತ (AC) ಬಸ್ ಸೇವೆಗಳನ್ನು ಇಂದಿನಿಂದ (ಮೇ 19) ಪ್ರಾರಂಭಿಸಿದೆ.
ಸಾರ್ವಜನಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಾಥಮಿಕ ಹಂತವಾಗಿ ಒಟ್ಟು 10 ಐಷಾರಾಮಿ ಎಸಿ ಬಸ್‌ಗಳನ್ನು ಈ ಮಾರ್ಗದಲ್ಲಿ ನಿಯೋಜಿಸಲಾಗಿದೆ. ಈ ಬಸ್‌ಗಳು ದಿನಕ್ಕೆ ಒಟ್ಟು 54 ಟ್ರಿಪ್‌ಗಳನ್ನು (ಸುತ್ತುವಳಿಗಳು) ನಡೆಸಲಿದ್ದು, ಪ್ರತಿ 20 ನಿಮಿಷಗಳ ಅಂತರದಲ್ಲಿ ಪ್ರಯಾಣಿಕರಿಗೆ ಲಭ್ಯವಿರಲಿವೆ. ಹೊಸ ಸೇವೆಯು ಸಾರ್ವಜನಿಕರಿಗೆ ಸುರಕ್ಷಿತ, ಆರಾಮದಾಯಕ ಹಾಗೂ ಸಮಯಪಾಲನೆಯ ಪ್ರಯಾಣದ ಅನುಭವ ನೀಡಲಿದೆ ಎಂದು ಸಂಸ್ಥೆ ತಿಳಿಸಿದೆ.
ಮಾರ್ಗ ಮತ್ತು ಪ್ರಮುಖ ನಿಲುಗಡೆಗಳು:
‘ಮಾರ್ಗ ಸಂಖ್ಯೆ: V-EX-TMK-1’ ಅಡಿಯಲ್ಲಿ ಈ ಬಸ್‌ಗಳು ಕೆಂಪೇಗೌಡ ಬಸ್ ನಿಲ್ದಾಣದಿಂದ (ಕೆಬಿಎಸ್) ಹೊರಟು ನವರಂಗ್, ಗೋವರ್ಧನ್ ಟಾಕೀಸ್, ಗೊರಗುಂಟೆಪಾಳ್ಯ, ಜಾಲಹಳ್ಳಿ ಕ್ರಾಸ್, ಟಿ. ದಾಸರಹಳ್ಳಿ, 8ನೇ ಮೈಲಿ, ವೀಡಿಯಾ ನಿಲ್ದಾಣ ಹಾಗೂ ಕ್ಯಾತಸಂದ್ರ ಮಾರ್ಗವಾಗಿ ತುಮಕೂರನ್ನು ತಲುಪಲಿವೆ.
ಪ್ರಯಾಣ ದರದ ವಿವರ:
ಬೆಂಗಳೂರಿನಿಂದ ತುಮಕೂರಿಗೆ ಗರಿಷ್ಠ ಪ್ರಯಾಣ ದರವನ್ನು ಟೋಲ್ ಮತ್ತು ಜಿಎಸ್‌ಟಿ ಒಳಗೊಂಡಂತೆ 120 ರೂಪಾಯಿಗಳಾಗಿ ನಿಗದಿಪಡಿಸಲಾಗಿದೆ. ಹಂತವಾರು ದರಗಳ ವಿವರ ಹೀಗಿದೆ:
ಕೆಬಿಎಸ್‌ನಿಂದ ನವರಂಗ್‌ಗೆ: ₹25
ಗೊರಗುಂಟೆಪಾಳ್ಯಕ್ಕೆ: ₹35
ಜಾಲಹಳ್ಳಿ ಕ್ರಾಸ್ / ಟಿ. ದಾಸರಹಳ್ಳಿ / 8ನೇ ಮೈಲಿಗೆ: ₹40
ವೀಡಿಯಾ ನಿಲ್ದಾಣಕ್ಕೆ: ₹50
ಕ್ಯಾತಸಂದ್ರ ಮತ್ತು ತುಮಕೂರಿಗೆ: ₹120
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ನೂತನ ಸೇವೆಯನ್ನು ಲೋಕಾರ್ಪಣೆಗೊಳಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಬಿಎಂಟಿಸಿ ಪ್ರಕಟಣೆಯಲ್ಲಿ ಕೋರಿದೆ.

