ಬೆಂಗಳೂರು: ಜಾಗತಿಕವಾಗಿ ಚರ್ಚೆಯಲ್ಲಿರುವ ಎಬೋಲಾ ವೈರಸ್ ಕುರಿತು ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದರೆ, ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಮುಖ್ಯ ಎಂದು ಅವರು ಕರೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಆರೋಗ್ಯ ಇಲಾಖೆಯು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಪ್ರಸ್ತುತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದರು. ಭಾರತದಲ್ಲಾಗಲಿ ಅಥವಾ ನೆರೆಯ ದೇಶಗಳಲ್ಲಾಗಲಿ ಸದ್ಯಕ್ಕೆ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲ. ಆದಾಗ್ಯೂ, ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಸ್ಪಷ್ಟಪಡಿಸಿದರು.
21 ದಿನಗಳ ಕ್ವಾರಂಟೈನ್ ನಿಯಮ:
ಆಫ್ರಿಕನ್ ದೇಶಗಳಾದ ಉಗಾಂಡಾ ಮತ್ತು ಕಾಂಗೋ ಸೇರಿದಂತೆ ಎಬೋಲಾ ಪೀಡಿತ ಪ್ರದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗುವುದು. ಅಂತಹ ಪ್ರಯಾಣಿಕರನ್ನು 21 ದಿನಗಳ ಕಾಲ ಕಡ್ಡಾಯವಾಗಿ ಆರೋಗ್ಯ ಇಲಾಖೆಯ ನಿಗಾದಲ್ಲಿ ಇರಿಸಲಾಗುತ್ತದೆ. ಈ ಅವಧಿಯಲ್ಲಿ ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಕೇಂದ್ರ ಸರ್ಕಾರವು ಈಗಾಗಲೇ ಈ ಕುರಿತು ಅಗತ್ಯ ಮಾರ್ಗಸೂಚಿಗಳನ್ನು (Guidelines) ಬಿಡುಗಡೆ ಮಾಡಿದೆ. ಸಾರ್ವಜನಿಕರು ಎಬೋಲಾ ಕುರಿತು ಹರಡುವ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಸರ್ಕಾರದ ಅಧಿಕೃತ ಮಾಹಿತಿಗಳನ್ನು ಮಾತ್ರ ನಂಬಬೇಕು ಎಂದು ಸಚಿವರು ವಿನಂತಿಸಿದ್ದಾರೆ.
ಪೆಟ್ರೋಲ್ ದರ ಏರಿಕೆ:
ಕೆಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಮುಂಬರುವ ದಿನಗಳಲ್ಲಿ ಭಾರತ ದೊಡ್ಡ ಸಮಸ್ಯೆಗೆ ಸಿಲುಕಲಿದೆ. ದೇಶದ ಜನರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ರಾಹುಲ್ ಗಾಂಧಿಯವರು ಆರು ತಿಂಗಳ ಹಿಂದೆಯೇ ಹೇಳಿದ್ದರು. ಅನವಶ್ಯಕವಾಗಿ ನಡೆಯುತ್ತಿರುವ ಯುದ್ಧದಿಂದ ಈ ಪರಿಸ್ಥಿತಿ ಬಂದಿದೆ ಎನ್ನುವುದನ್ನು ಒಪ್ಪಿಕೊಳ್ಳೋಣ. ಕೇಂದ್ರ ಸರ್ಕಾರ ಮೊದಲಿನಿಂದಲೂ ಸರಿಯಾಗಿ ನಡೆದುಕೊಂಡಿಲ್ಲ. ಭಾರತದ ನಿಲುವು ಏನು ಎನ್ನುವುದನ್ನು ಹೇಳಿಲ್ಲ. ಪ್ರವಾಸ ಮಾಡಬೇಡಿ, ಚಿನ್ನ ಖರೀದಿಸಬೇಡಿ ಇಂತಹ ಹೇಳಿಕೆ ನೀಡುತ್ತ ಮೊದಿಯವರುಕಾಲ ಕಳೆಯುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸೋತಿದ್ದಾರೆ. ಹಿಂದೆ ಮನಮೋಹನ್ ಸಿಂಗ್ ಪ್ರಧಾನಿ ಇದ್ದಾಗ, ಬ್ಯಾರಲ್ ಗೆ 120 ಡಾಲರ್ ವರೆಗೂ ಹೋಗಿತ್ತು. ಆದರೆ ಜನರಿಗೆ ತೊಂದರೆ ಆಗದಂತೆ ಅವರು ಕ್ರಮ ಕೈಗೊಂಡಿದ್ದರು.ಆದರೆ ಈಗ ಎನಾಗಿದೆ ನೋಡಿ.ಈವರೆಗೆ ಕಡಿಮೆ ದರ ಇದ್ದಾಗಲೂ ಕೇಂದ್ರ ಸರ್ಕಾರ ಪೆಟ್ರೋಲ್ ದರ ಇಳಿಸಿರಲಿಲ್ಲ. ಬೇಕಾದಷ್ಟು ಲಾಭ ಮಾಡಿಕೊಂಡಿತ್ತು. ಈಗ ಯುದ್ಧದ ಕಾರಣದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಆದಾಗ ಟಾಕ್ಸ್ ದರ ಇಳಿಸಿ ಜನರಿಗೆ ಅನುಕೂಲ ಮಾಡುವ ಬದಲು ತೈಲದರ ಏರಿಕೆಯನ್ನು ನಿರಂತರವಾಗಿ ಮಾಡುತ್ತಿದೆ. ಜನಸಾಮಾನ್ಯರ ಬದುಕನ್ನೇ ತೊಂದರೆಗೆ ಸಿಲುಕಿಸಿದೆ. ಮೋದಿಯವರಿಗೆ ಚುನಾವಣೆ ಗೆಲ್ಲುವುದು ಮಾತ್ರ ಪ್ರಾಮುಖ್ಯ. ಜನರ ಕಷ್ಟ ಬೇಕಾಗಿಲ್ಲ. ಸಮಾಜವನ್ನು ವಿಭಜಿಸಿ, ಶಾಂತಿ, ಸಹಬಾಳ್ವೆಯನ್ನು ಹಾಳುಮಾಡಿ, ಇಸ್ಟಾಗ್ರಾಂ ನಲ್ಲಿ ಫೋಟೋ, ವಿಡಿಯೋ ಹಾಕುತ್ತ ಕಾಲ ಕಳೆಯುತ್ತಿದ್ದಾರೆ. ಸಾರ್ವಜನಿಕರು ತೊಂದರೆಯಲ್ಲಿ ಬೇಯುತ್ತಿದ್ದಾರೆ ಎಂದರು.
ನೀಟ್ ಪರೀಕ್ಷೆ:
ಕೇಂದ್ರ ಅನುಮತಿ ನೀಡಿದರೆ ರಾಜ್ಯಮಟ್ಟದಲ್ಲಿ ನಾವು ನೀಟ್ ಪರೀಕ್ಷೆ ನಡೆಸಲು ಸಿದ್ಧ. ಪ್ರತಿ ವರ್ಷವೂ ಕೇಂದ್ರ ಸರಕಾರ ನೀಟ್ ಪರೀಕ್ಷೆಯಲ್ಲಿ ಒಂದಲ್ಲ ಒಂದು ಎಡವಟ್ಟು ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡಿದೆ. ಜವಾಬ್ದಾರಿಯುತವಾಗಿ ಪರೀಕ್ಷೆ ನಡೆಸದೆ, ಹೊಣೆಗಾರಿಕೆಯಿಲ್ಲದಂತೆ ವ್ಯವಹರಿಸುತ್ತಿದೆ.ಹಲವಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಪೋಷಕರ ಗೋಳು ಕೇಳುವವರು ಯಾರು?ಜನಸಾಮಾನ್ಯರ ಕಷ್ಟ ಕೇಂದ್ರ ಸರ್ಕಾರಕ್ಕೆ ಅರ್ಥವೇ ಆಗುತ್ತಿಲ್ಲ. ನಾವು ಪ್ರಾರಂಭಿಸಿದ ಸಿಇಟಿ ಮಾದರಿಯಾಗಿ ನಡೆಯುತ್ತಿದೆ. ಹಾಗಾಗಿ ನೀಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ನಾವು ಸಿದ್ಧರಿದ್ದೇವೆ ಎಂದರು.

