Sat. Jun 6th, 2026

ದೇವೇಗೌಡರ ರಾಜ್ಯಸಭೆ ಎಂಟ್ರಿಗೆ ಕಮಲ ನಾಯಕರ ಗ್ರೀನ್ ಸಿಗ್ನಲ್: ಹೈಕಮಾಂಡ್ ಅಂಗಳದಲ್ಲಿ ಅಂತಿಮ ತೀರ್ಮಾನ!

Share this with Friends

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ರಾಜ್ಯಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಎನ್‌ಡಿಎ (NDA) ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಮತ್ತೊಮ್ಮೆ ಜಂಟಿ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಕಳುಹಿಸುವ ಚರ್ಚೆಗಳು ಮುಂಚೂಣಿಗೆ ಬಂದಿವೆ. ಈ ಮಹತ್ವದ ಬೆಳವಣಿಗೆಗೆ ರಾಜ್ಯ ಬಿಜೆಪಿ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮೈತ್ರಿ ಧರ್ಮ ಪಾಲನೆಗೆ ಸಂಪೂರ್ಣ ಸಿದ್ಧರಾಗಿರುವ ಮುನ್ಸೂಚನೆ ನೀಡಿದ್ದಾರೆ.

ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕುರಿತು ಬೆಂಗಳೂರಿನಲ್ಲಿ ಸರಣಿ ಸಭೆಗಳು ನಡೆಯುತ್ತಿದ್ದು, ಬಿಜೆಪಿಯ ರಾಜ್ಯ ನಾಯಕತ್ವವು ಜೆಡಿಎಸ್ ಬೇಡಿಕೆ ಹಾಗೂ ಹಿರಿಯ ನಾಯಕರ ಗೌರವದ ವಿಚಾರದಲ್ಲಿ ಯಾವುದೇ ರಾಜಿಗೆ ಮುಂದಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಬಿ.ವೈ.ವಿಜಯೇಂದ್ರ  ನಿಲುವು (ರಾಜ್ಯ ಬಿಜೆಪಿ ಅಧ್ಯಕ್ಷರು):

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಉಮೇದುವಾರಿಕೆ ಕುರಿತು ಪಕ್ಷದ ಕಚೇರಿಯಲ್ಲಿ ಸ್ಪಷ್ಟನೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಯುವಿಜಯೇಂದ್ರ, ದೇವೇಗೌಡರನ್ನು ಸಂಸತ್ತಿನ ಮೇಲ್ಮನೆಗೆ ಕಳುಹಿಸುವ ವಿಚಾರದಲ್ಲಿ ಬಿಜೆಪಿಗೆ ಯಾವುದೇ ಆಕ್ಷೇಪ ಇಲ್ಲ ಎಂದಿದ್ದಾರೆ.”ರಾಜ್ಯಸಭೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪಕ್ಷದ ಆಂತರಿಕ ವಲಯದಲ್ಲಿ ಗಂಭೀರ ಚರ್ಚೆಗಳು ನಡೆದಿವೆ. ಮೈತ್ರಿಕೂಟದಲ್ಲಿ ಒಬ್ಬರಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಎಚ್.ಡಿ.ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಲು ಬಿಜೆಪಿಯಲ್ಲಿ ಯಾವುದೇ ರೀತಿಯ ವಿರೋಧವಿಲ್ಲ. ಆದರೆ, ಅವರಿಗೆ ಅವಕಾಶ ನೀಡುವ ಕುರಿತಾದ ಅಂತಿಮ ನಿರ್ಧಾರವನ್ನು ನಮ್ಮ ರಾಷ್ಟ್ರೀಯ ನಾಯಕರು ತೆಗೆದುಕೊಳ್ಳಲಿದ್ದಾರೆ. ಈ ಸಂಬಂಧ ಹೈಕಮಾಂಡ್‌ನಿಂದ ನಮಗೆ ಇನ್ನೂ ಯಾವುದೇ ಅಧಿಕೃತ ಸೂಚನೆಗಳು ಲಭ್ಯವಾಗಿಲ್ಲ”ಎಂದಿದ್ದಾರೆ.

ಆರ್. ಅಶೋಕ್  ಪ್ರತಿಕ್ರಿಯೆ (ವಿರೋಧ ಪಕ್ಷದ ನಾಯಕರು):

ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಸಹ ಇದೇ ಧಾಟಿಯಲ್ಲಿ ಮಾತನಾಡಿದ್ದು, ಮೈತ್ರಿಕೂಟದ ಹಿರಿಯ ಮುತ್ಸದ್ದಿ ನಾಯಕರನ್ನು ಗೌರವಿಸುವುದು ಮೈತ್ರಿ ಧರ್ಮದ ಭಾಗವಾಗಿದೆ ಎಂದಿದ್ದಾರೆ. ರಾಜ್ಯಸಭೆ ಅಭ್ಯರ್ಥಿಗಳ ಫೈನಲ್ ಲಿಸ್ಟ್ ಸಿದ್ಧಪಡಿಸುವ ಜವಾಬ್ದಾರಿ ದೆಹಲಿ ನಾಯಕರದ್ದಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.”ಎಚ್.ಡಿ. ದೇವೇಗೌಡರು ದೇಶ ಕಂಡ ಅಪರೂಪದ ಹಿರಿಯ ರಾಜಕಾರಣಿ. ಮೈತ್ರಿಕೂಟದ ಅಭ್ಯರ್ಥಿಯಾಗಿ ಅವರ ಆಯ್ಕೆಯ ವಿಚಾರದಲ್ಲಿ ನಮ್ಮ ರಾಜ್ಯ ನಾಯಕತ್ವಕ್ಕೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ರಾಜ್ಯಸಭೆ ಚುನಾವಣೆಯ ತಂತ್ರಗಾರಿಕೆ ಹಾಗೂ ಟಿಕೆಟ್ ಹಂಚಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಹೈಕಮಾಂಡ್ ನಿರ್ವಹಿಸುತ್ತಿದೆ. ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ”ಎಂದಿದ್ದಾರೆ.

ಮುಂದಿನ ನಡೆ ಏನು?

ರಾಜ್ಯ ನಾಯಕರ ಹೇಳಿಕೆಗಳ ಪ್ರಕಾರ, ದೇವೇಗೌಡರ ಹೆಸರನ್ನು ಒಮ್ಮತದಿಂದ ಹೈಕಮಾಂಡ್‌ಗೆ ಶಿಫಾರಸು ಮಾಡುವ ಸಾಧ್ಯತೆ ದಟ್ಟವಾಗಿದೆ. ಆದರೆ, ದೆಹಲಿ ಮಟ್ಟದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬೀನ್ ನೇತೃತ್ವದ ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ಅಂತಿಮ ಮೊಹರು ಬೀಳಬೇಕಿದೆ. ಮೇ 24 ರಂದು ನಿತಿನ್ ನಬೀನ್ ಬೆಂಗಳೂರಿಗೆ ಭೇಟಿ ನೀಡುತ್ತಿರುವುದರಿಂದ, ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ.

 

 


Share this with Friends

Related Post