Sat. Jun 6th, 2026

ಬೀದಿ ನಾಯಿಗಳ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್ ಆದೇಶ: ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ 

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಕಟ್ಟುನಿಟ್ಟಾಗಿ ಪಾಲಿಸಲಿದೆ ಎಂದು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ಇತ್ತೀಚೆಗೆ (ಮೇ 19, 2026) ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ರಿಟ್ ಅರ್ಜಿ (SUO-MOTO WRIT PETITION NO. 5 OF 2025) ವಿಚಾರಣೆ ನಡೆಸಿ ಮಹತ್ವದ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಜಿಬಿಎ ವ್ಯಾಪ್ತಿಯಲ್ಲಿ ಕೈಗೊಳ್ಳಲಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಆಯುಕ್ತರು ಮಾಹಿತಿ ನೀಡಿದ್ದಾರೆ.

ಜಿಬಿಎ ಕೈಗೊಳ್ಳಲಿರುವ ಪ್ರಮುಖ ಕ್ರಮಗಳು:

ಪ್ರಮುಖ ಸ್ಥಳಗಳಿಂದ ಸ್ಥಳಾಂತರ: ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ಹಾಗೂ ರೈಲು ನಿಲ್ದಾಣಗಳ ಆವರಣದಲ್ಲಿರುವ ಬೀದಿ ನಾಯಿಗಳನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ (AWBI) ಪ್ರಮಾಣಿತ ಕಾರ್ಯಾಚರಣೆ ವಿಧಾನದ (SOP) ಪ್ರಕಾರ ಸ್ಥಳಾಂತರಿಸಲಾಗುವುದು.

ಆಶ್ರಯ ತಾಣಗಳ ನಿರ್ಮಾಣ: ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಬೀದಿ ನಾಯಿಗಳಿಗಾಗಿ ವಿಶೇಷ ಆಶ್ರಯ ತಾಣಗಳ (Shelter Homes) ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇವುಗಳ ಉಸ್ತುವಾರಿಗಾಗಿ ನಿರ್ವಹಣಾ ಸೇವಾದಾರರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸುವ ನಾಯಿಗಳನ್ನು ಈ ಅಧಿಕೃತ ಆಶ್ರಯ ತಾಣಗಳಿಗೆ ಕಳುಹಿಸಲಾಗುವುದು.

ಆಕ್ರಮಣಕಾರಿ ನಾಯಿಗಳ ವಿರುದ್ಧ ಕ್ರಮ: ನಾಯಿ ಕಡಿತ ಪ್ರಕರಣಗಳು ಹೆಚ್ಚಾಗಿರುವ ಮತ್ತು ಆಕ್ರಮಣಕಾರಿ ವರ್ತನೆಯಿಂದ ಸಾರ್ವಜನಿಕರಿಗೆ ಅಪಾಯಕಾರಿಯಾಗಿರುವ ನಾಯಿಗಳ ವಿರುದ್ಧ ತಜ್ಞ ಪಶುವೈದ್ಯರ ದೃಢೀಕರಣದ ಮೇರೆಗೆ ಕಾನೂನುಬದ್ಧ ಕ್ರಮ ಜರುಗಿಸಲಾಗುವುದು.

ಕಾನೂನು ಚೌಕಟ್ಟಿನಲ್ಲಿ ಕಾರ್ಯಾಚರಣೆ:

ಈ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 (PCA Act) ಹಾಗೂ ಅನಿಮಲ್ ಬರ್ತ್ ಕಂಟ್ರೋಲ್ ರೂಲ್ಸ್ 2023 (ABC Rules) ಅನ್ವಯವೇ ನಡೆಸಲಾಗುವುದು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಸಾರ್ವಜನಿಕರು ಬೀದಿ ನಾಯಿಗಳ ವಿಚಾರದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳದೆ ಅಥವಾ ಯಾವುದೇ ವೈಯಕ್ತಿಕ ಕ್ರಮಗಳಿಗೆ ಮುಂದಾಗದೆ, ಜಿಬಿಎ ನ ವ್ಯವಸ್ಥೆಯೊಂದಿಗೆ ಸಹಕರಿಸಬೇಕಾಗಿ ಮುಖ್ಯ ಆಯುಕ್ತರು ಮನವಿ ಮಾಡಿದ್ದಾರೆ.

 


Share this with Friends

Related Post