Sat. Jun 6th, 2026

ದೈವ ನಿಂದನೆ ವಿವಾದ: ನ್ಯಾಯಾಲಯದ ಆದೇಶದಂತೆ ಮೈಸೂರು ಚಾಮುಂಡಿ ಬೆಟ್ಟದಲ್ಲಿ ನಟ ರಣವೀರ್ ಸಿಂಗ್ ಶಿರಬಾಗಿ ಕ್ಷಮೆಯಾಚನೆ!

Share this with Friends

ಮೈಸೂರು: ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ‘ಕಾಂತಾರ’ ಚಿತ್ರದ ಪವಿತ್ರ ದೈವ ನರ್ತನದ ಅಣಕು ಮತ್ತು ದೈವವನ್ನು ನಿಂದಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಮೈಸೂರಿನ ಐತಿಹಾಸಿಕ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಶಿರಬಾಗಿ ಕ್ಷಮೆಯಾಚಿಸಿದ್ದಾರೆ.

ಕರ್ನಾಟಕ ಹೈಕೋರ್ಟ್ ನೀಡಿದ್ದ ಕಟ್ಟುನಿಟ್ಟಿನ ನಿರ್ದೇಶನ ಹಾಗೂ ನ್ಯಾಯಾಲಯಕ್ಕೆ ನೀಡಿದ್ದ ಲಿಖಿತ ಭರವಸೆಯ ಮೇರೆಗೆ ನಟ ಈ ಧಾರ್ಮಿಕ ಪ್ರಾಯಶ್ಚಿತ್ತ ಕಾರ್ಯವನ್ನು ಪೂರೈಸಿದ್ದಾರೆ.ಯಾವುದೇ ತಾರಾ ವರ್ಚಸ್ಸಿನ ಹಮ್ಮಿಲ್ಲದೆ, ಮುಂಜಾನೆ 7:30ರ ಸುಮಾರಿಗೆ ಸಾಮಾನ್ಯ ಭಕ್ತನಂತೆ ಮಾಸ್ಕ್ ಧರಿಸಿ ಬಂದಿದ್ದ ರಣವೀರ್ ಸಿಂಗ್ ಅವರನ್ನು ದೇವಸ್ಥಾನದ ಪ್ರಧಾನ ಅರ್ಚಕರು ಗರ್ಭಗುಡಿಗೆ ಕರೆದೊಯ್ದು ವಿಶೇಷ ಪೂಜೆ ನೆರವೇರಿಸಿಕೊಟ್ಟರು.ದೇವಿಯ ಪಾದಕ್ಕೆ ತಲೆಬಾಗಿದ ನಟ, ತನ್ನ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿ ಪ್ರಸಾದ ಸ್ವೀಕರಿಸಿದರು.

ಏನಿದು ಕಾಂತಾರ ದೈವ ನಿಂದನೆ ವಿವಾದ?

ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಸಮಾರಂಭವೊಂದರಲ್ಲಿ ನಟ ರಣವೀರ್ ಸಿಂಗ್ ಅವರು ಚಿತ್ರತಂಡದ ಎದುರೇ ‘ಕಾಂತಾರ’ ಚಿತ್ರದ ಪವಿತ್ರ ದೈವದ ನರ್ತನವನ್ನು ಅತಿರೇಕವಾಗಿ ಅಣಕು ಮಾಡಿದ್ದರು. ಅಷ್ಟೇ ಅಲ್ಲದೆ, ಕರಾವಳಿಯ ಆರಾಧ್ಯ ದೈವವಾದ ‘ಚಾವುಂಡಿ ದೈವ’ವನ್ನು ‘ದೆವ್ವ’ ಎಂದು ಸಂಬೋಧಿಸಿದ್ದರು.ಈ ಬೇಜವಾಬ್ದಾರಿ ವರ್ತನೆಯು ಕನ್ನಡಿಗರ ಹಾಗೂ ದೈವಾರಾಧಕರ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಕಾನೂನುಬದ್ಧವಾಗಿ ಎಫ್‌ಐಆರ್ (FIR) ದಾಖಲಿಸಲಾಗಿತ್ತು.

ಹೈಕೋರ್ಟ್ ವಿಧಿಸಿದ್ದ ಕಡ್ಡಾಯ ಷರತ್ತು:

ಕೇಸನ್ನು ರದ್ದುಗೊಳಿಸುವಂತೆ ಕೋರಿ ರಣವೀರ್ ಸಿಂಗ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.ವಿಚಾರಣೆ ನಡೆಸಿದ ನ್ಯಾಯಪೀಠವು, ಸಾರ್ವಜನಿಕ ವೇದಿಕೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

ನಂತರ ನಟ ಸಲ್ಲಿಸಿದ ಬೇಷರತ್ ಕ್ಷಮಾಪಣಾ ಅಫಿಡವಿಟ್‌ ಅನ್ನು ಪುರಸ್ಕರಿಸಿದ ನ್ಯಾಯಾಲಯ, ನಾಲ್ಕು ವಾರಗಳ ಒಳಗಾಗಿ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಖುದ್ದಾಗಿ ಭೇಟಿ ನೀಡಿ ತಾಯಿಯ ಸನ್ನಿಧಿಯಲ್ಲಿ ಪ್ರಾರ್ಥಿಸಿ ಕ್ಷಮೆಯಾಚಿಸಬೇಕು ಎಂಬ ಕಠಿಣ ಷರತ್ತಿನೊಂದಿಗೆ ಕಾನೂನು ಪ್ರಕ್ರಿಯೆಯನ್ನು ರದ್ದುಗೊಳಿಸಿತ್ತು.

ನ್ಯಾಯಾಲಯ ನೀಡಿದ್ದ ಗಡುವಿನ ಪ್ರಕಾರ ಇಂದು ಬೆಟ್ಟಕ್ಕೆ ಆಗಮಿಸಿದ ನಟ, ಧಾರ್ಮಿಕ ವಿಧಿವಿಧಾನಗಳ ಮೂಲಕ ತನ್ನ ತಪ್ಪನ್ನು ಒಪ್ಪಿಕೊಂಡು ಪ್ರಾರ್ಥನೆ ಸಲ್ಲಿಸಿದ್ದಾರೆ.ದೈವದ ಹೆಸರಿನಲ್ಲಿ ದೇವಿಯ ಸನ್ನಿಧಿಯಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಮಂಡಿಯೂರಿ ಕ್ಷಮೆ ಕೇಳಿರುವುದು ಸದ್ಯ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

 

 


Share this with Friends

Related Post