Fri. Jun 5th, 2026

ದೆಹಲಿಗೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆಗಮನ: ಪ್ರಧಾನಿ ಮೋದಿ ಜತೆ ಮಹತ್ವದ ಮಾತುಕತೆ !

Share this with Friends

ನವದೆಹಲಿ/ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸಿ. ಜೋಸೆಫ್ ವಿಜಯ್ ಅವರು ತಮ್ಮ ಮೊದಲ ಅಧಿಕೃತ ದೆಹಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. ನವದೆಹಲಿಗೆ ತಲುಪಿರುವ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಪ್ರಮುಖ ಅಭಿವೃದ್ಧಿ ಯೋಜನೆಗಳು ಮತ್ತು ಕೇಂದ್ರ-ರಾಜ್ಯ ಬಾಂಧವ್ಯದ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ.

ದೆಹಲಿಯ ತಮಿಳುನಾಡು ಭವನಕ್ಕೆ ಆಗಮಿಸಿದ ಮುಖ್ಯಮಂತ್ರಿಗಳಿಗೆ ಗೌರವ ವಂದನೆ ಸಲ್ಲಿಸಿ ಭವ್ಯವಾಗಿ ಸ್ವಾಗತಿಸಲಾಯಿತು. ಪ್ರಧಾನಿ ಮೋದಿ ಅವರೊಂದಿಗಿನ ಈ ಸಭೆಯು ಕೇವಲ ಸೌಜನ್ಯದ ಭೇಟಿಯಾಗಿದ್ದರೂ, ರಾಜ್ಯದ ಆರ್ಥಿಕ ಹಿತಾಸಕ್ತಿ ಮತ್ತು ಬಾಕಿ ಇರುವ ಅನುದಾನಗಳ ಬಿಡುಗಡೆಗೆ ಸಂಬಂಧಿಸಿದಂತೆ ಈ ಮಾತುಕತೆ ಅತ್ಯಂತ ನಿರ್ಣಾಯಕವಾಗಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.

ಮೇಕೆದಾಟು ಯೋಜನೆಗೆ ಪ್ರಧಾನಿ ಭೇಟಿಗೂ ಮುನ್ನವೇ ವಿರೋಧ:

ಪ್ರಧಾನಿ ಭೇಟಿಗೆ ಮುನ್ನವೇ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದು, ನೆರೆಯ ಕರ್ನಾಟಕ ಸರ್ಕಾರ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೇಕೆದಾಟು ಜಲಾಶಯ ಯೋಜನೆಗೆ ತಮ್ಮ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಸಿಗಬೇಕಾದ ಕಾವೇರಿ ನೀರಿನ ಪಾಲಿಗೆ ಭಾರಿ ಧಕ್ಕೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿರುವ ಅವರು, ಈ ಯೋಜನೆಗೆ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಈ ನಡೆ ಉಭಯ ರಾಜ್ಯಗಳ ನಡುವಿನ ಜಲವಿವಾದವನ್ನು ಮತ್ತಷ್ಟು ಮುಂಚೂಣಿಗೆ ತಂದಿದೆ.

ಕೇಂದ್ರ ಸಚಿವರ ಭೇಟಿ ಸಾಧ್ಯತೆ:

ಪ್ರಧಾನಿ ಮೋದಿ ಅವರಲ್ಲದೆ, ಕೇಂದ್ರ ಹಣಕಾಸು ಸಚಿವರು ಮತ್ತು ಗೃಹ ಸಚಿವರನ್ನು ಭೇಟಿಯಾಗಿ ರಾಜ್ಯದ ಯೋಜನೆಗಳಿಗೆ ಹೆಚ್ಚುವರಿ ಅನುದಾನ ಹಾಗೂ ಬಾಕಿ ಇರುವ ಶೈಕ್ಷಣಿಕ ನಿಧಿ ಬಿಡುಗಡೆಗೆ ಸಿಎಂ ವಿಜಯ್ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಇದಲ್ಲದೆ ದೆಹಲಿ ಪ್ರವಾಸದ ವೇಳೆ ರಾಷ್ಟ್ರ ರಾಜಕಾರಣದ ಇನ್ನೂ ಕೆಲವು ಪ್ರಮುಖ ನಾಯಕರನ್ನು ಭೇಟಿಯಾಗಿ ಸಮಾಲೋಚನೆ ನಡೆಸುವ ನಿರೀಕ್ಷೆಯಿದೆ.

 


Share this with Friends

Related Post