Fri. Jun 5th, 2026

ಕೈ ಪಾಳಯದಲ್ಲಿ ತೀವ್ರಗೊಂಡ ಚಟುವಟಿಕೆ: ಬೆಂಗಳೂರಿಗೆ ಎಂಟ್ರಿ ಕೊಟ್ಟ ರಣದೀಪ್ ಸಿಂಗ್ ಸುರ್ಜೇವಾಲ; ಸಿಎಂ ಬದಲಾವಣೆ ಜೊತೆ ಸಚಿವ ಸಂಪುಟ ಪುನಾರಚನೆ ಫಿಕ್ಸ್?

Share this with Friends

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆಯ ಭಾರಿ ವದಂತಿಗಳ ನಡುವೆಯೇ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಇಂದು ದಿಢೀರ್ ಬೆಂಗಳೂರಿಗೆ ಆಗಮಿಸಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ನಡೆದ ಹೈವೋಲ್ಟೇಜ್ ಸಭೆಗಳ ಬೆನ್ನಲ್ಲೇ ಸುರ್ಜೇವಾಲ ಅವರ ಈ ಭೇಟಿ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಸೂತ್ರವನ್ನು ಸುಸೂತ್ರವಾಗಿ ಜಾರಿಗೆ ತರಲು ಹೈಕಮಾಂಡ್‌ನಿಂದ ಸ್ಪಷ್ಟ ಸಂದೇಶ ಹೊತ್ತು ಸುರ್ಜೇವಾಲ ಬಂದಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.

ಸಚಿವ ಸಂಪುಟ ಪುನಾರಚನೆ ಹಾಗೂ ಹೊಸ ಮುಖಗಳಿಗೆ ಮಣೆ?

ಸುರ್ಜೇವಾಲ ಅವರ ಈ ಭೇಟಿಯ ವೇಳೆ ಕೇವಲ ಮುಖ್ಯಮಂತ್ರಿ ಬದಲಾವಣೆ ಮಾತ್ರವಲ್ಲದೆ, ರಾಜ್ಯ ಸಚಿವ ಸಂಪುಟದಲ್ಲೂ ಭಾರಿ ಬದಲಾವಣೆ ಮಾಡುವ ಕುರಿತು ಸುದೀರ್ಘ ಚರ್ಚೆಗಳು ನಡೆಯಲಿವೆ ಎನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ನಿಷ್ಕ್ರಿಯರಾಗಿರುವ ಕೆಲವು ಸಚಿವರನ್ನು ಕೈಬಿಟ್ಟು, ಪಕ್ಷಕ್ಕೆ ನಿಷ್ಠರಾಗಿರುವ ಹಿರಿಯ ಹಾಗೂ ಹೊಸ ಮುಖಗಳಿಗೆ ಮಣೆ ಹಾಕಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ. ಇದೇ ವೇಳೆ ಹಿರಿಯ ನಾಯಕರಾದ ಪುಟ್ಟರಂಗಶೆಟ್ಟಿ ಸೇರಿದಂತೆ ಹಲವು ಪ್ರಮುಖ ನಾಯಕರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಅಥವಾ ಪ್ರಮುಖ ಜವಾಬ್ದಾರಿ ವಹಿಸುವ ಕುರಿತು ಸಮಾಲೋಚನೆಗಳು ನಡೆಯಲಿವೆ ಎಂಬ ಸುದ್ದಿಗಳು ದಟ್ಟವಾಗಿವೆ.

ವರಿಷ್ಠರ ಸಂದೇಶ ರವಾನೆ:

ಬೆಂಗಳೂರಿಗೆ ಆಗಮಿಸಿರುವ ಸುರ್ಜೇವಾಲ ಅವರು ಇಂದು ಸಂಜೆ ಹಾಗೂ ನಾಳೆ ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಮತ್ತು ಸಚಿವರೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಹೈಕಮಾಂಡ್ ತೆಗೆದುಕೊಂಡಿರುವ ಅಂತಿಮ ತೀರ್ಮಾನವನ್ನು ರಾಜ್ಯ ನಾಯಕರಿಗೆ ಮನವರಿಕೆ ಮಾಡಿಕೊಟ್ಟು, ಯಾವುದೇ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗದಂತೆ ಒಮ್ಮತದ ನಿರ್ಧಾರಕ್ಕೆ ಬರಲು ಅವರು ಸಂಧಾನಕಾರರಾಗಿ ಕೆಲಸ ಮಾಡಲಿದ್ದಾರೆ. ಸಿದ್ದರಾಮಯ್ಯ ಅವರು ಈಗಾಗಲೇ “ನಾಳೆ ಮಾತನಾಡುತ್ತೇನೆ” ಎಂದು ಹೇಳಿರುವುದರಿಂದ, ಸುರ್ಜೇವಾಲ ಅವರ ಸಮ್ಮುಖದಲ್ಲೇ ಮುಂದಿನ ಮಹತ್ವದ ರಾಜಕೀಯ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.

 

 


Share this with Friends

Related Post