Sat. Jun 6th, 2026

“ಇದೇ ನನ್ನ ಅಸಲಿ ಸ್ಟೇಟಸ್!”: ಬಿಡದಿ ರೈತರನ್ನು ಪ್ರಸ್ತಾಪಿಸಿ ಡಿಕೆ ಶಿವಕುಮಾರ್‌ಗೆ ನಿಖಿಲ್ ಕುಮಾರಸ್ವಾಮಿ ನೇರ ಸವಾಲು!

Share this with Friends

ರಾಮನಗರ: ಪ್ರಸ್ತಾವಿತ ಬಿಡದಿ ಸ್ಮಾರ್ಟ್ ಸಿಟಿ (ಟೌನ್‌ಶಿಪ್) ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸುತ್ತಿರುವ ಅನ್ನದಾತರ ಪರವಾಗಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಧ್ವನಿ ಎತ್ತಿದ್ದಾರೆ. ಈ ಭಾಗದಲ್ಲಿ ರೈತರೇ ಇಲ್ಲ ಎಂದು ಹೇಳಿಕೆ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣಗಳ ಮೂಲಕ ತೀಕ್ಷ್ಣವಾದ ತಿರುಗೇಟು ನೀಡಿದ್ದಾರೆ.

ಬಿಡದಿ ಹೋಬಳಿಯ ಸಹಸ್ರಾರು ರೈತರೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಂಡಿರುವ ಅವರು, “ಇದು ನನ್ನ ನಿಜವಾದ ಸ್ಟೇಟಸ್” ಎಂದು ಡಿಕೇಶಿಗೆ ಪರೋಕ್ಷವಾಗಿ ಸವಾಲು ಹಾಕಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯಲ್ಲಿ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿರುವ ನೂರಾರು ರೈತರು ಹಮ್ಮಿಕೊಂಡಿದ್ದ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿದ್ದರು. ಈ ವೇಳೆ ಅನ್ನದಾತರ ಅಹವಾಲುಗಳನ್ನು ಅತ್ಯಂತ ಗಮನವಿಟ್ಟು ಆಲಿಸಿದ ಅವರು, ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ರೈತರೊಂದಿಗೆ ಕೊನೆಯವರೆಗೂ ಹೋರಾಟ:

“ಬಿಡದಿ ಭಾಗದಲ್ಲಿ ರೈತರೇ ಇಲ್ಲ ಎಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಉಪಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಆದರೆ ಒಮ್ಮೆ ಇಲ್ಲಿ ಬಂದು ನೋಡಲಿ, ನಮ್ಮ ಅನ್ನದಾತರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದು ತಿಳಿಯುತ್ತದೆ” ಎಂದು ನಿಖಿಲ್ ಆಕ್ರೋಶ ಹೊರಹಾಕಿದ್ದಾರೆ. ನನ್ನ ವೈಯಕ್ತಿಕ ಹಾಗೂ ರಾಜಕೀಯ ಸ್ಥಾನಮಾನದ (ಸ್ಟೇಟಸ್) ಬಗ್ಗೆ ಮಾತನಾಡಿದವರಿಗೆ ಈ ಅನ್ನದಾತರ ಶಕ್ತಿಯೇ ಸೂಕ್ತ ಉತ್ತರ ಎಂದು ಅವರು ವಾಗ್ದಾಳಿ ನಡೆಸಿದರು. ತಮ್ಮ ಮಣ್ಣಿನ ಹಕ್ಕಿಗಾಗಿ ಹೋರಾಡುತ್ತಿರುವ ರೈತರೊಂದಿಗೆ ಕೊನೆಯವರೆಗೂ ನಿಲ್ಲುವುದಾಗಿ ಅವರು ಧೈರ್ಯ ತುಂಬಿದರು.

ಈ ಮಹತ್ವದ ರೈತರ ಸಭೆಯಲ್ಲಿ ಮಾಜಿ ಶಾಸಕ ಎ. ಮಂಜಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು, ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ ಸೇರಿದಂತೆ ಹಲವು ಪ್ರಮುಖ ಸ್ಥಳೀಯ ಮುಖಂಡರು ಮತ್ತು ನೂರಾರು ಭೂಸಂತ್ರಸ್ತ ರೈತರು ಉಪಸ್ಥಿತರಿದ್ದರು.

 

 


Share this with Friends

Related Post