ನವದೆಹಲಿ: ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ತೊತಾಪುರಿ ಮಾವು ಬೆಳೆಗಾರರ ಆದಾಯ ಕುಸಿತ ಹಾಗೂ ಮಂಡಿಗಳಲ್ಲಿನ ಬೆಲೆ ಕುಸಿತದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಇಡೀ ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸಲು ಐತಿಹಾಸಿಕ ತೀರ್ಮಾನ ಕೈಗೊಂಡಿದೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನವದೆಹಲಿಯ ಕೃಷಿ ಭವನದಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿ, ಮೌಲ್ಯವರ್ಧನೆ ಹೆಚ್ಚಿಸಲು ಹಾಗೂ ಬೆಲೆ ಸ್ಥಿರತೆ ತರಲು ಕಠಿಣ ಆದೇಶಗಳನ್ನು ನೀಡಿದ್ದಾರೆ.
ಕೃಷಿ ತಜ್ಞರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ನೀಡಿದ ವರದಿಯ ಅನ್ವಯ, ನೀತಿ, ತಂತ್ರಜ್ಞಾನ ಮತ್ತು ಮಾರುಕಟ್ಟೆ ಮೂರೂ ಹಂತಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರಮುಖ ಸುಧಾರಣೆಗಳನ್ನು ತರಲಾಗುತ್ತಿದೆ.
ಹೊಸ ಮಾರ್ಗಸೂಚಿಗಳ ಪ್ರಮುಖ ಮುಖ್ಯಾಂಶಗಳು:
ಪಾನೀಯಗಳಲ್ಲಿ ಶೇ. 22-25 ನೈಸರ್ಗಿಕ ತಿರುಳು ಕಡ್ಡಾಯ: ಮಾರುಕಟ್ಟೆಯಲ್ಲಿ ತೊತಾಪುರಿ ಮಾವಿನ ಬೇಡಿಕೆ ಹೆಚ್ಚಿಸಲು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಲ್ಲಾ ಮಾವಿನ ಜ್ಯೂಸ್ ಹಾಗೂ ಪಾನೀಯಗಳಲ್ಲಿ ಕನಿಷ್ಠ ಶೇ. 22 ರಿಂದ ಶೇ. 25 ರಷ್ಟು ಕಡ್ಡಾಯವಾಗಿ ನೈಸರ್ಗಿಕ ಮಾವಿನ ತಿರುಳನ್ನು (Pulp) ಬಳಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಜಿಎಸ್‌ಟಿ (GST) ದರದಲ್ಲಿ ಭಾರಿ ಬದಲಾವಣೆ: ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೈಸರ್ಗಿಕ ತಿರುಳು ಬಳಸುವ ಪಾನೀಯಗಳನ್ನು ಮಾತ್ರ ಶೇ. 5 ರ ರಿಯಾಯಿತಿ ಜಿಎಸ್‌ಟಿ ವ್ಯಾಪ್ತಿಯಲ್ಲಿ ಇರಿಸಲು ಮತ್ತು ಕಡಿಮೆ ತಿರುಳು ಬಳಸಿ ಕೃತಕ ರಾಸಾಯನಿಕ ಮಿಶ್ರಣ ಮಾಡುವ ಉತ್ಪನ್ನಗಳಿಗೆ ಹೆಚ್ಚಿನ ಜಿಎಸ್‌ಟಿ ವಿಧಿಸಲು ಪ್ರಸ್ತಾಪಿಸಲಾಗಿದೆ. ಇದರಿಂದ ನೈಜ ಮಾವಿನ ಬಳಕೆ ಹೆಚ್ಚಾಗಿ ರೈತರಿಗೆ ಉತ್ತಮ ಬೆಲೆ ಸಿಗಲಿದೆ.
ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯಡಿ ರಕ್ಷಣೆ: ದಕ್ಷಿಣ ಭಾರತದ ಬೆಳೆಗಾರರ ಹಿತದೃಷ್ಟಿಯಿಂದ ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯಡಿ ಕ್ವಿಂಟಾಲ್‌ಗೆ ರೂ. 1,747 ಆರ್ಥಿಕ ಸಹಾಯ ನೀಡುವ ಬೆಂಬಲ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಖರೀದಿ ಪ್ರಕ್ರಿಯೆ ವಿಳಂಬಕ್ಕೆ ಬ್ರೇಕ್: ಸೀಸನ್ ಆರಂಭದಲ್ಲೇ ಕಾರ್ಖಾನೆಗಳು ಹಾಗೂ ಮಂಡಿಗಳು ಸಕಾಲದಲ್ಲಿ ಖರೀದಿ ಆರಂಭಿಸದೆ ಇರುವುದರಿಂದ ಏಕಾಏಕಿ ಬೆಲೆ ಕುಸಿತ ಉಂಟಾಗುತ್ತಿತ್ತು. ಇದನ್ನು ತಡೆಯಲು ಪ್ರಾದೇಶಿಕ ಮಟ್ಟದಲ್ಲಿ ದಾಸ್ತಾನು ಮೂಲಸೌಕರ್ಯ ಮತ್ತು ಕೋಲ್ಡ್ ಸ್ಟೋರೇಜ್‌ಗಳನ್ನು ವಿಸ್ತರಿಸಲು ಸೂಚಿಸಲಾಗಿದೆ.
ಕೇಂದ್ರ ಸರ್ಕಾರದ ಈ ತಕ್ಷಣದ ಮಧ್ಯಪ್ರವೇಶದಿಂದಾಗಿ ದಲ್ಲಾಳಿಗಳ ದರ್ಪಕ್ಕೆ ಬ್ರೇಕ್ ಬೀಳಲಿದ್ದು, ದಕ್ಷಿಣ ಭಾರತದ ಮಾವು ಬೆಳೆಗಾರರಿಗೆ ದೀರ್ಘಾವಧಿಯ ಆರ್ಥಿಕ ಭದ್ರತೆ ಸಿಗಲಿದೆ.

