ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಕೌಂಟ್‌ಡೌನ್ ಅಂತಿಮ ಹಂತಕ್ಕೆ ತಲುಪಿದೆ ಎಂಬ ಚರ್ಚೆಗಳ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ವಲಯವೇ ಬೆಚ್ಚಿಬೀಳುವಂತಹ ಭಾರಿ ಆಟವಾಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ದೀರ್ಘಕಾಲದಿಂದ ತೀವ್ರ ಸಂಚಲನ ಮೂಡಿಸಿದ್ದ ಬಹುನಿರೀಕ್ಷಿತ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ’ಯನ್ನು (ಜಾತಿ ಸಮೀಕ್ಷೆ ವರದಿ) ಸಿದ್ದರಾಮಯ್ಯ ಅವರು ದಿಢೀರ್ ವಿಧಾನಸೌಧದಲ್ಲಿ ಸ್ವೀಕರಿಸಿದ್ದಾರೆ. ನಾಯಕತ್ವ ಹಸ್ತಾಂತರದ ಭಾರಿ ಒತ್ತಡದ ಮಧ್ಯೆಯೂ ಸಿಎಂ ನಡೆಸಿರುವ ಈ ರಾಜಕೀಯ ಕಾರ್ಯಾಚರಣೆ, ಕೇವಲ ಕಾಕತಾಳೀಯವಲ್ಲ; ಇದರ ಹಿಂದೆ ಹೈಕಮಾಂಡ್ ಹಾಗೂ ವಿರೋಧಿಗಳಿಗೆ ಏಕಕಾಲದಲ್ಲಿ ಬ್ರೇಕ್ ಹಾಕುವ ಭಾರಿ ತಂತ್ರಗಾರಿಕೆ ಅಡಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಧಿಕಾರ ಬಿಡುವ ಮುನ್ನ ‘ಅಹಿಂದ’ ಕನಸು ನನಸು?
ರಾಜಕೀಯ ಮೂಲಗಳ ಪ್ರಕಾರ, ಹೈಕಮಾಂಡ್ ಸೂಚನೆಯಂತೆ ಒಂದು ವೇಳೆ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದರೂ, ಅದಕ್ಕೂ ಮುನ್ನ ತಮ್ಮದೇ ಕನಸಿನ ಕೂಸಾದ ‘ಜಾತಿ ಸಮೀಕ್ಷೆ ವರದಿ’ಯನ್ನು ಸ್ವೀಕರಿಸಿ, ಅದರ ಅನುಷ್ಠಾನಕ್ಕೆ ಸ್ಪಷ್ಟ ಆದೇಶ ನೀಡಬೇಕು ಎಂಬುದು ಸಿದ್ದರಾಮಯ್ಯ ಅವರ ತೀವ್ರ ಬಯಕೆಯಾಗಿತ್ತು. ತಾವು ನಂಬಿಕೊಂಡು ಬಂದಿರುವ ‘ಸಾಮಾಜಿಕ ನ್ಯಾಯ’ ಮತ್ತು ‘ಅಹಿಂದ’ (AHINDA) ವರ್ಗಗಳ ಹಿತರಕ್ಷಣೆಯ ಬದ್ಧತೆಯನ್ನು ಸಾಬೀತುಪಡಿಸಲು ಇದಕ್ಕಿಂತ ಸೂಕ್ತ ಸಮಯ ಮತ್ತೊಂದಿಲ್ಲ ಎಂದು ಸಿಎಂ ಭಾವಿಸಿದ್ದಾರೆ ಎನ್ನಲಾಗಿದೆ. ವರದಿಯನ್ನು ಅಧಿಕೃತವಾಗಿ ಸ್ವೀಕರಿಸಿ, ಜಾರಿಗೆ ಆದೇಶಿಸುವ ಮೂಲಕ ತಾವು ಅಧಿಕಾರದಲ್ಲಿದ್ದರೂ ಇಲ್ಲದಿದ್ದರೂ ಹಿಂದುಳಿದ ವರ್ಗಗಳ ಪರಮೋಚ್ಚ ನಾಯಕ ತಾವೇ ಎಂಬುದನ್ನು ಇಡೀ ರಾಜ್ಯಕ್ಕೆ ಸಾರುವ ಯತ್ನ ಇದಾಗಿದೆ.
ಮುಂದಿನ ನಾಯಕನಿಗೆ ಸಿದ್ದರಾಮಯ್ಯ ಇಟ್ಟ ಮುಳ್ಳಿನ ಹಾದಿ?
ವಿಧಾನಸೌಧದಲ್ಲಿಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಅವರಿಂದ ಸಚಿವರಾದ ಎಚ್.ಸಿ. ಮಹದೇವಪ್ಪ ಮತ್ತು ಶಿವರಾಜ್ ತಂಗಡಗಿ ಅವರ ಸಮ್ಮುಖದಲ್ಲೇ ವರದಿ ಪಡೆದ ಸಿದ್ದರಾಮಯ್ಯ, ತಮ್ಮ ರಾಜಕೀಯ ಭವಿಷ್ಯದ ಕೊನೆಯ ಕಾರ್ಡ್ ಪ್ಲೇ ಮಾಡಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಅವರು ಈ ವರದಿ ಜಾರಿಗೆ ಆದೇಶ ನೀಡಿ ಹುದ್ದೆಯಿಂದ ಕೆಳಗಿಳಿದರೆ, ಮುಂದಿನ ಮುಖ್ಯಮಂತ್ರಿಯಾಗುವವರಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಲಿದೆ. ವೀರಶೈವ-ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳ ತೀವ್ರ ವಿರೋಧದ ನಡುವೆ, ಈ ವರದಿಯನ್ನು ಅನುಷ್ಠಾನಕ್ಕೆ ತರುವುದು ಮುಂದಿನ ಸಿಎಂಗೆ ಕತ್ತಿಯ ಮೇಲಿನ ನಡಿಗೆಯಾಗಲಿದೆ.
ಹೈಕಮಾಂಡ್‌ಗೆ ಪರೋಕ್ಷ ಸಂದೇಶ:
ರಾಷ್ಟ್ರೀಯ ಮಟ್ಟದಲ್ಲಿ ರಾಹುಲ್ ಗಾಂಧಿ ಅವರು ದೇಶಾದ್ಯಂತ ಜಾತಿ ಸಮೀಕ್ಷೆ ನಡೆಸಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಹೀಗಿರುವಾಗ ಕರ್ನಾಟಕದಲ್ಲಿ ತಾವು ಅದನ್ನು ಜಾರಿಗೆ ತರುತ್ತಿರುವುದನ್ನು ಹೈಕಮಾಂಡ್ ಕೂಡ ವಿರೋಧಿಸಲು ಸಾಧ್ಯವಿಲ್ಲ ಎಂಬ ಜಾಣ್ಮೆಯ ಲೆಕ್ಕಾಚಾರ ಸಿದ್ದರಾಮಯ್ಯ ಅವರದ್ದಾಗಿದೆ. ಒಟ್ಟಾರೆಯಾಗಿ, “ನಾಳೆ ಮಾತನಾಡುತ್ತೇನೆ” ಎಂದು ಸಸ್ಪೆನ್ಸ್ ಕಾಯ್ದುಕೊಂಡಿದ್ದ ಸಿದ್ದರಾಮಯ್ಯ, ರಾಜೀನಾಮೆಗೆ ಮುನ್ನವೇ ಈ ಐತಿಹಾಸಿಕ ವರದಿಗೆ ಮುದ್ರೆ ಒತ್ತುವ ಮೂಲಕ ಇಡೀ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸುವ ಬಿರುಗಾಳಿ ಎಬ್ಬಿಸಿದ್ದಾರೆ.

