ನವದೆಹಲಿ: ಕರ್ನಾಟಕದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ, ಸಚಿವ ಸಂಪುಟ ರಚನೆ ಹಾಗೂ ಪ್ರಮುಖ ಖಾತೆಗಳ ಹಂಚಿಕೆ ಕುರಿತಾದ ಹೈಕಮಾಂಡ್ ನಿರ್ಧಾರಗಳು ಅಂತಿಮ ಹಂತಕ್ಕೆ ತಲುಪಿವೆ. ನವದೆಹಲಿಯಲ್ಲಿರುವ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಬುಧವಾರ ಅತ್ಯಂತ ಪ್ರಮುಖವಾದ ಹೈವೋಲ್ಟೇಜ್ ಸಭೆ ನಡೆದಿದ್ದು, ರಾಜ್ಯದ ಪ್ರಮುಖ ನಾಯಕರು ಭಾಗಿಯಾಗಿದ್ದಾರೆ.
ಈ ಉನ್ನತ ಮಟ್ಟದ ಸಭೆಯಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ, ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಪಾಲ್ಗೊಂಡು ರಾಜ್ಯದ ಮುಂದಿನ ರಾಜಕೀಯ ಆಡಳಿತದ ನೀಲನಕ್ಷೆಯ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು. ದೆಹಲಿ ಹೋಟೆಲ್‌ನಿಂದ ನೇರವಾಗಿ ಖರ್ಗೆ ನಿವಾಸಕ್ಕೆ ಆಗಮಿಸಿದ ನಾಯಕರು, ಪ್ರಸ್ತುತ ರಾಜಕೀಯ ವಿದ್ಯಮಾನಗಳು ಮತ್ತು ಸಚಿವ ಸಂಪುಟದಲ್ಲಿ ಎಲ್ಲಾ ಸಮುದಾಯಗಳಿಗೆ ನೀಡಬೇಕಾದ ಪ್ರಾತಿನಿಧ್ಯದ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಪುಟ ಕಸರತ್ತು ಅಂತಿಮ:
ಹಲವು ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಯಾರಿಗೆಲ್ಲಾ ಸಚಿವ ಸ್ಥಾನ ನೀಡಬೇಕು, ಉನ್ನತ ಖಾತೆಗಳನ್ನು ಹೇಗೆ ಹಂಚಿಕೆ ಮಾಡಬೇಕು ಮತ್ತು ಮುಂಬರುವ ದಿನಗಳಲ್ಲಿ ಆಡಳಿತವನ್ನು ಹೇಗೆ ಸುಗಮವಾಗಿ ಕೊಂಡೊಯ್ಯಬೇಕು ಎಂಬ ಬಗ್ಗೆ ಹೈಕಮಾಂಡ್ ನಾಯಕರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಸಭೆಯ ಬಳಿಕ ಹೊರಬಂದ ನಾಯಕರು ಮಾಧ್ಯಮಗಳೊಂದಿಗೆ ಮಾತನಾಡಿ, “ಸಭೆ ಅತ್ಯಂತ ಸೌಹಾರ್ದಯುತವಾಗಿ ನಡೆದಿದ್ದು, ಹೈಕಮಾಂಡ್ ಸೂಚನೆಯಂತೆ ಎಲ್ಲವೂ ಸುಗಮವಾಗಿ ನಡೆಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಭೇಟಿಯ ಬೆನ್ನಲ್ಲೇ ಕರ್ನಾಟಕ ರಾಜಕೀಯ ವಲಯದಲ್ಲಿ ಮುಂದಿನ ಸಚಿವರ ಪಟ್ಟಿ ಯಾರದ್ದಿರಬಹುದು ಎಂಬ ಕುತೂಹಲ ತೀವ್ರಗೊಂಡಿದೆ.

