Sat. Jun 6th, 2026

ಲೋಕಭವನದ ಗಾಜಿನ ಮನೆಯಲ್ಲಿ ನಾಳೆ ‘ಡಿಕೆಶಿ’ ಪದಗ್ರಹಣ; ಪಾಸ್ ಇದ್ದವರಿಗಷ್ಟೇ ಎಂಟ್ರಿ, ನಿಯಮಗಳು ಇಲ್ಲಿವೆ..!

Share this with Friends

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದೀರ್ಘಕಾಲದಿಂದ ಭಾರಿ ಕುತೂಹಲ ಮತ್ತು ಚರ್ಚೆಗಳಿಗೆ ಕಾರಣವಾಗಿದ್ದ ನಾಯಕತ್ವ ಬದಲಾವಣೆ ಪ್ರಕ್ರಿಯೆ ಕೊನೆಗೂ ಅಧಿಕೃತಗೊಂಡಿದೆ. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಾಳೆ( ಬುಧವಾರದಂದು) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಲೋಕಭವನದ ಆವರಣದಲ್ಲಿರುವ ಸುಂದರ ಗಾಜಿನ ಮನೆಯಲ್ಲಿ ಈ ಐತಿಹಾಸಿಕ ಹಾಗೂ ಅದ್ದೂರಿ ಪದಗ್ರಹಣ ಸಮಾರಂಭ ಜರುಗಲಿದೆ

ಸಂಜೆ 4:05ಕ್ಕೆ ಶುಭ ಮುಹೂರ್ತ:

ಬುಧವಾರ ಮಧ್ಯಾಹ್ನ ನಂತರ ಸಂಜೆ 4:05 ಗಂಟೆಗೆ ಸರಿಯಾಗಿ ಆರಂಭವಾಗಲಿರುವ ನಿಗದಿತ ಶುಭ ಮುಹೂರ್ತದಲ್ಲಿ, ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನೂತನ ಮುಖ್ಯಮಂತ್ರಿ ಹಾಗೂ ಅವರ ನೂತನ ಸಚಿವ ಸಂಪುಟದ ಪ್ರಮುಖ ಸದಸ್ಯರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನವನ್ನು ಬೋಧಿಸಲಿದ್ದಾರೆ. ದಶಕಗಳ ಸುದೀರ್ಘ ರಾಜಕೀಯ ಹೋರಾಟ ಮತ್ತು ಸಂಘಟನಾ ಶಕ್ತಿಯ ಬಳಿಕ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಅತ್ಯುನ್ನತ ಸಿಎಂ ಗದ್ದುಗೆ ಏರುತ್ತಿರುವುದರಿಂದ ರಾಜ್ಯಾದ್ಯಂತ ಅವರ ಅಭಿಮಾನಿಗಳಲ್ಲಿ ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಭಾರಿ ಸಂಭ್ರಮ ಮನೆಮಾಡಿದೆ.

ಗಣ್ಯರಿಗೆ ಮಾತ್ರ ಪ್ರವೇಶ – ಕಟ್ಟುನಿಟ್ಟಿನ ಭದ್ರತಾ ನಿಯಮಗಳು:

ಈ ಪ್ರತಿಷ್ಠಿತ ಸಮಾರಂಭಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ವತಿಯಿಂದ ಅಧಿಕೃತ ಆಹ್ವಾನ ಪತ್ರಿಕೆಗಳನ್ನು ವಿತರಿಸಲಾಗುತ್ತಿದ್ದು, ಭದ್ರತಾ ದೃಷ್ಟಿಯಿಂದ ಕೇವಲ ಆಯ್ದ ವಿವಿಐಪಿ (VVIP) ಮತ್ತು ಗಣ್ಯ ಅತಿಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮಕ್ಕೆ ಹಾಜರಾಗುವ ಗಣ್ಯರಿಗಾಗಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ:

ಸಮಯ ಪಾಲನೆ ಕಡ್ಡಾಯ: ಆಹ್ವಾನಿತ ಗಣ್ಯರು ಮಧ್ಯಾಹ್ನ 2:00 ಗಂಟೆಯ ಒಳಗಾಗಿ ಲೋಕಭವನದ ತಮ್ಮ ನಿಗದಿತ ಆಸನಗಳಲ್ಲಿ ಉಪಸ್ಥಿತರಿರಬೇಕು.

ವರ್ಗಾವಣೆ ನಿಷೇಧ: ಅಧಿಕೃತ ಆಹ್ವಾನ ಪತ್ರಿಕೆಯು ಕೇವಲ ಒಬ್ಬರ ಪ್ರವೇಶಕ್ಕೆ ಮಾತ್ರ ಸೀಮಿತವಾಗಿದ್ದು, ಇದನ್ನು ಬೇರೆಯವರಿಗೆ ವರ್ಗಾಯಿಸಲು ಅವಕಾಶವಿರುವುದಿಲ್ಲ.

ಮೂಲ ಪತ್ರಿಕೆ ಕಡ್ಡಾಯ: ಕೇವಲ ಡಿಜಿಟಲ್ ಪ್ರತಿಗಳಿಗೆ ಮಾನ್ಯತೆ ಇರುವುದಿಲ್ಲ, ಭದ್ರತಾ ತಪಾಸಣೆಗಾಗಿ ಮೂಲ ಆಹ್ವಾನ ಪತ್ರಿಕೆಯನ್ನು ತರುವುದು ಕಡ್ಡಾಯವಾಗಿದೆ.

ಪದಗ್ರಹಣ ಸಮಾರಂಭದ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜಭವನ ಹಾಗೂ ಲೋಕಭವನದ ಸುತ್ತಮುತ್ತ ಇಡೀ ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಗಣ್ಯರ ಆಗಮನದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಂಚಾರ ದಟ್ಟಣೆ ನಿಯಂತ್ರಿಸಲು ಸಂಚಾರಿ ಪೊಲೀಸರು ವಿಶೇಷ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದಾರೆ.

 

 

 


Share this with Friends

Related Post