ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಇಂದು ಸಂಜೆ ಗುಡುಗು ಮತ್ತು ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು, ನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೇಸಿಗೆಯ ಶಾಖದಿಂದ ಕಂಗಾಲಾಗಿದ್ದ ಜನರಿಗೆ ವರುಣನ ಆಗಮನ ತಂಪೆರೆದಿದ್ದರೂ, ಸಂಜೆ ಕಚೇರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಸವಾರರಿಗೆ ಈ ದಿಢೀರ್ ಮಳೆ ದೊಡ್ಡ ಕಿರಕಿರಿಯಾಗಿ ಪರಿಣಮಿಸಿದೆ.
ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ವಿಜಯನಗರ, ಜಯನಗರ, ಬನಶಂಕರಿ, ಕೋರಮಂಗಲ, ಹೆಚ್ಎಸ್ಆರ್ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ ಮತ್ತು ಯಲಹಂಕ ಸೇರಿದಂತೆ ನಗರದ ಬಹುತೇಕ ಎಲ್ಲಾ ಭಾಗಗಳಲ್ಲಿ ಭಾರಿ ಮಳೆ ದಾಖಲಾಗಿದೆ. ಏಕಾಏಕಿ ಸುರಿದ ಮಳೆಯಿಂದಾಗಿ ರಸ್ತೆ ಬದಿಯ ಅಂಗಡಿಗಳು ಮತ್ತು ಬಸ್ ನಿಲ್ದಾಣಗಳು ಆಸರೆಗಾಗಿ ನಿಂತ ಜನರಿಂದ ತುಂಬಿಹೋಗಿದ್ದವು.
ಟ್ರಾಫಿಕ್ ಜಾಮ್ ಹಾಗೂ ರಸ್ತೆಗಳು ಬಂದ್:
ಐಟಿ ವಲಯದ ಪ್ರಮುಖ ರಸ್ತೆಗಳಾದ ಮಾರತಹಳ್ಳಿ ಮತ್ತು ಟೆಕ್ ಪಾರ್ಕ್ ಸುತ್ತಮುತ್ತಲಿನ ರಸ್ತೆಗಳು ಮಳೆನೀರಿನಿಂದಾಗಿ ಹೊಳೆಯಂತಾಗಿ ಮಾರ್ಪಟ್ಟಿವೆ. ದೇವರಬೀಸನಹಳ್ಳಿ ಮೇಲ್ಸೇತುವೆಯ ರ್ಯಾಂಪ್ ಹಾಗೂ ಇಕೋಸ್ಪೇಸ್ ಮುಂಭಾಗದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡ ಕಾರಣ, ಕಡುಬೀಸನಹಳ್ಳಿಯಿಂದ ಬೆಳ್ಳಂದೂರು ಕಡೆಗೆ ಸಾಗುವ ರಸ್ತೆಯಲ್ಲಿ ವಾಹನಗಳ ಸಂಚಾರ ಮಂದಗತಿಯಲ್ಲಿ ಸಾಗಿದೆ. ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ನೀರು ಸರಾಗವಾಗಿ ಹೋಗಲು ಮತ್ತು ಟ್ರಾಫಿಕ್ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
ಏರ್ಪೋರ್ಟ್ನಲ್ಲೂ ಮಳೆ ಎಫೆಕ್ಟ್:
ಮಳೆಯ ತೀವ್ರತೆ ಕೇವಲ ನಗರದ ರಸ್ತೆಗಳಿಗಷ್ಟೇ ಸೀಮಿತವಾಗದೆ ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ಪ್ರಭಾವ ಬೀರಿದೆ. ವಿಮಾನ ನಿಲ್ದಾಣದ ಸುತ್ತಮುತ್ತ ಗುಡುಗು ಸಹಿತ ಸುರಿದ ಭಾರಿ ಮಳೆಯಿಂದಾಗಿ ರನ್ವೇ ಸರಿಯಾಗಿ ಕಾಣಿಸದ ಕಾರಣ, ನವದೆಹಲಿಯಿಂದ ಆಗಮಿಸಿದ್ದ ವಿಮಾನವೊಂದಕ್ಕೆ ಸಕಾಲದಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಪೈಲಟ್ ಸುರಕ್ಷತೆಯ ದೃಷ್ಟಿಯಿಂದ ವಿಮಾನವನ್ನು ಕೆಲಕಾಲ ಆಕಾಶದಲ್ಲೇ ಸುತ್ತಾಡಿಸಬೇಕಾಯಿತು. ಇದೇ ವೇಳೆ ಏರ್ಪೋರ್ಟ್ನಿಂದ ನಗರದ ಕಡೆಗೆ ಬರಬೇಕಿದ್ದ ಪ್ರಯಾಣಿಕರು ಕೂಡ ಸಾರಿಗೆ ವ್ಯವಸ್ಥೆ ಸಿಗದೆ ಪರದಾಡಿದರು. ಹವಾಮಾನ ಇಲಾಖೆಯು ಇನ್ನು ಕೆಲವು ದಿನಗಳ ಕಾಲ ನಗರದಲ್ಲಿ ಮಳೆ ಮುಂದುವರಿಯುವ ಸೂಚನೆ ನೀಡಿದೆ.

