ಬೆಂಗಳೂರು: ನಾಳೆ ಸಂಜೆ 4:05ಕ್ಕೆ ಸರಿಯಾಗಿ ಜರುಗಲಿರುವ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿಲಿಕಾನ್ ಸಿಟಿ ಸಜ್ಜಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕೇವಲ ರಾಜಕೀಯ ಮುಖಂಡರಷ್ಟೇ ಅಲ್ಲದೆ, ನಾಡು-ನುಡಿಯ ರಕ್ಷಕರೆನಿಸಿಕೊಂಡಿರುವ ಕನ್ನಡಪರ ಸಂಘಟನೆಗಳ ಮುಖಂಡರು, ತಳಮಟ್ಟದ ಶ್ರಮಿಕ ವರ್ಗ, ಸಾಂಸ್ಕೃತಿಕ ಲೋಕ ಮತ್ತು ಉದ್ಯಮ ರಂಗದ ಪ್ರಮುಖರು ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಗಣ್ಯ ಅತಿಥಿಗಳಿಗೆ ಅಧಿಕೃತ ಆಹ್ವಾನ ಪತ್ರಿಕೆಯನ್ನು ರವಾನಿಸಲಾಗಿದೆ.
ಕನ್ನಡ ಅಸ್ಮಿತೆಗೆ ಮುಂಚೂಣಿ ಗೌರವ:
ರಾಜ್ಯದ ನೂತನ ಸಾರಥಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರು ಈ ಸಮಾರಂಭದಲ್ಲಿ ಕನ್ನಡ ನೆಲದ ಸಂಸ್ಕೃತಿ ಹಾಗೂ ಭಾಷಾ ಹೋರಾಟಗಾರರಿಗೆ ವಿಶೇಷ ಮನ್ನಣೆ ನೀಡಿದ್ದಾರೆ. ರಾಜ್ಯದ ವಿವಿಧ ಭಾಗಗಳ ಪ್ರಮುಖ ಕನ್ನಡಪರ ಸಂಘಟನೆಗಳ ಮುಖಂಡರುಗಳನ್ನು ಕಾರ್ಯಕ್ರಮಕ್ಕೆ ಗೌರವಪೂರ್ವಕವಾಗಿ ಆಹ್ವಾನಿಸಲಾಗಿದ್ದು, ಇವರಿಗಾಗಿ ವಿಶೇಷ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ರಾಜಕೀಯ ಮತ್ತು ಸಾಂಸ್ಕೃತಿಕ ದಿಗ್ಗಜರ ಸಮ್ಮುಖ:
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹೈಕಮಾಂಡ್ ಪರವಾಗಿ ಭಾಗವಹಿಸಲಿದ್ದಾರೆ. ಇವರೊಂದಿಗೆ ವಿವಿಧ ರಾಜ್ಯಗಳ ಹಾಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಸಂಸದರು ದೆಹಲಿ ಮತ್ತು ಇತರ ರಾಜ್ಯಗಳಿಂದ ಆಗಮಿಸುತ್ತಿದ್ದಾರೆ. ಸಾಮಾಜಿಕ ಮತ್ತು ಧಾರ್ಮಿಕ ಸಾಮರಸ್ಯದ ಸಂಕೇತವಾಗಿ ನಾಡಿನ ಸರ್ವಧರ್ಮ ಗುರುಗಳು ಭಾಗವಹಿಸಿ ಆಶೀರ್ವದಿಸಲಿದ್ದಾರೆ.
ದೊಡ್ಡಾಲಹಳ್ಳಿ ಶಾಲಾ ಮಕ್ಕಳು ಮತ್ತು ಶ್ರಮಿಕ ವರ್ಗ:
ಡಿ.ಕೆ. ಶಿವಕುಮಾರ್ ಅವರು ತಾವು ಓದಿದ ಕನಕಪುರದ ದೊಡ್ಡಾಲಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಈ ಸಮಾರಂಭಕ್ಕೆ ವಿಶೇಷವಾಗಿ ಆಹ್ವಾನಿಸಿ ತಮ್ಮ ನಡೆದು ಬಂದ ಹಾದಿಯನ್ನು ಸ್ಮರಿಸಿದ್ದಾರೆ. ಇವರೊಂದಿಗೆ ಸಮಾಜದ ಬೆನ್ನೆಲುಬಾಗಿರುವ ಕೂಲಿ ಕಾರ್ಮಿಕರು, ಪೌರಕಾರ್ಮಿಕರು, ರೈತ ಮುಖಂಡರು, ದಲಿತ ಸಂಘಟನೆಗಳ ನಾಯಕರು, ಹಿಂದುಳಿದ ವರ್ಗಗಳ ಮುಖಂಡರು, ಸ್ತ್ರೀ ಶಕ್ತಿ ಸಂಘಗಳ ಪ್ರತಿನಿಧಿಗಳು ಹಾಗೂ ಮಹಿಳಾ ನಾಯಕಿಯರನ್ನು ಸಮಾರಂಭಕ್ಕೆ ಗೌರವಪೂರ್ವಕವಾಗಿ ಆಹ್ವಾನಿಸಲಾಗಿದೆ.
ವಿವಿಧ ರಂಗಗಳ ಪ್ರಮುಖರ ದಂಡು:
ಸಿನೆಮಾ ರಂಗದ ತಾರೆಯರು, ನ್ಯಾಯಾಂಗ ವಲಯದ ಪ್ರಮುಖರು, ಕ್ರೀಡಾ ಕ್ಷೇತ್ರದ ಸಾಧಕರು, ನಾಟಕ ರಂಗದ ಗಣ್ಯರು, ಸಾಹಿತಿಗಳು ಹಾಗೂ ವಿವಿಧ ಕಲಾ ಪ್ರಕಾರಗಳ ಕಲಾವಿದರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಉದ್ಯಮ ವಲಯಕ್ಕೆ ಬೂಸ್ಟ್ ನೀಡುವ ನಿಟ್ಟಿನಲ್ಲಿ ಪ್ರಮುಖ ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು, ಹೋಟೆಲ್ ಉದ್ಯಮದ ಪ್ರಮುಖರು ಮತ್ತು ಯುವ ಮುಖಂಡರಿಗೂ ಆಹ್ವಾನ ಪತ್ರಿಕೆ ನೀಡಲಾಗಿದೆ.
ವಿವಿಐಪಿಗಳ ಭದ್ರತೆಯ ದೃಷ್ಟಿಯಿಂದ ಲೋಕಭವನದ ಸುತ್ತಮುತ್ತ ಕೋಟೆಯಂತಹ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಆಹ್ವಾನ ಪತ್ರಿಕೆ ಇರುವ ಗಣ್ಯರು ಮಧ್ಯಾಹ್ನ 2:00 ಗಂಟೆಯ ಒಳಗೆ ತಮ್ಮ ನಿಗದಿತ ಆಸನಗಳಲ್ಲಿ ಉಪಸ್ಥಿತರಿರಬೇಕೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

