ಬೆಂಗಳೂರು: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಪಕ್ಷದ ನಾಯಕರು ಹಾಗೂ ಶಾಸಕರಿಗೆ ಮೊದಲ ಖಡಕ್ ವಾರ್ನಿಂಗ್ ನೀಡಿದ್ದಾರೆ. “ಯಾರಿಗೆ ಅಧಿಕಾರ ಮತ್ತು ಸ್ಥಾನಮಾನಗಳ ವ್ಯಾಮೋಹವಿದೆಯೋ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆ ಹೋಗಲಿ. ಆದರೆ, ಕಾಂಗ್ರೆಸ್ ಪಕ್ಷವನ್ನು ಪ್ರಾಮಾಣಿಕವಾಗಿ ಕಟ್ಟಬಯಸುವವರು ಮಾತ್ರ ನನ್ನ ಜೊತೆ ಬರಲಿ” ಎಂದು ಅವರು ನೇರವಾಗಿಯೇ ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಕಾಂಗ್ರೆಸ್ ಹೈಕಮಾಂಡ್ ಜೂನ್ 3 ರಂದು ಬಿ.ಕೆ. ಹರಿಪ್ರಸಾದ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಈ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಿ ಅಧಿಕಾರ ಮತ್ತು ಪಕ್ಷದ ಸಂಘಟನೆಯ ನಡುವೆ ಸ್ಪಷ್ಟ ಗೆರೆ ಎಳೆದಿದ್ದಾರೆ.
ಅಧಿಕಾರ ಮುಖ್ಯವಲ್ಲ, ಸಂಘಟನೆ ಮುಖ್ಯ:
ತಮಗೆ ಯಾವುದೇ ಸಚಿವ ಸ್ಥಾನ ಅಥವಾ ಸರ್ಕಾರದ ಅಧಿಕಾರದ ಆಸೆಯಿಲ್ಲ ಎಂದು ಸ್ಪಷ್ಟಪಡಿಸಿದ ನೂತನ ಅಧ್ಯಕ್ಷರು, ಕೇವಲ ಹುದ್ದೆಗಳ ಬೆನ್ನ ಹಿಂದೆ ಬೀಳುವವರು ಸರ್ಕಾರದ ಕಡೆ ಗಮನಹರಿಸಬಹುದು ಎಂದರು. ಬೂತ್ ಮಟ್ಟದಿಂದ ಪಕ್ಷವನ್ನು ಸೈದ್ಧಾಂತಿಕವಾಗಿ ಬಲಪಡಿಸುವುದು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವುದೇ ತಮ್ಮ ಮೊದಲ ಆದ್ಯತೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮುಂಬರುವ ದಿನಗಳಲ್ಲಿ ಪಕ್ಷದಲ್ಲಿ ಕೇವಲ ಶ್ರಮಜೀವಿಗಳಿಗೆ ಮಾತ್ರ ಮನ್ನಣೆ ಸಿಗಲಿದೆ ಎಂಬ ಮುನ್ಸೂಚನೆಯನ್ನು ಮೊದಲ ದಿನವೇ ನೀಡಿದ್ದಾರೆ.

