ಬೆಂಗಳೂರು: ರಾಜ್ಯ ಸರ್ಕಾರದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಯು ಪ್ರತಿದಿನ ಬೆಳಗ್ಗೆ 10:00 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು ಎಂದು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಈ ಕುರಿತು ಅಧಿಕೃತ ಟಿಪ್ಪಣಿಯೊಂದನ್ನು ಹೊರಡಿಸಿದ್ದು, ಲೇಟ್ ಲತೀಫ್ ನೌಕರರಿಗೆ ಬಿಸಿ ಮುಟ್ಟಿಸಲು ಸರ್ಕಾರ ಮುಂದಾಗಿದೆ.
ಇ-ಆಡಳಿತ ಇಲಾಖೆಯು ಸಿದ್ಧಪಡಿಸಿರುವ ‘ಕರ್ತವ್ಯ (KAAMS) ಆ್ಯಪ್’ ಮೂಲಕವೇ ಇನ್ಮುಂದೆ ಹಾಜರಾತಿಯನ್ನು ಕಡ್ಡಾಯವಾಗಿ ನಿರ್ವಹಿಸಬೇಕಾಗಿದೆ. ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸೇರಿದಂತೆ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಬೆಳಗ್ಗೆ 10:00 ಗಂಟೆಗೆ ಕಚೇರಿಗೆ ಬಂದಾಗ ‘ಚೆಕ್ ಇನ್’ (Check In) ಮತ್ತು ಸಂಜೆ ಕಚೇರಿಯಿಂದ ನಿರ್ಗಮಿಸುವಾಗ ‘ಚೆಕ್ ಔಟ್’ (Check Out) ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ವಿಶೇಷವೆಂದರೆ, ಕೃತಕ ಬುದ್ಧಿಮತ್ತೆ (AI) ತಂತ್ರಾಂಶದ ಸಹಾಯದಿಂದ ಪ್ರತಿದಿನ ಬೆಳಗ್ಗೆ 10:00 ಗಂಟೆಗೆ ಹಾಜರಾತಿ ದಾಖಲಿಸಿದವರ ಜಿಲ್ಲಾವಾರು ಹಾಗೂ ಕಚೇರಿವಾರು ವರದಿಯು ಸ್ವಯಂಚಾಲಿತವಾಗಿ ಆಯಾ ಇಲಾಖೆಯ ಮುಖ್ಯಸ್ಥರಿಗೆ ರವಾನೆಯಾಗಲಿದೆ. ಈ ಮೂಲಕ ಕಚೇರಿಗೆ ತಡವಾಗಿ ಬರುವ ಸಿಬ್ಬಂದಿಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲು ಸರ್ಕಾರ ಮುಂದಾಗಿದೆ.
ನೂತನ ಆದೇಶದ ಪ್ರಕಾರ, ಎಲ್ಲಾ ಇಲಾಖೆಗಳ ಮುಖ್ಯಸ್ಥರು ಪ್ರತಿದಿನ ತಮ್ಮ ವೈಯಕ್ತಿಕ ಲಾಗಿನ್ (Login) ಮೂಲಕ ‘ಕರ್ತವ್ಯ ಡ್ಯಾಶ್‌ಬೋರ್ಡ್’ ಪರಿಶೀಲಿಸುವುದು ಕಡ್ಡಾಯವಾಗಿದೆ. ಕಚೇರಿಯ ಸಿಬ್ಬಂದಿಗಳ ಹಾಜರಾತಿ ವರದಿಯನ್ನು ನಿರಂತರವಾಗಿ ಗಮನಿಸಿ, ನಿಗದಿತ ಸಮಯಕ್ಕೆ ಹಾಜರಾಗದ ಅಥವಾ ಗೈರಾದ ನೌಕರರಿಗೆ ತಕ್ಷಣವೇ ಸೂಕ್ತ ಸೂಚನೆ ಹಾಗೂ ನೋಟಿಸ್ ನೀಡಲು ಸೂಚಿಸಲಾಗಿದೆ.
ಅಧಿಕೃತ ಪ್ರವಾಸದಲ್ಲಿದ್ದವರಿಗೂ ಆನ್‌ಲೈನ್ ನಿಯಮ:
ಒಂದು ವೇಳೆ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಕಚೇರಿ ಕೆಲಸದ ನಿಮಿತ್ತ ಹೊರಗಡೆ ಪ್ರವಾಸದಲ್ಲಿದ್ದರೆ (On Official Duty), ಅವರು ಅಲ್ಲಿಂದಲೇ ಆ್ಯಪ್‌ನಲ್ಲಿ ಲಭ್ಯವಿರುವ ‘OOD Option’ ಅನ್ನು ಬಳಸಬೇಕಾಗುತ್ತದೆ. ಅಲ್ಲಿ ತಮ್ಮ ಪ್ರವಾಸದ ಉದ್ದೇಶವನ್ನು ಕಡ್ಡಾಯವಾಗಿ ನಮೂದಿಸಿ ಆನ್‌ಲೈನ್ ಮೂಲಕವೇ ಹಾಜರಾತಿ ದಾಖಲಿಸಬೇಕು. ಈ ರೀತಿ ದಾಖಲಿಸಿದ ಮಾಹಿತಿಯನ್ನು ಸಂಬಂಧಪಟ್ಟ ಮೇಲಾಧಿಕಾರಿಗಳು ಪರಿಶೀಲಿಸಿ ದೃಢೀಕರಿಸಬೇಕಾಗುತ್ತದೆ. ಈ ಇಡೀ ಪ್ರಕ್ರಿಯೆಯನ್ನು ಅತ್ಯಂತ ತುರ್ತು ಮತ್ತು ಕಡ್ಡಾಯ ಎಂದು ಪರಿಗಣಿಸಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

