ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ 4,399 ದಿನಗಳ ನಿರಂತರ ಸೇವೆ ಪೂರೈಸಿ, ಐತಿಹಾಸಿಕ ದಾಖಲೆ ನಿರ್ಮಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ನಗರದ ಮಲ್ಲೇಶ್ವರಂನಲ್ಲಿರುವ ಐತಿಹಾಸಿಕ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿದರು
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2014ರ ಮೇ ತಿಂಗಳಿನಲ್ಲಿ ಅಧಿಕಾರ ವಹಿಸಿಕೊಂಡ ದಿನದಿಂದ ಇಂದಿನವರೆಗೆ ಮೋದಿ ಅವರು ದೇಶದ ‘ಪ್ರಧಾನ ಸೇವಕ’ ಎಂಬ ಭಾವನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಸುದೀರ್ಘ ಅವಧಿಗೆ ದೇಶ ಮುನ್ನಡೆಸುತ್ತಿರುವ ಅವರ ಸಾಧನೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ‘ವಿಕಸಿತ ಭಾರತ’ ಹಾಗೂ ‘ಆತ್ಮನಿರ್ಭರ ಭಾರತ’ದ ಕನಸುಗಳು ನನಸಾಗಲಿ ಎಂದು ಆಶಿಸಿ, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಐತಿಹಾಸಿಕ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿರುವುದಾಗಿ ವಿಜಯೇಂದ್ರ ತಿಳಿಸಿದರು. ದೇಶವನ್ನು ಮತ್ತಷ್ಟು ಪ್ರಗತಿಯತ್ತ ಮುನ್ನಡೆಸಲು ಮತ್ತು ಸಾರ್ವಜನಿಕರ ಕಲ್ಯಾಣಕ್ಕಾಗಿ ಶ್ರಮಿಸಲು ಪ್ರಧಾನಿಯವರಿಗೆ ಭಗವಂತನು ಸುದೀರ್ಘ ಆಯುಷ್ಯ ಹಾಗೂ ಹೆಚ್ಚಿನ ಶಕ್ತಿ ನೀಡಲಿ ಎಂದು ತಾವು ದೇವ ಸನ್ನಿಧಿಯಲ್ಲಿ ಪ್ರಾರ್ಥಿಸಿರುವುದಾಗಿ ಅವರು ಹೇಳಿದರು.
ಜಾಗತಿಕ ಮಟ್ಟದ ಹತ್ತಾರು ಸವಾಲುಗಳ ನಡುವೆಯೂ ಒಂದು ದಿನವೂ ವಿಶ್ರಾಂತಿ ಪಡೆಯದೆ ಮೋದಿ ಅವರು ದೇಶಕ್ಕೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ ಎಂದು ವಿಜಯೇಂದ್ರ ಶ್ಲಾಘಿಸಿದರು. ಕೃಷಿ, ಮೂಲಸೌಕರ್ಯ, ತಂತ್ರಜ್ಞಾನ ಹಾಗೂ ಆರೋಗ್ಯ ಕ್ಷೇತ್ರ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒತ್ತು ನೀಡಿದೆ. ಇದರ ಫಲವಾಗಿ ಇಂದು ಭಾರತವು ಜಗತ್ತಿನ ನಾಲ್ಕನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಪ್ರಧಾನಿಯವರ ದಿಟ್ಟ ನಾಯಕತ್ವ ಮತ್ತು ದೂರದರ್ಶಿತ್ವವೇ ಪ್ರಮುಖ ಕಾರಣ ಎಂದು ಅವರು ತಿಳಿಸಿದರು

