Wed. Jun 10th, 2026

ರಾಜ್ಯಸಭೆ ಸ್ಥಾನಕ್ಕಿಂತ ಮೋದಿ ಅವರೊಂದಿಗಿನ ಬಾಂಧವ್ಯ ಮಿಗಿಲಾದದ್ದು: ಮಾಜಿ ಪ್ರಧಾನಿ ದೇವೇಗೌಡ

Share this with Friends

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ನನ್ನ ನಡುವಿನ ಸ್ನೇಹ ಹಾಗೂ ಬಾಂಧವ್ಯವು ಕೇವಲ ಒಂದು ರಾಜ್ಯಸಭೆ ಸ್ಥಾನಕ್ಕೆ ಸೀಮಿತವಾದುದಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಸ್ಪಷ್ಟಪಡಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಾದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಎಪ್ಪತ್ತು ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ನನಗೆ ಅಧಿಕಾರಕ್ಕಿಂತ ಜನಸೇವೆಯೇ ಮುಖ್ಯವಾಗಿತ್ತೇ ಹೊರತು, ಮತ್ತೊಮ್ಮೆ ರಾಜ್ಯಸಭೆ ಸದಸ್ಯನಾಗಬೇಕು ಎಂಬ ವ್ಯಾಮೋಹ ನನಗಿಲ್ಲ ಎಂದು ವಿನಯಪೂರ್ವಕವಾಗಿ ನುಡಿದರು.

ಕಳೆದೆರಡು ದಿನಗಳಿಂದ ರಾಜ್ಯಸಭೆ ಚುನಾವಣೆಯ ಟಿಕೆಟ್ ವಿಚಾರವಾಗಿ ತಮ್ಮ ಹೆಸರನ್ನು ಬಳಸಿ ನಡೆಯುತ್ತಿರುವ ಅನಗತ್ಯ ಚರ್ಚೆಗಳಿಗೆ ದೇವೇಗೌಡರು ಈ ಮೂಲಕ ತೆರೆ ಎಳೆದರು. ಈ ಪ್ರಕ್ರಿಯೆಯಿಂದ ತಮಗೆ ಅಪಮಾನವಾಗಿದೆ ಎಂದು ಕೆಲವರು ಸುಖಾಸುಮ್ಮನೆ ಹೇಳಿಕೆಗಳನ್ನು ನೀಡುತ್ತಿದ್ದು, ಅಂತಹ ಮಾತುಗಳಿಗೆ ತಾವು ಯಾವುದೇ ಮಹತ್ವ ನೀಡುವುದಿಲ್ಲ ಎಂದು ಅವರು ತಿಳಿಸಿದರು.

ಒಂದು ಕಾಲದಲ್ಲಿ ತಾವು ಮೋದಿಯವರನ್ನು ಕಟುವಾಗಿ ಟೀಕಿಸಿದ್ದು ನಿಜವಾದರೂ, ಕಳೆದ ಹಲವು ವರ್ಷಗಳಿಂದ ಅವರ ಕಾರ್ಯವೈಖರಿಯನ್ನು ಹತ್ತಿರದಿಂದ ನೋಡಿ ಅರ್ಥ ಮಾಡಿಕೊಂಡಿದ್ದೇನೆ. ಅವರ ಉತ್ತಮ ಕೆಲಸಗಳನ್ನು ತಾವು ಹೃದಯಪೂರ್ವಕವಾಗಿ ಶ್ಲಾಘಿಸಿದ್ದು, ಪ್ರಧಾನಿಯವರ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹಿರಿಯ ನಾಯಕರು ಒತ್ತಿ ಹೇಳಿದರು.

ಇದೇ ವೇಳೆ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ತಾವು ರಾಜಕೀಯವಾಗಿ ಸುಮ್ಮನೆ ಕೂರುವುದಿಲ್ಲ ಎಂದರು. ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ತಮ್ಮ ಶಕ್ತಿ ಮೀರಿ ಶ್ರಮಿಸುವುದಾಗಿ ಹಾಗೂ ರಾಜ್ಯ-ದೇಶದ ಹಿತಾಸಕ್ತಿಯ ವಿಚಾರ ಬಂದಾಗ ಸಂಸತ್ತಿನ ಒಳಗೆ ಮತ್ತು ಹೊರಗೆ ತಮ್ಮ ಧ್ವನಿ ಎತ್ತುತ್ತಲೇ ಇರುವುದಾಗಿ ವಿವರಿಸಿದರು.

ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಅಪಾರ ಗೌರವವಿದ್ದು, ಇದರಿಂದ ರಾಷ್ಟ್ರದ ಕೀರ್ತಿ ಹೆಚ್ಚುತ್ತಿದೆ. ಅವರೊಂದಿಗೆ ತಾವು ಹೊಂದಿರುವ ವೈಯಕ್ತಿಕ ಬಾಂಧವ್ಯವನ್ನು ರಾಜಕೀಯ ಕಾರಣಗಳಿಗಾಗಿ ಕಳೆದುಕೊಳ್ಳಲು ಬಯಸುವುದಿಲ್ಲ. ತಾವು ಸಂಸತ್ತಿನಲ್ಲಿ ಇರಲಿ ಅಥವಾ ಇಲ್ಲದಿರಲಿ, ಮೋದಿ ಅವರೊಂದಿಗಿನ ಒಡನಾಟ ಕೊನೆಯವರೆಗೂ ಹೀಗೆಯೇ ಮುಂದುವರಿಯಲಿದೆ ಎಂದು ಮಾಜಿ ಪ್ರಧಾನಿಗಳು ಸ್ಪಷ್ಟಪಡಿಸಿದರು.

ಸ್ಥಾನಕ್ಕಾಗಿ ಹಾತೊರೆಯುವ ಅಗತ್ಯ ನನಗಿಲ್ಲ; 

ತಾವು 1954-55ರ ಅವಧಿಯಿಂದಲೇ ಸಕ್ರಿಯ ರಾಜಕಾರಣದಲ್ಲಿದ್ದು, ಅಂದು ಕೇವಲ ಗುತ್ತಿಗೆ ಕೆಲಸ ಮಾಡುತ್ತಾ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಸಾರ್ವಜನಿಕ ಜೀವನಕ್ಕೆ ಬಂದಿರುವುದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸ್ಮರಿಸಿದ್ದಾರೆ. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಜನರ ಮಧ್ಯೆಯೇ ಬದುಕಿರುವುದರಿಂದ, ಇಂದು ಯಾವುದೇ ಒಂದು ಸ್ಥಾನಕ್ಕಾಗಿ ತಾವು ಹಾತೊರೆಯುವ ಅಗತ್ಯವಿಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೇಲಿಟ್ಟಿರುವ ವಿಶ್ವಾಸದ ಮುಂದೆ ಇಂತಹ ರಾಜಕೀಯ ಟೀಕೆಗಳು ಅತ್ಯಂತ ಸಣ್ಣವು ಎಂದು ತಿರುಗೇಟು ನೀಡಿದರು. ಮಾಧ್ಯಮಗಳಲ್ಲಿ ತಮ್ಮ ಹೆಸರು ಪ್ರಚಾರವಾಗಿದ್ದು ಬಿಟ್ಟರೆ, ತಾವು ಎಲ್ಲಿಯೂ ರಾಜ್ಯಸಭೆ ಸ್ಥಾನ ಬೇಕೆಂದು ಬೇಡಿಕೆ ಇಟ್ಟಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷದ ನಾಯಕರು ಈ ವಿಚಾರವನ್ನೇ ದೊಡ್ಡದಾಗಿ ಬಿಂಬಿಸಿ ರಾಜಕೀಯ ಬಣ್ಣ ಬಳಿಯಲು ಯತ್ನಿಸುತ್ತಿದ್ದಾರೆ ಎಂದು ದೇವೇಗೌಡರು ದೂರಿದರು. ತಮಗೆ ರಾಜ್ಯಸಭೆಗೆ ಸ್ಪರ್ಧಿಸುವ ಆಸಕ್ತಿ ಇದ್ದಿದ್ದೇ ಆದಲ್ಲಿ, ಕಳೆದ ಮೇ 26ರಂದು ನವದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚಿಸುತ್ತಿದ್ದೆ. ಆದರೆ ತಾವು ಅಂತಹ ಯಾವುದೇ ಮಾತುಕತೆ ನಡೆಸದೆ ಕಾರ್ಯಕ್ರಮ ಮುಗಿದ ತಕ್ಷಣ ಬೆಂಗಳೂರಿಗೆ ಮರಳಿರುವುದಾಗಿ ಮಾಹಿತಿ ನೀಡಿದರು.

ವಿರೋಧ ಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸಲು ತಮಗೆ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರ ಹಿತ ಕಾಯಲು ತಾವು ಸದಾ ಮುಂಚೂಣಿಯಲ್ಲಿ ಇರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಇವತ್ತು ಒಂದು ವಿಷಯ ಇಟ್ಟುಕೊಂಡು ನನ್ನ ಬಗ್ಗೆ ಇಷ್ಟೆಲ್ಲಾ ಅನುಕಂಪದ ನಾಟಕ ಆಡುತ್ತಿರುವ ಕಾಂಗ್ರೆಸ್ ನಾಯಕರು ಹಿಂದೆಲ್ಲಾ ನನ್ನ ವಿಚಾರದಲ್ಲಿ ಹೇಗೆಲ್ಲಾ ನಡೆದುಕೊಂಡರು ಎಂಬುದು ಗೊತ್ತಿದೆ. ಇದರ ಬಗ್ಗೆ ಹೇಳುತ್ತಾ ಹೋದರೆ ಬಹಳಷ್ಟು ಹೇಳಬಹುದು. ನನಗೆ ಅದರ ಬಗ್ಗೆ ಆಸಕ್ತಿ ಇಲ್ಲ ಎಂದು ಅವರು ತಿಳಿಸಿದರು.

 


Share this with Friends

Related Post