Wed. Jun 10th, 2026

ರಾಜ್ಯಸಭಾ ಅಭ್ಯರ್ಥಿ ನಾಮಪತ್ರ ತಿರಸ್ಕಾರ: ಮೋದಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

Share this with Friends

ಬೆಂಗಳೂರು: ದೇಶದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಮೂಲಕ ದೀರ್ಘಾವಧಿ ಪ್ರಧಾನಿಯಾಗಿ ಮುಂದುವರಿದಿರುವ ನರೇಂದ್ರ ಮೋದಿ ಅವರ ಸಾಧನೆಯನ್ನು ಬಿಜೆಪಿ ಸಂಭ್ರಮಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಬಗೆದ ಅತಿದೊಡ್ಡ ದ್ರೋಹ ಎಂದು ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮೀನಾಕ್ಷಿ ನಟರಾಜನ್‌ ಅವರ ನಾಮಪತ್ರವನ್ನು ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿರುವ ಚುನಾವಣಾ ಆಯೋಗವು ತಿರಸ್ಕರಿಸಿರುವುದು ದೇಶದ ಇಂದಿನ ಪ್ರಜಾಪ್ರಭುತ್ವದ ದುಸ್ಥಿತಿಗೆ ಜ್ವಲಂತ ಉದಾಹರಣೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಮೀನಾಕ್ಷಿ ನಟರಾಜನ್‌ ಅವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳಿರಲಿಲ್ಲ. ಆದರೂ ರಾಜಕೀಯ ಷಡ್ಯಂತ್ರದ ಭಾಗವಾಗಿ ಇಲ್ಲದ ತಪ್ಪುಗಳನ್ನು ಸೃಷ್ಟಿಸಿ ನಾಮಪತ್ರ ತಿರಸ್ಕರಿಸಲಾಗಿದೆ. ಇದು ಸ್ಪಷ್ಟ ಚುನಾವಣಾ ಅಕ್ರಮ ಮತ್ತು ಆಡಳಿತ ಪಕ್ಷದ ವ್ಯವಸ್ಥಿತ ಸಂಚು ಎಂದು ಅವರು ದೂರಿದ್ದಾರೆ.

ಮಧ್ಯಪ್ರದೇಶದಿಂದ ಕೇವಲ ಇಬ್ಬರು ಅಭ್ಯರ್ಥಿಗಳನ್ನು ಮಾತ್ರ ಗೆಲ್ಲಿಸಿಕೊಳ್ಳಲು ಸಂಖ್ಯಾಬಲ ಹೊಂದಿದ್ದರೂ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಕಾಂಗ್ರೆಸ್‌ ಶಾಸಕರಿಗೆ ದೊಡ್ಡ ಮಟ್ಟದ ಹಣದ ಆಮಿಷ ಒಡ್ಡಿ, ಕುದುರೆ ವ್ಯಾಪಾರದ ಮೂಲಕ ಗೆಲ್ಲಲು ಹುನ್ನಾರ ನಡೆಸಿತ್ತು. ಆದರೆ ಕಾಂಗ್ರೆಸ್ ಶಾಸಕರು ಒಗ್ಗಟ್ಟಿನಿಂದ ಇದ್ದಿದ್ದರಿಂದ ಬಿಜೆಪಿಯ ಆಟ ನಡೆಯಲಿಲ್ಲ. ಇದೇ ಕಾರಣಕ್ಕೆ ಕೊನೆಯ ಅಸ್ತ್ರವಾಗಿ ಚುನಾವಣಾ ಆಯೋಗವನ್ನು ಬಳಸಿಕೊಂಡು ನಾಮಪತ್ರವನ್ನೇ ತಿರಸ್ಕರಿಸಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಚುನಾವಣಾ ಆಯೋಗದ ನಿರ್ಧಾರ ಪಕ್ಷಪಾತ ಮತ್ತು ಸಂವಿಧಾನ ವಿರೋಧಿ: 

ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್‌ ಅವರ ನಾಮಪತ್ರ ತಿರಸ್ಕರಿಸಿರುವುದು ಸಂಪೂರ್ಣವಾಗಿ ಕಾನೂನು ಬಾಹಿರ ಮತ್ತು ಪಕ್ಷಪಾತದ ನಡೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನಿನ ಚೌಕಟ್ಟಿನಡಿಯಲ್ಲಿ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲದಿದ್ದರೂ, ಕೇವಲ ಖಾಸಗಿ ದೂರೊಂದರ ಶೋಕಾಸ್ ನೋಟಿಸ್ ಅನ್ನು ಮುಂದಿಟ್ಟುಕೊಂಡು ನಾಮಪತ್ರ ತಿರಸ್ಕರಿಸಿರುವುದು ಆಯೋಗದ ಸ್ವತಂತ್ರ ಅಸ್ತಿತ್ವವನ್ನು ಪ್ರಶ್ನಿಸುವಂತಿದೆ ಎಂದು ಅವರು ದೂರಿದ್ದಾರೆ.

ಖಾಸಗಿ ದೂರು ಎಂದಿಗೂ ಅಪರಾಧ ಪ್ರಕರಣವಾಗುವುದಿಲ್ಲ ಮತ್ತು ಶೋಕಾಸ್ ನೋಟಿಸ್ ವಿವರಗಳನ್ನು ಅಫಿಡವಿಟ್‌ನಲ್ಲಿ ಸೇರಿಸುವ ಅಗತ್ಯವಿಲ್ಲ ಎಂದು ಚುನಾವಣಾ ಆಯೋಗದ ನಿಯಮಗಳೇ ಸ್ಪಷ್ಟಪಡಿಸುತ್ತವೆ. ಹೀಗಿದ್ದೂ ನಾಮಪತ್ರ ತಿರಸ್ಕರಿಸಿರುವುದು ಬಿಜೆಪಿ ಎಸಗಿರುವ ರಾಜಕೀಯ ಸಂಚಾಗಿದೆ. ನೇರ ಹಾದಿಯಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಾಗದ ಬಿಜೆಪಿಗೆ ಪರೋಕ್ಷವಾಗಿ ಗೆಲುವು ತಂದುಕೊಡಲು ಚುನಾವಣಾ ಆಯೋಗವು ಈ ಮೂಲಕ ಸಹಕರಿಸುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿಯು ದೇಶದಲ್ಲಿ ಮತಗಳ್ಳತನವನ್ನು ಒಂದು ಅಧಿಕೃತ ದಂಧೆಯನ್ನಾಗಿ ಮಾಡಿಕೊಂಡಿದ್ದು, ಎಸ್‌ಐಆರ್ ಸೇರಿದಂತೆ ಹಲವು ಕಳ್ಳಮಾರ್ಗಗಳ ಮೂಲಕ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಮತದಾರರ ದಿಕ್ಕು ತಪ್ಪಿಸುವುದು, ಪ್ರಾದೇಶಿಕ ಪಕ್ಷಗಳನ್ನು ಒಡೆಯುವುದು, ಕುದುರೆ ವ್ಯಾಪಾರ ಮತ್ತು ಸ್ವತಂತ್ರ ಸಂಸ್ಥೆಗಳ ದುರುಪಯೋಗದ ಪಟ್ಟಿಗೆ ಈಗ ರಾಜ್ಯಸಭೆಯ ‘ಸ್ಥಾನಗಳ್ಳತನ’ವೂ ಸೇರ್ಪಡೆಯಾಗಿದೆ. ಲೋಕಸಭೆಯಲ್ಲಿ ಕೃತಕ ಸಂಖ್ಯಾಬಲ ಸೃಷ್ಟಿಸಿಕೊಂಡು, ತನ್ನ ಸಂವಿಧಾನ ವಿರೋಧಿ ಮಸೂದೆಗಳನ್ನು ಯಾವುದೇ ಪ್ರತಿರೋಧವಿಲ್ಲದೆ ಜಾರಿಗೊಳಿಸುವುದೇ ಬಿಜೆಪಿಯ ಮುಖ್ಯ ಗುರಿಯಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ಇಂತಹ ಸರಣಿ ದಾಳಿಗಳನ್ನು ಕಾಂಗ್ರೆಸ್ ಪಕ್ಷವು ಬಲವಾಗಿ ವಿರೋಧಿಸುತ್ತದೆ. ದೇಶದ ನಾಗರಿಕರ ಪರವಾಗಿ ನಿಂತು ಇಂತಹ ಪ್ರತಿಯೊಂದು ಅನ್ಯಾಯ ಮತ್ತು ಸಾಂವಿಧಾನಿಕ ದ್ರೋಹದ ವಿರುದ್ಧ ತಾರ್ಕಿಕ ಹೋರಾಟ ನಡೆಸುವುದಾಗಿ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

 

 

 


Share this with Friends

Related Post