Thu. Jun 11th, 2026

ಗ್ಯಾರಂಟಿ ಷರತ್ತು, ಅಂದು ಎಲ್ಲರಿಗೂ ಫ್ರೀ ಅಂದಿದ್ರಿ, ಇಂದು ಖಜಾನೆ ಖಾಲಿ ಅಲ್ವಾ?’: ಸರ್ಕಾರದ ವಿರುದ್ಧ ಗುಡುಗಿದ ಸಿ.ಟಿ. ರವಿ

Share this with Friends

ಬೆಂಗಳೂರು: ಚುನಾವಣೆ ಪ್ರಚಾರದ ವೇಳೆ ಪ್ರತಿಯೊಬ್ಬರಿಗೂ ಉಚಿತ ಎಂದು ಘೋಷಿಸಿ, ಈಗ ಅಧಿಕಾರಕ್ಕೆ ಬಂದ ಮೇಲೆ ಗೃಹಲಕ್ಷ್ಮಿ ಯೋಜನೆಗೆ ಹೊಸ ಷರತ್ತುಗಳನ್ನು ವಿಧಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಯ ವಿರುದ್ಧ ಬಿಜೆಪಿ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ರಾಜಧಾನಿಯಲ್ಲಿ ಮಾಧ್ಯಮಗಳೊಂದಿಗೆ ಸುದೀರ್ಘವಾಗಿ ಮಾತನಾಡಿದ ಅವರು, ಸರ್ಕಾರದ ಆರ್ಥಿಕ ವೈಫಲ್ಯ, ಸಂಪುಟ ರಚನೆಯ ತಾರತಮ್ಯ ಹಾಗೂ ರೈತರ ಜ್ವಲಂತ ಸಮಸ್ಯೆಗಳ ಕುರಿತು ಸರಣಿ ಆರೋಪಗಳನ್ನು ಮಾಡುವ ಮೂಲಕ ಮುಗಿಬಿದ್ದಿದ್ದಾರೆ.

ಗ್ಯಾರಂಟಿ ವಂಚನೆ ಹಾಗೂ ಬಿಪಿಎಲ್ ಕಾರ್ಡ್ ಸ್ಥಗಿತ:

“ಚುನಾವಣಾ ವೇದಿಕೆಗಳಲ್ಲಿ ಕಾಕಾ ಪಾಟೀಲ್, ಜಮೀರ್ ಅಹ್ಮದ್, ಮಹದೇವಪ್ಪ ಸೇರಿದಂತೆ ಎಲ್ಲರಿಗೂ ಗೃಹಲಕ್ಷ್ಮಿ ಮತ್ತು ಅಕ್ಕಿ ಉಚಿತ ಎಂದು ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದ್ದರು. ಆದರೆ ಈಗ ಖಜಾನೆ ಖಾಲಿಯಾಗಿದೆ ಎಂಬ ಸತ್ಯ ಜನರಿಗೆ ಗೊತ್ತಾಗಿದೆ. ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸುವ ಕುರಿತಾದ ದುರುದ್ದೇಶದಿಂದಲೇ ಹೊಸ ಷರತ್ತುಗಳನ್ನು ತರಲಾಗುತ್ತಿದೆ” ಎಂದು ಲೇವಡಿ ಮಾಡಿದರು. ಗೃಹಲಕ್ಷ್ಮಿ ಯೋಜನೆಯ ಹಣ ನೀಡಬೇಕಾಗುತ್ತದೆ ಎಂಬ ಒಂದೇ ಕಾರಣಕ್ಕೆ ಸರ್ಕಾರ ಹೊಸ ಬಿಪಿಎಲ್ ಪಡಿತರ ಚೀಟಿಗಳ ವಿತರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದು, ಬಡವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 5 ಕೆಜಿ ಉಚಿತ ಅಕ್ಕಿ ನೀಡದೇ ಇದ್ದರೆ ಬಡ ಜನರು ಖಾಲಿ ಹೊಟ್ಟೆಯಲ್ಲಿ ಮಲಗಬೇಕಿತ್ತು ಎಂದು ನೆನಪಿಸಿದ ಅವರು, ಗ್ಯಾರಂಟಿಗಳಿಗೂ ತಮಗೂ ಸಂಬಂಧವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬಹಿರಂಗವಾಗಿ ಘೋಷಿಸಲಿ ಎಂದು ಸವಾಲು ಹಾಕಿದರು.

ಸಚಿವ ಸ್ಥಾನ ಹಂಚಿಕೆಯಲ್ಲಿ ತಾರತಮ್ಯ:

ರಾಜ್ಯ ಸಚಿವ ಸಂಪುಟ ರಚನೆಯಲ್ಲಿ ‘ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ’ ಹಚ್ಚುವ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ದೂರಿದ ಸಿ.ಟಿ. ರವಿ, “ನಿಮ್ಮ ಅಹಿಂದ ಸಿದ್ಧಾಂತದೊಳಗೆ ಕೇವಲ ಒಂದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಆದ್ಯತೆ ಇದೆಯೇ? ಸಮಾಜದ ಎಲ್ಲಾ ವರ್ಗ ಹಾಗೂ ಜಾತಿಯವರಿಗೂ ಸಮಾನವಾಗಿ ರಾಜಕೀಯ ಅವಕಾಶ ನೀಡುವುದೇ ನಿಜವಾದ ಜಾತ್ಯತೀತತೆ” ಎಂದು ಸಂಪುಟದ ಅಸಮತೋಲನವನ್ನು ಖಂಡಿಸಿದರು.

ರಸಗೊಬ್ಬರ ಕೊರತೆ ಮತ್ತು ಕಳ್ಳಮಾರುಕಟ್ಟೆ ದಂದೆ:

ರಾಜ್ಯದಲ್ಲಿ ತಲೆದೋರಿರುವ ರಸಗೊಬ್ಬರ ಕೊರತೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಕೃಷಿ ಇಲಾಖೆಯ ಬಳಿ ಸಾಕಷ್ಟು ದಾಸ್ತಾನು ಸಂಗ್ರಹವಿದೆ ಎಂದು ಹಿಂದಿನ ಸಚಿವರು ಹೇಳಿಕೆ ನೀಡಿದ್ದರು. ಹಾಗಿದ್ದಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿ ಇಷ್ಟೊಂದು ತೀವ್ರ ಕೊರತೆ ಕಾಣಿಸಿಕೊಳ್ಳುತ್ತಿರುವುದು ಹೇಗೆ? ಕರ್ನಾಟಕದ ಪಾಲಿನ ಯೂರಿಯಾ ಗೊಬ್ಬರವು ನೆರೆ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡಿಗೆ ಅಕ್ರಮವಾಗಿ ಸಾಗಣೆಯಾಗುತ್ತಿದ್ದು, ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಬಡ ರೈತರ ಹೊಟ್ಟೆ ಹೊಡೆದು ಖಾಸಗಿ ಕಾರ್ಖಾನೆಗಳಿಗೆ ಕಳ್ಳಮಾರ್ಗದಲ್ಲಿ ರಸಗೊಬ್ಬರ ಸರಬರಾಜಾಗುವುದನ್ನು ತಡೆಯಲು ಹೊಸ ಸರ್ಕಾರ ಹಾಗೂ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನೀತಿ ಆಯೋಗದ ಸಭೆ ಮತ್ತು ಪ್ರತಿಭಟನಾ ಹಕ್ಕು:

ಕೇಂದ್ರದ ನೀತಿ ಆಯೋಗದ ಸಭೆಗೆ ಉಪಮುಖ್ಯಮಂತ್ರಿಗಳು ಹಾಜರಾಗುತ್ತಿರುವ ನಿರ್ಧಾರವನ್ನು ಸ್ವಾಗತಿಸಿದ ಸಿ.ಟಿ. ರವಿ, “ಕೇಂದ್ರದ ಉನ್ನತ ಮಟ್ಟದ ಸಭೆಗಳಲ್ಲಿ ಭಾಗವಹಿಸುವುದರಿಂದ ರಾಜ್ಯಕ್ಕೆ ಆಗುವ ಆರ್ಥಿಕ ಲಾಭದ ವ್ಯತ್ಯಾಸ ಈಗಲಾದರೂ ಆಡಳಿತ ಪಕ್ಷಕ್ಕೆ ಅರ್ಥವಾಗಿದೆ. ತಡವಾಗಿಯಾದರೂ ಸರ್ಕಾರ ಎಚ್ಚೆತ್ತುಕೊಂಡಿರುವುದು ಒಳ್ಳೆಯದು” ಎಂದರು. ಇದೇ ವೇಳೆ, ಪೊಲೀಸರ ಮೂಲಕ ಸುಳ್ಳು ಪ್ರಕರಣಗಳನ್ನು ದಾಖಲಿಸಿ ವಿರೋಧ ಪಕ್ಷಗಳ ಪ್ರತಿಭಟಿಸುವ ಸಾಂವಿಧಾನಿಕ ಹಕ್ಕನ್ನು ಹತ್ತಿಕ್ಕಲು ಹೊರಟಿರುವ ಯಾವುದೇ ಸರ್ಕಾರ ಇತಿಹಾಸದಲ್ಲಿ ಯಶಸ್ವಿಯಾಗಿಲ್ಲ. ಇಂತಹ ರೈತವಿರೋಧಿ ಧೋರಣೆ ಹೊಂದಿರುವ ಕಾಂಗ್ರೆಸ್ ಸರ್ಕಾರ ಮುಂಬರುವ ದಿನಗಳಲ್ಲಿ ಮತ್ತೆ ಎಂದಿಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.

 

 


Share this with Friends

Related Post