ಬೆಂಗಳೂರು: ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಸಾರ್ವಜನಿಕರಿಗೆ ಸುಳ್ಳು ಭರವಸೆ ನೀಡಿ ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರ, ಈಗ ಪರಿಷ್ಕರಣೆಯ ನೆಪವೊಡ್ಡಿ ಆ ಯೋಜನೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ಸಂಚು ರೂಪಿಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಆರೋಪಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು,ರಾಜ್ಯದ ಜನತೆ ಎಂದಿಗೂ ತಮಗೆ ಉಚಿತ ಯೋಜನೆಗಳನ್ನು ಕೊಡಿ ಎಂದು ಕಾಂಗ್ರೆಸ್ ಬಳಿ ಕೇಳಿರಲಿಲ್ಲ. ಕೇವಲ ಅಧಿಕಾರ ಹಿಡಿಯುವ ಸ್ವಾರ್ಥಕ್ಕಾಗಿ ಅವರೇ ಸ್ವತಃ ಈ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಮಹಿಳೆಯರು ಯಾರೂ ಉಚಿತ ಬಸ್ ಪ್ರಯಾಣವನ್ನು ಬೇಡಿರಲಿಲ್ಲ. ಆದರೂ ತಾವಾಗಿಯೇ ಕೊಟ್ಟು, ಈಗ ನಿಧಾನವಾಗಿ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಲು ಮುಂದಾಗುತ್ತಿದ್ದಾರೆ ಎಂದು ಶ್ರೀರಾಮುಲು ಹರಿಹಾಯ್ದರು.
ಗ್ಯಾರಂಟಿ ಯೋಜನೆಯಲ್ಲಿ ಅಕ್ರಮದ ಗೊಂದಲ:
ಸದ್ಯ ಗೃಹಲಕ್ಷ್ಮಿ ಯೋಜನೆಯ ಹಣ ಮೃತ ಫಲಾನುಭವಿಗಳ ಖಾತೆಗೂ ಜಮೆಯಾಗುತ್ತಿರುವುದು ಸರ್ಕಾರದ ಆಡಳಿತಾತ್ಮಕ ಲೋಪವನ್ನು ಎತ್ತಿ ತೋರಿಸುತ್ತದೆ. ಇಡೀ ವ್ಯವಸ್ಥೆಯಲ್ಲಿ ಗೊಂದಲ ಮತ್ತು ಅಕ್ರಮಗಳು ಸೃಷ್ಟಿಯಾಗಿವೆ. ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಸರ್ಕಾರ ಸದನದಲ್ಲೇ ಒಪ್ಪಿಕೊಂಡಿದೆ. ಎಲ್ಲರಿಗೂ ಉಚಿತ ಎಂದು ಹೇಳಿ ಅಧಿಕಾರಕ್ಕೆ ಬಂದವರು ಈಗ ಜನರಿಗೆ ವಂಚಿಸುತ್ತಿದ್ದು, ತಕ್ಷಣವೇ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದರು.
ಅಧಿಕಾರಕ್ಕಾಗಿ ಕಾಂಗ್ರೆಸ್ನಲ್ಲಿ ಕಚ್ಚಾಟ:
ಕಾಂಗ್ರೆಸ್ ಪಕ್ಷಕ್ಕೆ ಕೇವಲ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಮುಖ್ಯವಾಗಿತ್ತು. ಈಗ ಚುನಾವಣೆ ಮುಗಿದ ಬೆನ್ನಲ್ಲೇ ಗ್ಯಾರಂಟಿಗಳನ್ನು ನಿಲ್ಲಿಸುವ ಷಡ್ಯಂತ್ರ ನಡೆಯುತ್ತಿದೆ. ಇತ್ತ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಹಳಿ ತಪ್ಪಿದೆ. ನಾಯಕರ ನಡುವಿನ ಶೀತಲ ಸಮರದ ಬಳಿಕ ಸಚಿವ ಸಂಪುಟದ ಮರುಹಂಚಿಕೆಗಾಗಿ ಆಡಳಿತ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ಬೆಂಗಳೂರು ಅಭಿವೃದ್ಧಿ ಖಾತೆಯ ವಿಚಾರದಲ್ಲಿ ಕೃಷ್ಣ ಭೈರೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ರಾಮಲಿಂಗಾ ರೆಡ್ಡಿ ಅವರು ಖಾತೆ ಬೇಡ ಅಂತ ರಾಜೀನಾಮೆ ನೀಡಿದ್ದರು. ಕೆ.ಎಚ್.ಮುನಿಯಪ್ಪ ಅವರೂ ಖಾತೆಗೆ ಅಸಮಾಧಾನಗೊಂಡಿದ್ದರು. ಎಲ್ಲಕ್ಕೂ ರಾಹುಲ್ ಗಾಂಧಿ ಅವರ ಮೇಲೆಯೇ ಸರ್ಕಾರ ನಿಂತಿದೆ. ಶಿವಕುಮಾರ್ ಅವರು ಮುಖ್ಯಮಂತ್ರಿಗಳಾದ ಮೇಲೆ ಯಾವುದೂ ಸರಿ ಇಲ್ಲ ಎಂಬುದು ರಾಜ್ಯದ ಜನರಿಗೆ ತಿಳಿದಿದೆ ಎಂದು ಹೇಳಿದರು.
ಧರ್ಮಸ್ಥಳದ ಷಡ್ಯಂತ್ರ:
ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಎಂದು ಆಗ ಉಪ ಮುಖ್ಯಮಂತ್ರಿಗಳಾಗಿದ್ದ ಡಿ ಕೆ ಶಿವಕುಮಾರ್ ಅವರೇ ಹೇಳಿದ್ದರು. ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ಮಾಡಿದ್ದೆವು. ಈಗ ಹೊಸದಾಗಿ ನಟ ಪ್ರಕಾಶ್ ರಾಜ್ ರೈ ಅವರ ಹೆಸರು ಕೇಳಿಬರುತ್ತಿದೆ. ಹಿಂದೂ ಧಾರ್ಮಿಕ ಸ್ಥಳಕ್ಕೆ ತೊಂದರೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.
ಮುಖ್ಯಮಂತ್ರಿ ಸೇಬು ಕಚ್ಚಿ ಎಸೆಯುವುದು:
ಶಿವಕುಮಾರ್ ಅವರು ಮುಖ್ಯಮಂತ್ರಿಗಳಾದ ನಂತರ ಕನಕಪುರದಲ್ಲಿ ನಡೆದ ಸಮರ್ಪಣಾ ಯಾತ್ರೆಯಲ್ಲಿ ಕಚ್ಚಿದ ಸೇಬನ್ನು ಜನರ ಕಡೆಗೆ ಎಸೆದಿದ್ದರು. ಇದರ ಅರ್ಥ ನಾನು ತಿಂದ ನಂತರ ಉಳಿದ ಭಾಗವನ್ನು ನಾಡಿನ ಜನರು ತಿನ್ನಬೇಕು ಎಂಬುದಾಗಿದೆ. ಇದೇ ಸಂದೇಶವನ್ನು ಅವರು ಹೊರಹಾಕಿದ್ದಾರೆ ಎಂದರು.

