Fri. Jun 12th, 2026

ನನ್ನ ಸಾವಿನ ಸುಳ್ಳು ಸುದ್ದಿ ಹಬ್ಬಿಸಬೇಡಿ: ಕಿಡಿಗೇಡಿಗಳಿಗೆ ಕೈಮುಗಿದು ಕೇಳಿಕೊಂಡ ಹಿರಿಯ ನಟ ದೊಡ್ಡಣ್ಣ

Share this with Friends

ಬೆಂಗಳೂರು: ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರು ತಾವೂ ಸಂಪೂರ್ಣ ಆರೋಗ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ತಮ್ಮ ಸಾವಿನ ವದಂತಿಗಳನ್ನು ಯಾರು ನಂಬಬೇಡಿ ಎಂದು ಸ್ಪಷ್ಟಪಡಿಸಿದ್ದಾರೆ. ಕೇವಲ ಪ್ರಚಾರ ಹಾಗೂ ಲೈಕ್ಸ್‌ಗಳಿಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಕಿಡಿಗೇಡಿಗಳ ವಿರುದ್ಧ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಿಧನದ ಪೋಸ್ಟರ್‌ಗಳ ಹಿನ್ನೆಲೆಯಲ್ಲಿ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ದೊಡ್ಡಣ್ಣ, ಸುಳ್ಳು ಸುದ್ದಿ ಹಬ್ಬಿಸುವ ವಿಕೃತ ಮನಸ್ಸುಗಳಿಗೆ ಕೈಮುಗಿದು ಮನವಿ ಮಾಡಿದ್ದಾರೆ.

ನಾನು ಚೆನ್ನಾಗಿದ್ದೇನೆ:

“ನಾನು ಮನೆಯಲ್ಲಿ ಆರಾಮವಾಗಿ ಕೂತು ಟಿವಿ ನೋಡುತ್ತಾ ಕಾಫಿ ಕುಡಿಯುತ್ತಿದ್ದೇನೆ. ಆದರೆ ಬೆಳಗ್ಗೆಯಿಂದ ನನ್ನ ನಿಧನದ ಸುಳ್ಳು ಪೋಸ್ಟರ್‌ಗಳು ಹರಿದಾಡುತ್ತಿವೆ. ಇದನ್ನು ಕಂಡು ನನ್ನ ಹಿತೈಷಿಗಳು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಆತಂಕಗೊಂಡು ಸಾವಿರಾರು ಫೋನ್ ಕರೆಗಳನ್ನು ಮಾಡುತ್ತಿದ್ದಾರೆ. ಮುಖ ತೊಳೆಯಲು ಸಹ ಸಮಯವಿಲ್ಲದಂತೆ ಕರೆಗಳು ಬರುತ್ತಿವೆ. ದೇವರ ದಯೆ ಹಾಗೂ ಜನರ ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ, ನೂರು ವರ್ಷ ಬದುಕಿರುತ್ತೇನೆ” ಎಂದು ದೊಡ್ಡಣ್ಣ ತಿಳಿಸಿದ್ದಾರೆ.

ವಿಕೃತಿ ನಿಲ್ಲಿಸಲು ಆಗ್ರಹ:

ಕೇವಲ ಫಾಲೋವರ್ಸ್ ಹಾಗೂ ಪ್ರಚಾರಕ್ಕಾಗಿ ಜೀವಂತವಾಗಿರುವ ವ್ಯಕ್ತಿಗಳ ಸಾವಿನ ಸುದ್ದಿಗಳನ್ನು ಸೃಷ್ಟಿಸುವುದು ಅಕ್ಷಮ್ಯ ಅಪರಾಧ. ಇಂತಹ ವಿಕೃತಿಯನ್ನು ಸೋಷಿಯಲ್ ಮೀಡಿಯಾಗಳಲ್ಲಿ ನಿಲ್ಲಿಸಬೇಕು. ಯಾವುದೇ ಅಧಿಕೃತ ಮಾಹಿತಿಯಿಲ್ಲದೆ ಸಾರ್ವಜನಿಕರು ಇಂತಹ ಪೋಸ್ಟ್‌ಗಳನ್ನು ಶೇರ್ ಮಾಡಬಾರದು ಎಂದು ವಿನಂತಿಸಿದ್ದಾರೆ.

ಕಾನೂನು ಕ್ರಮಕ್ಕೆ ನೆಟ್ಟಿಗರ ಒತ್ತಾಯ:

ಕನ್ನಡ ಚಿತ್ರರಂಗದ ಹಿರಿಯ ನಟರ ಬಗ್ಗೆ ಪದೇ ಪದೇ ಇಂತಹ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿರುವ ಪೇಜ್‌ಗಳು ಹಾಗೂ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಚಿತ್ರರಂಗದ ತಾರೆಯರು ಹಾಗೂ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ.

 

 


Share this with Friends

Related Post