Sat. Jun 13th, 2026

‘ಟೀಮ್ ಕರ್ನಾಟಕ’ವಾಗಿ ಕೆಲಸ ಮಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸಿಎಂ

Share this with Friends

ಬೆಂಗಳೂರು:ರಾಜ್ಯದಲ್ಲಿ ಸಾರ್ವಜನಿಕ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ಜನಸ್ನೇಹಿಯಾಗಿಸಲು ಮತ್ತು ಅಧಿಕಾರಿಗಳ ದಕ್ಷತೆಯನ್ನು ಹೆಚ್ಚಿಸಲು ಕಟ್ಟುನಿಟ್ಟಿನ ಮಹತ್ತರ ನಿರ್ದೇಶನಗಳನ್ನು ನೀಡಲಾಗಿದೆ. “ನಾವೆಲ್ಲರೂ ಒಂದೇ ತಂಡ, ‘ಟೀಮ್ ಕರ್ನಾಟಕ’ವಾಗಿ (Team Karnataka) ಕೆಲಸ ಮಾಡೋಣ ಎಂದು ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ”.

ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಎಸ್ಪಿ, ಸಿಇಒ, ಡಿಎಫ್ಒ ಹಾಗೂ ಸರ್ಕಾರಿ ಹಿರಿಯ ಅಧಿಕಾರಿಗಳೊಂದಿಗೆ 7 ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿ ನಡೆಸಿದ ಅವರು, ಜಿಲ್ಲಾಡಳಿತ ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಕಚೇರಿಗಳಿಗೆ ಬರುವ ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ಪ್ರಕಟಿಸಿದರು.

ಕಚೇರಿಗೆ ಬರುವ ಜನರಿಗೆ ಸಕಾರಾತ್ಮಕವಾಗಿ ಸ್ಪಂದಿಸಿ:

ಜನರು ತಮ್ಮ ವೈಯಕ್ತಿಕ ಅಥವಾ ಸಾರ್ವಜನಿಕ ಸಮಸ್ಯೆಗಳ ಕಾರಣಕ್ಕಾಗಿಯೇ ಕಚೇರಿಗಳ ಕಡೆಗೆ ಬರುತ್ತಾರೆ. ಯಾವುದೇ ಸಮಸ್ಯೆ ಇಲ್ಲದಿದ್ದರೆ ಯಾರೂ ಕೂಡ ಜಿಲ್ಲಾಧಿಕಾರಿಗಳ ಕಚೇರಿಗಾಗಲಿ ಅಥವಾ ತಾಲ್ಲೂಕು ಕಚೇರಿಗಾಗಲಿ ಸುಮ್ಮನೆ ಬರುವುದಿಲ್ಲ. ಹೀಗಾಗಿ, ಆಷಾಭಾವನೆಯಿಂದ ಮತ್ತು ಸಮಸ್ಯೆಯೊಂದಿಗೆ ಬರುವ ಜನರಿಗೆ ಅಧಿಕಾರಿಗಳು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಸ್ಥಳದಲ್ಲೇ ಅವರ ಅಹವಾಲುಗಳನ್ನು ಆಲಿಸಿ, ಕಾನೂನು ಚೌಕಟ್ಟಿನಲ್ಲಿ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಬೆಳಗ್ಗೆ 10 ಗಂಟೆಗೆ ಕಡ್ಡಾಯ ಹಾಜರಾತಿ – ಸಿಎಸ್ ಕಚೇರಿಗೆ ತಲುಪಲಿದೆ ಬಯೋಮೆಟ್ರಿಕ್ ಸಂದೇಶ:

ಅಧಿಕಾರಿಗಳ ನಿಗದಿಪಡಿತ ಕಚೇರಿ ವೇಳೆಯ ಶಿಸ್ತನ್ನು ಕಾಯ್ದುಕೊಳ್ಳಲು ಸರ್ಕಾರ ಅತ್ಯಂತ ಕಠಿಣ ನಿಯಮಾವಳಿ ಜಾರಿಗೆ ಮುಂದಾಗಿದೆ. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಕಚೇರಿಗೆ ಹಾಜರಾಗಬೇಕು. ಜಿಲ್ಲಾ ಕಚೇರಿಗಳಲ್ಲಿ ಅಧಿಕಾರಿಗಳು ಹಾಜರಾದ ತಕ್ಷಣವೇ, ಅವರ ಹೆಬ್ಬೆರಳಿನ ಗುರುತಿನ (Biometric Attendance) ಸಂದೇಶವು ನೇರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ (Chief Secretary) ಕಚೇರಿಗೆ ರವಾನೆಯಾಗುವಂತಹ ವ್ಯವಸ್ಥೆಯನ್ನು ರೂಪಿಸಲು ಮಾರ್ಗದರ್ಶನ ನೀಡಲಾಗಿದೆ ಎಂದರು.

ಕೇಂದ್ರ ಕಚೇರಿಯಲ್ಲೇ ಇರಬೇಕು, ಫೋನ್ ನಂಬರ್ ವೆಬ್‌ಸೈಟ್‌ನಲ್ಲಿರಬೇಕು:

ಕೆಳಹಂತದ ಆಡಳಿತವನ್ನು ಗಟ್ಟಿಗೊಳಿಸಲು ಸೂಚಿಸಲಾಗಿದ್ದು, ಗ್ರಾಮ ಲೆಕ್ಕಿಗರು (VA), ಕಂದಾಯ ಅಧಿಕಾರಿಗಳು (RI), ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ (PDO) ಹಿಡಿದು ಜಿಲ್ಲಾಧಿಕಾರಿಗಳವರೆಗೆ (DC) ಪ್ರತಿಯೊಂದು ಇಲಾಖೆಯ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ತಮ್ಮ ಕೇಂದ್ರ ಕಚೇರಿಗಳಲ್ಲೇ ಲಭ್ಯವಿರಬೇಕು. ಸಾರ್ವಜನಿಕರ ಸಂಪರ್ಕಕ್ಕೆ ಅನುಕೂಲವಾಗುವಂತೆ ಈ ಎಲ್ಲಾ ಅಧಿಕಾರಿಗಳ ಕಚೇರಿ ವಿಳಾಸ ಹಾಗೂ ಅಧಿಕೃತ ದೂರವಾಣಿ ಸಂಖ್ಯೆಗಳು ಆಯಾ ಜಿಲ್ಲಾ ವೆಬ್‌ಸೈಟ್‌ಗಳಲ್ಲಿ ಕಡ್ಡಾಯವಾಗಿ ಲಭ್ಯವಿರಬೇಕು ಎಂದು ಆದೇಶಿಸಲಾಗಿದೆ ಎಂದರು.

ನಕಲಿ ಫೈನಾನ್ಸ್ ಸ್ಕೀಂ, ರೌಡಿಗಳು ಹಾಗೂ ಡ್ರಗ್ಸ್ ಜಾಲ ನಿಗ್ರಹಕ್ಕೆ ಕ್ರಮ

“ನಕಲಿ ಫೈನಾನ್ಸ್ ಗಳ ನಿಗ್ರಹಕ್ಕೆ ಸರ್ಕಾರ ಮಸೂದೆ ಜಾರಿಗೆ ತಂದಿದ್ದರೂ ಇಂತಹ ಪ್ರಕರಣ ಬೆಳಕಿಗೆ ಬರುತ್ತಿದ್ದು, ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳು ತಮ್ಮ ಗುಪ್ತಚರವನ್ನು ಬಳಸಿ ಇಂತಹ ಸ್ಕೀಂಗಳಿಗೆ ಕಡಿವಾಣ ಹಾಕಬೇಕು ಎಂದು ಸೂಚಿಸಲಾಗಿದೆ. ಗಾಂಜಾ, ಡ್ರಗ್ಸ್ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ತೀರ್ಮಾನಿಸಿದೆ. ನಮ್ಮ ಪೊಲೀಸ್ ಅಧಿಕಾರಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಡ್ರಗ್ ಪೆಡ್ಲರ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ” ಎಂದು ವಿವರಿಸಿದರು.

“ಪ್ರತಿ ಪೊಲೀಸ್ ಠಾಣೆಯಲ್ಲಿ ಐದು ಪೊಲೀಸರ ತಂಡವನ್ನು ರಚಿಸಿ ರೌಡಿಗಳನ್ನು ನಿಗ್ರಹಿಸಲು ಸೂಚಿಸಲಾಗಿದೆ. ಸೈಬರ್ ಅಪರಾಧ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಜಿಲ್ಲಾ ಮಟ್ಟದಲ್ಲೇ ಜನರ ಸಮಸ್ಯೆ ಬಗೆಹರಿಸಿ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಜನಸಂಪರ್ಕ ಸಭೆಯಲ್ಲಿ ಭಾಗವಹಿಸಬೇಕು. ಶಾಸಕರು ಪಂಚಾಯ್ತಿ ಹಾಗೂ ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆ ಮಾಡಬೇಕು. ಅದಕ್ಕೆ ಅಗತ್ಯವಿರುವ ಆರ್ಥಿಕ ವ್ಯವಸ್ಥೆ ಮಾಡಲಾಗುವುದು. ಆಗ ಜನ ಜಿಲ್ಲಾ ಕೇಂದ್ರ ಹಾಗೂ ಬೆಂಗಳೂರಿಗೆ ಬರುವುದು ಕಡಿಮೆಯಾಗುತ್ತದೆ. ಇದರಿಂದ ಈ ಜನಪರ ಸರ್ಕಾರ ಜನರ ಬಳಿಗೆ ಹೋಗಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು


Share this with Friends

Related Post