Sat. Jun 13th, 2026

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ವಿವಾದ: ಕೃಷಿ ಭೂಮಿ ಉಳಿಸಲು ಕಾನೂನು ಸಮರದ ಎಚ್ಚರಿಕೆ ನೀಡಿದ ಹೆಚ್.ಡಿ. ಕುಮಾರಸ್ವಾಮಿ

Share this with Friends

ಬೆಂಗಳೂರು:ರಾಜ್ಯ ಸರ್ಕಾರವು ಬಿಡದಿ ಸಮೀಪ ಉದ್ದೇಶಿತ ಬೃಹತ್ ಟೌನ್‌ಶಿಪ್ ಯೋಜನೆಗಾಗಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೊರಡಿಸಿರುವ ಅಂತಿಮ ಅಧಿಸೂಚನೆಯ ವಿರುದ್ಧ ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುಮಾರು 500 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಸರ್ಕಾರದ ನಿರ್ಧಾರವನ್ನು “ರೈತ ವಿರೋಧಿ ಧೋರಣೆ” ಎಂದು ಕಟುವಾಗಿ ಟೀಕಿಸಿರುವ ಅವರು, ಇದರ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಪ್ರಕಟಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, “ಅಭಿವೃದ್ಧಿಯ ನೆಪದಲ್ಲಿ ಸರ್ಕಾರವು ಬಿಡದಿ ಭಾಗದ ತೋಟಗಾರಿಕಾ ಜಮೀನನ್ನು ಬಲವಂತವಾಗಿ ಕಬಳಿಸುತ್ತಿದೆ. ಕಳೆದ 470ಕ್ಕೂ ಹೆಚ್ಚು ದಿನಗಳಿಂದ ಅನ್ನದಾತರು ನಡೆಸುತ್ತಿರುವ ನಿರಂತರ ಪ್ರತಿಭಟನೆ ಹಾಗೂ ಕಣ್ಣೀರನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಈ ಯೋಜನೆಯ ಅಸಲಿ ಉದ್ದೇಶ ಸಾರ್ವಜನಿಕ ಹಿತಾಸಕ್ತಿಯಲ್ಲ, ಬದಲಿಗೆ ರಿಯಲ್ ಎಸ್ಟೇಟ್ ಉದ್ಯಮಿಗಳ ಹಿತ ಕಾಯುವುದಾಗಿದೆ” ಎಂದು ಅವರು ಗಂಭೀರ ಆಪಾದನೆ ಮಾಡಿದ್ದಾರೆ.

ಸರ್ಕಾರಕ್ಕೆ ಬಹಿರಂಗ ಸವಾಲು:

“ಈ ಭಾಗದಲ್ಲಿ ರೈತರೇ ಇಲ್ಲ, ಎಲ್ಲರೂ ಜಮೀನು ನೀಡಲು ಒಪ್ಪಿದ್ದಾರೆ” ಎಂಬ ರಾಜ್ಯ ಸರ್ಕಾರದ ನಾಯಕರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಕುಮಾರಸ್ವಾಮಿ, “ಇದು ಅತ್ಯಂತ ಅಹಂಕಾರದ ಮತ್ತು ಅನ್ನದಾತರಿಗೆ ಮಾಡಿದ ದೊಡ್ಡ ಅಪಮಾನ” ಎಂದು ಆಕ್ರೋಶ ಹೊರಹಾಕಿದರು. “ಧೈರ್ಯವಿದ್ದರೆ ಸಂಬಂಧಪಟ್ಟ ಸಚಿವರು ನನ್ನೊಂದಿಗೆ ಬಿಡದಿಯ ಹಳ್ಳಿಗಳಿಗೆ ಬರಲಿ. ಅಲ್ಲಿನ ಜಮೀನು ಮಾಲೀಕರನ್ನು ನೇರವಾಗಿ ಭೇಟಿ ಮಾಡಿ, ಅವರು ಜಮೀನು ಕೊಡಲು ಸಿದ್ಧರಿದ್ದಾರೆಯೇ ಎಂಬುದನ್ನು ಅವರ ಬಾಯಿಂದಲೇ ಕೇಳಿ ಸತ್ಯ ತಿಳಿದುಕೊಳ್ಳಲಿ” ಎಂದು ಬಹಿರಂಗ ಸವಾಲು ಹಾಕಿದ್ದಾರೆ.

2006 ರ ಯೋಜನೆ ಕೈಬಿಟ್ಟ ಇತಿಹಾಸ ನೆನಪಿಸಿದ ಹೆಚ್‌ಡಿಕೆ:

ಆಡಳಿತ ಪಕ್ಷದ ನಾಯಕರ ಟೀಕೆಗಳಿಗೆ ಉತ್ತರಿಸಿದ ಅವರು, “2006 ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಬಿಡದಿ ಸೇರಿದಂತೆ 5 ಟೌನ್‌ಶಿಪ್‌ಗಳನ್ನು ನಿರ್ಮಿಸುವ ಪ್ರಸ್ತಾವನೆ ಇಟ್ಟಿದ್ದೆ ಎಂಬುದು ನಿಜ. ಆದರೆ, ಅಂದು ಸ್ಥಳೀಯ ರೈತರಿಂದ ತೀವ್ರ ವಿರೋಧ ವ್ಯಕ್ತವಾದ ತಕ್ಷಣವೇ, ಸಾರ್ವಜನಿಕ ಹಿತದೃಷ್ಟಿಯಿಂದ ನಾನು ಆ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೆ. ರೈತರ ಸಮ್ಮತಿ ಇಲ್ಲದೆ ಬಲವಂತವಾಗಿ ಕೃಷಿ ಭೂಮಿ ಕಿತ್ತುಕೊಳ್ಳುವುದು ಪ್ರಜಾಪ್ರಭುತ್ವ ವಿರೋಧಿ” ಎಂದರು. ಶೇ. 80 ಕ್ಕೂ ಹೆಚ್ಚು ರೈತರು ಈ ಯೋಜನೆಗೆ ಕಣ್ಣೀರು ಹಾಕುತ್ತಿದ್ದು, ಸರ್ಕಾರ ಬೆದರಿಕೆ ಹಾಗೂ ಪೊಲೀಸ್ ಕೇಸ್ ಬಳಸಿ ಪ್ರತಿಭಟನೆಯನ್ನು ಹತ್ತಿಕ್ಕಲು ನೋಡುತ್ತಿದೆ ಎಂದು ಅವರು ದೂರಿದ್ದಾರೆ.

 

 

 


Share this with Friends

Related Post