ಬೆಂಗಳೂರು: ರಾಜ್ಯ ಸಚಿವ ಸಂಪುಟ ಸೇರಲು ಎರಡು ಕೋಟಾಗಳಿವೆ. ಒಂದು ‘ಮ್ಯಾನೇಜ್ ಮೆಂಟ್ ಕೋಟಾ’ ಮತ್ತೊಂದು ‘ಪೇಮೆಂಟ್ ಕೋಟಾ’. ಎರಡರಲ್ಲಿ ಯಾವುದು ಬೇಕು ಎಂದು ಮೊದಲೇ ತೀರ್ಮಾನ ಮಾಡಿಕೊಂಡು ಸಚಿವರಾಗುತ್ತಾರೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಹಾಗೂ ಗ್ಯಾರಂಟಿ ಯೋಜನೆಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಲಕ್ಷಾಂತರ ಗ್ಯಾರಂಟಿ ಕಡಿತಕ್ಕೆ ದುಸ್ಸಾಹಸ:
“ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ಈಗ ಒಂದೊಂದೇ ನೆಪಗಳನ್ನು ಒಡ್ಡಿ ಗ್ಯಾರಂಟಿ ಫಲಾನುಭವಿಗಳ ಸಂಖ್ಯೆಯನ್ನು ಲಕ್ಷ ಲಕ್ಷದಷ್ಟು ಇಳಿಸುವ ದುಸ್ಸಾಹಸಕ್ಕೆ ಕಾಂಗ್ರೆಸ್ ಸರಕಾರ ಕೈ ಹಾಕಿದೆ. ಯಾರು ಅರ್ಹರಿದ್ದಾರೋ ಅವರಿಗೆ ಸೌಲಭ್ಯ ಕೊಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಚುನಾವಣೆಗೂ ಮುನ್ನ ಗ್ಯಾರಂಟಿ ಕೊಡುವಾಗ ಅರ್ಹತೆ ಮತ್ತು ಅನರ್ಹತೆಯನ್ನು ಇವರು ಯಾಕೆ ಯೋಚಿಸಲಿಲ್ಲ?” ಎಂದು ಪ್ರಶ್ನಿಸಿದರು.
“ಗ್ಯಾರಂಟಿಗಳಿಂದಾಗಿ ಕ್ಷೇತ್ರಗಳ ಅಭಿವೃದ್ಧಿ ಆಗುತ್ತಿಲ್ಲ ಎಂದು ಸ್ವತಃ ಕಾಂಗ್ರೆಸ್ ಶಾಸಕ ದೇಶಪಾಂಡೆ ಅವರೇ ಹೇಳುತ್ತಿದ್ದಾರೆ. ಅಭಿವೃದ್ಧಿ ಆಗದೇ ಆತ್ಮಹತ್ಯೆ ಮಾಡಿಕೊಳ್ಳುವಂಥ ಸ್ಥಿತಿ ಇದೆ ಎಂದು ಆಡಳಿತ ಪಕ್ಷದ ಶಾಸಕರೇ ಅಳಲು ತೋಡಿಕೊಂಡಿದ್ದಾರೆ. ಹಿಂದಿನ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಯ ರಾಯರೆಡ್ಡಿ ಅವರೂ ಗ್ಯಾರಂಟಿಗಳಿಂದ ಆರ್ಥಿಕ ಸಂಕಷ್ಟ ಎದುರಾಗಿರುವುದನ್ನು ಒಪ್ಪಿಕೊಂಡಿದ್ದಾರೆ” ಎಂದು ವಿಜಯೇಂದ್ರ ನೆನಪಿಸಿದರು.
ಚುನಾವಣೆ ವೇಳೆ ವಾಸ್ತವ ಸತ್ಯ ಮರೆಮಾಚಿ ಲಕ್ಷಾಂತರ ಜನರಿಗೆ ಗ್ಯಾರಂಟಿ ಕಾರ್ಡ್ ಹಂಚಿದರು. ಚುನಾವಣೆ ಮೊದಲು ಅರ್ಹರಾಗಿದ್ದವರು, ಚುನಾವಣೆ ಮುಗಿದ ನಂತರ ಅನರ್ಹ ಎಂದು ಹೇಳುವುದು ಜನರಿಗೆ ಮಾಡಿದ ಅಪಮಾನ ಎಂದು ಅವರು ಆಕ್ರೋಶ ಹೊರಹಾಕಿದರು.
ಬಿಡದಿ ಟೌನ್ ಶಿಪ್ ಗೆ ಬಿಜೆಪಿ ವಿರೋಧ:
ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ ಎಂದ ವಿಜಯೇಂದ್ರ, “ನಾವು ಸದಾ ರೈತರ ಪರವಾಗಿ ನಿಲ್ಲುತ್ತೇವೆ. ಬಲವಂತವಾಗಿ ರೈತರ ಜಮೀನು ಕಸಿಯಲು ಬಿಡುವುದಿಲ್ಲ. ಸ್ವತಃ ಮುಖ್ಯಮಂತ್ರಿಗಳೇ ಆಸಕ್ತಿ ವಹಿಸಿ ಅನ್ನದಾತರನ್ನು ಒಕ್ಕಲೆಬ್ಬಿಸಲು ಹೋಗಿರುವುದು ಅಕ್ಷಮ್ಯ ಅಪರಾಧ. ನಾವು ಯಾವುದೇ ಕಾರಣಕ್ಕೂ ಜಮೀನು ಬಿಡಲ್ಲ ಎಂದು ರೈತರೇ ಹೇಳುತ್ತಿದ್ದಾರೆ” ಎಂದರು.
“ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಈ ವಿಷಯದಲ್ಲಿ ತಕ್ಷಣ ಹಸ್ತಕ್ಷೇಪ ಮಾಡಿ, ಸಿಎಂ ಮೇಲೆ ಒತ್ತಡ ಹೇರಿ ಇದನ್ನು ತಡೆಯಬೇಕು. ರೈತರಿಗೆ ತೊಂದರೆ ಆಗುವುದನ್ನು ಖಂಡಿಸಿ ಬಿಜೆಪಿ ದೊಡ್ಡ ಮಟ್ಟದ ಹೋರಾಟ ಮಾಡಲಿದೆ. ಟೌನ್ ಶಿಪ್ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ಹೆಸರು ಹೇಳಿ ದಲ್ಲಾಳಿತನ ಮಾಡಲು ಯಾರಿಗೂ ಬಿಡಲ್ಲ. ಭೂಸ್ವಾಧೀನ ಪ್ರಕ್ರಿಯೆಗೆ ಕೆಐಎಡಿಬಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಿ” ಎಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರದ ಪಡ್ಯಂತ್ರ:
ಧರ್ಮಸ್ಥಳದ ಬುರುಡೇ ಪ್ರಕರಣ ಕಾಂಗ್ರೆಸ್ ಸರ್ಕಾರದ ಪಡ್ಯಂತ್ರ. ಆಗಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹಾದಿಬೀದಿಯಲ್ಲಿ ಹೋಗುವ ನಗರ ನಕ್ಸಲರ ಮಾತು ಕೇಳಿ ಎಸ್ಐಟಿ ರಚಿಸಿದರು. ಅದರ ಅಗತ್ಯ ಇರಲಿಲ್ಲ. ಇದೇ ಈಗ ಸರ್ಕಾರಕ್ಕೆ ಗಂಡಾಂತರ ತಂದಿದೆ. ಇಡೀ ದೇಶದ ಮೂಲೆ ಮೂಲೆಯಿಂದ ಕೋಟಿ ಭಕ್ತರು ಧರ್ಮಸ್ಥಳಕ್ಕೆ ಬರ್ತಾರೆ. ಎಸ್ ಐಟಿ ರಚಿಸಲು ಸಿಎಂ ವಿವೇಚನೆ ಬಳಸಬೇಕಿತ್ತು ಎಂದು ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ತಿಳಿಸಿದರು. ಬುರುಡೆ ಪ್ರಕರಣದಲ್ಲಿ ನೂರಾರು ಕೋಟಿ ಅವ್ಯವಹಾರ ಆಗಿದೆ ಎಂಬ ವರದಿಗಳಿವೆ. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರವೇ ಹೊಣೆ. ಅವರ ಆಸಕ್ತಿ ಏನಿತ್ತು ಎಂಬುದು ತಿಳಿಯಲಿ ಎಂದರು.

