ಬೆಂಗಳೂರು: “ದೇಶಾದ್ಯಂತ ರೈತರ ಭೂಮಿ ರಕ್ಷಣೆ ಹಾಗೂ ಕಾರ್ಪೊರೇಟ್ ವಿರೋಧಿ ಘೋಷಣೆಗಳನ್ನು ಕೂಗುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಕರ್ನಾಟಕದಲ್ಲಿ ಅವರದ್ದೇ ಪಕ್ಷದ ಸರ್ಕಾರ ಅನ್ನದಾತರ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸುತ್ತಿರುವುದಕ್ಕೆ ಉತ್ತರ ನೀಡಬೇಕು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಟುವಾಗಿ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರದ ಬಿಡದಿ ಸಮಗ್ರ ನಗರ (GBIT) ಯೋಜನೆಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ವಿಜಯೇಂದ್ರ ಅವರು ರಾಹುಲ್ ಗಾಂಧಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಬಿಡದಿ ಭಾಗದಲ್ಲಿ ಜಮೀನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಸಾವಿರಾರು ರೈತ ಕುಟುಂಬಗಳ ಧ್ವನಿಯಾಗಿ ಈ ಪತ್ರ ಬರೆಯುತ್ತಿರುವುದಾಗಿ ಅವರು ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್‌ನ ದ್ವಂದ್ವ ನೀತಿ:
“ರಾಹುಲ್ ಗಾಂಧಿ ಅವರು ದೇಶದಾದ್ಯಂತ ರೈತರ ಹಕ್ಕುಗಳ ರಕ್ಷಣೆಗಾಗಿ ಯಾತ್ರೆಗಳನ್ನು ನಡೆಸುತ್ತಾರೆ. ಆದರೆ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳು ಅನ್ನದಾತರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ. ಬೃಹತ್ ಉಪನಗರದ ಹೆಸರಿನಲ್ಲಿ ನಡೆಯುತ್ತಿರುವ ಈ ‘ಸರ್ಕಾರಿ ಭೂಕಬಳಿಕೆ’ಯ ಬಗ್ಗೆ ರಾಹುಲ್ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು” ಎಂದು ವಿಜಯೇಂದ್ರ ಪತ್ರದಲ್ಲಿ ಆಗ್ರಹಿಸಿದ್ದಾರೆ.
7,481 ಎಕರೆ ಕೃಷಿ ಭೂಮಿ ವಶಕ್ಕೆ ಆಕ್ರೋಶ:
ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ನೆಪದಲ್ಲಿ ಬಿಡದಿ ಮತ್ತು ಹಾರೋಹಳ್ಳಿ ನಡುವೆ ಸುಮಾರು 7,481 ಎಕರೆ ಪ್ರದೇಶದಲ್ಲಿ ‘ವರ್ಕ್-ಲಿವ್-ಪ್ಲೇ’ ಮಾದರಿಯ ಉಪನಗರ ನಿರ್ಮಿಸಲು ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. “ಸುಮಾರು 18,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗಾಗಿ ಉದ್ದೇಶಪೂರ್ವಕವಾಗಿ ಫಲವತ್ತಾದ ಕೃಷಿ ಭೂಮಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಎರಡನೇ ವಾಣಿಜ್ಯ ಕೇಂದ್ರ ಸ್ಥಾಪಿಸುವ ಹಠಕ್ಕೆ ಬಿದ್ದು ರೈತರನ್ನು ಬೀದಿಗೆ ತಳ್ಳುತ್ತಿರುವುದು ಎಷ್ಟು ನ್ಯಾಯಯುತ?” ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಪತ್ರದ ಮೂಲಕ ಪ್ರಶ್ನಿಸಿದ್ದಾರೆ.
ಕಳೆದ 470ಕ್ಕೂ ಹೆಚ್ಚು ದಿನಗಳಿಂದ ಬಿಡದಿಯ 25 ಹಳ್ಳಿಗಳ ಅನ್ನದಾತರು ನಡೆಸುತ್ತಿರುವ ನಿರಂತರ ಪ್ರತಿಭಟನೆಗೆ ರಾಜ್ಯ ಸರ್ಕಾರ ಬೆಲೆ ನೀಡಿಲ್ಲ ಎಂದು ಬಿ.ವೈ. ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ. ಸುಮಾರು 3,500ಕ್ಕೂ ಅಧಿಕ ಸಣ್ಣ ಹಿಡುವಳಿದಾರರು ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಿದ್ದರೂ, ರೈತರೊಂದಿಗೆ ಯಾವುದೇ ಸಾರ್ವಜನಿಕ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕಾಂಕ್ರೀಟ್ ಜಂಗಲ್ ನಿರ್ಮಾಣದ ಯತ್ನ:
ಸ್ವಾಧೀನಪಡಿಸಿಕೊಳ್ಳಲಾಗುತ್ತಿರುವ ಜಮೀನು ಬಂಜರಲ್ಲ, ಬದಲಿಗೆ ಬೆಂಗಳೂರಿಗೆ ದಿನನಿತ್ಯ ಹಾಲು, ಹಣ್ಣು, ತರಕಾರಿ ಪೂರೈಸುವ ಅತ್ಯಂತ ಫಲವತ್ತಾದ ಮುಕ್ಕಾರು ಬೆಳೆ ತೆಗೆಯುವ ಭೂಮಿಯಾಗಿದೆ. ತೆಂಗು, ಅಡಿಕೆ ಬೆಳೆಗಳು ಹಾಗೂ ಸ್ಥಳೀಯ ಅಡಿಕೆ ತಟ್ಟೆ ತಯಾರಿಕಾ ಘಟಕಗಳನ್ನು ನಂಬಿ ಸಾವಿರಾರು ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ಐತಿಹಾಸಿಕ ಬೈರಮಂಗಲ ಕೆರೆಯ ಪರಿಸರ ವ್ಯವಸ್ಥೆಯನ್ನು ನಾಶ ಮಾಡಿ, ‘ವರ್ಕ್-ಲಿವ್-ಪ್ಲೇ’ ಹೆಸರಿನಲ್ಲಿ ಹಸಿರು ಭೂಮಿಯನ್ನು ಕಾಂಕ್ರೀಟ್ ಕಾಡನ್ನಾಗಿ ಪರಿವರ್ತಿಸುತ್ತಿರುವುದು ಎಷ್ಟು ಸಮರ್ಥನೀಯ ಎಂದು ಅವರು ಪ್ರಶ್ನಿಸಿದ್ದಾರೆ.
ಮಧ್ಯಪ್ರವೇಶಕ್ಕೆ ರಾಹುಲ್ ಗಾಂಧಿಗೆ ಮನವಿ:
ಬಡವರ ಭೂಮಿಯನ್ನು ಅತ್ಯಂತ ಕಡಿಮೆ ಮಾರ್ಗಸೂಚಿ ದರಕ್ಕೆ ಕಿತ್ತುಕೊಂಡು, ರಿಯಲ್ ಎಸ್ಟೇಟ್ ಉದ್ಯಮಿಗಳ ಹಿತ ಕಾಯಲು ಸರ್ಕಾರ ಮುಂದಾಗಿದೆ. ಇದರಿಂದಾಗಿ ಗ್ರಾಮೀಣ ಮಹಿಳೆಯರು ಉದ್ಯೋಗ ಕಳೆದುಕೊಂಡು ಆರ್ಥಿಕ ಅಭದ್ರತೆಗೆ ಸಿಲುಕಲಿದ್ದಾರೆ. ಆದ್ದರಿಂದ ರಾಹುಲ್ ಗಾಂಧಿ ಅವರು ತಕ್ಷಣವೇ ಮಧ್ಯಪ್ರವೇಶಿಸಿ, ರೈತರ ಹಿತಾಸಕ್ತಿಗೆ ವಿರುದ್ಧವಾಗಿರುವ ಈ ಬಲವಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಬೇಕು ಎಂದು ವಿಜಯೇಂದ್ರ ಪತ್ರದಲ್ಲಿ ವಿನಂತಿಸಿದ್ದಾರೆ.

