Sun. Jun 14th, 2026

ಪ್ರಧಾನಿ ಮೋದಿ ಕೃಷಿ ಭೂಮಿಯಲ್ಲಿ ಟೌನ್‌ಶಿಪ್ ಮಾಡಿಲ್ಲ: ಸಿಎಂ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕಿಡಿ

Share this with Friends

ಬೆಂಗಳೂರು: “ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲೂ ರೈತರ ಕೃಷಿ ಮತ್ತು ನೀರಾವರಿ ಭೂಮಿಯನ್ನು ಕಿತ್ತುಕೊಂಡು ಟೌನ್‌ಶಿಪ್ ನಿರ್ಮಿಸಿಲ್ಲ. ಆದರೆ ರಾಜ್ಯದ ಮುಖ್ಯಮಂತ್ರಿಗಳು ರೈತರ ಹಿತ ಬಲಿ ಕೊಡಲು ಪ್ರಧಾನಿಗಳ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಪಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಡದಿ ಟೌನ್‌ಶಿಪ್ ಯೋಜನೆಗೆ ರೈತರಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಬೆನ್ನಲ್ಲೇ ಮುಖ್ಯಮಂತ್ರಿಗಳು ಪ್ರಧಾನಿಯವರ ಹೆಸರನ್ನು ಪ್ರಸ್ತಾಪಿಸುತ್ತಿರುವುದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಗುಜರಾತ್‌ನಲ್ಲಿ ಭೂಕಂಪದಿಂದ ಸಂಪೂರ್ಣವಾಗಿ ಧ್ವಂಸಗೊಂಡಿದ್ದ ಬಂಜರು ಪ್ರದೇಶದಲ್ಲಿ ಹೊಸ ನಗರ ಹಾಗೂ ಕೈಗಾರಿಕೆಗಳನ್ನು ಸ್ಥಾಪಿಸಿದ್ದರೇ ಹೊರತು, ರೈತರ ಹಸಿರು ಭೂಮಿಯನ್ನಲ್ಲ ಎಂಬುದನ್ನು ಸಿಎಂ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿಗಳ ಉದ್ಧಟತನ:

“ಬಿಡದಿ ಭಾಗದಲ್ಲಿ ಫಲವತ್ತಾದ ಅಡಿಕೆ, ತೆಂಗಿನ ತೋಟಗಳಿವೆ ಹಾಗೂ ಹೈನುಗಾರಿಕೆಯನ್ನು ನಂಬಿದ ಸಾವಿರಾರು ರೈತ ಕುಟುಂಬಗಳಿವೆ. ಈ ವಾಸ್ತವ ಸ್ಥಿತಿಯನ್ನು ಮುಖ್ಯಮಂತ್ರಿಗಳು ಪ್ರಧಾನಿಯವರಿಗೆ ತಿಳಿಸಿದ್ದಾರಾ?” ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ನಡುವೆ ನಡೆದಿರುವ ವೈಯಕ್ತಿಕ ಮಾತುಕತೆಯ ವಿವರ ಯಾರಿಗೂ ತಿಳಿದಿಲ್ಲ. ಆದರೆ ಅಧಿಕಾರದ ಉದ್ಧಟತನದಿಂದ ರೈತರ ಜಮೀನು ಕೊಳ್ಳೆ ಹೊಡೆಯಲು ಪ್ರಧಾನಿಗಳ ಹೆಸರನ್ನು ಗುರಾಣಿ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಹಳೇ ವರದಿ ಬಹಿರಂಗಪಡಿಸಲಿ:

2006ರಲ್ಲಿ ತಾವೇ ಸ್ವತಃ ಐದು ಟೌನ್‌ಶಿಪ್‌ಗಳನ್ನು ಮಾಡಲು ಮುಂದಾದಾಗ ಇತ್ತೀಚಿನವರೆಗೂ ಕಾನೂನು ಮಂತ್ರಿಯಾಗಿದ್ದ ಹೆಚ್.ಕೆ. ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ರಚಿಸಿ ವಿರೋಧ ವ್ಯಕ್ತಪಡಿಸಿದ್ದನ್ನು ಕುಮಾರಸ್ವಾಮಿ ನೆನಪಿಸಿದ್ದಾರೆ. “ಅಂದು ನಮ್ಮ ಯೋಜನೆಯನ್ನು ವಿರೋಧಿಸಿದ್ದ ಕಾಂಗ್ರೆಸ್ ನಾಯಕರು, ಇಂದು ಕೃಷಿ ಭೂಮಿ ವಶಪಡಿಸಿಕೊಳ್ಳಲು ಹೊರಟಿರುವುದು ಅವರ ದ್ವಂದ್ವ ನೀತಿಯನ್ನು ತೋರಿಸುತ್ತದೆ. ಅಂದಿನ ಸತ್ಯಶೋಧನಾ ವರದಿಯನ್ನು ಸರ್ಕಾರ ತಕ್ಷಣ ಸಾರ್ವಜನಿಕರ ಮುಂದೆ ಇಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ. ರೈತರ ಭೂಮಿಯನ್ನು ಯಾವುದೇ ಕಾರಣಕ್ಕೂ ಕೊಳ್ಳೆ ಹೊಡೆಯಲು ಬಿಡುವುದಿಲ್ಲ ಮತ್ತು ಈ ವಿವಾದದ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಬಿಡದಿ ಟೌನ್‌ಶಿಪ್ ಯೋಜನೆ ಸರಕಾರಿ ರಿಯಲ್ ಎಸ್ಟೇಟ್ ಯೋಜನೆಯಾಗಿದೆ. ಇದು ಸಂಪೂರ್ಣವಾಗಿ ಹಣ ಲೂಟಿ ಮಾಡುವ ಯೋಚನೆಯಾಗಿದೆ, ಬಿಡದಿ ಟೌನ್‌ಶಿಪ್ ನಾಡಿನ ಹಿತಾಸಕ್ತಿ ಅಡಗಿಲ್ಲ. ಭೂ ಮಾಫಿಯ ಹಾಗೂ ಭೂ ಲೂಟಿಕೋರರಿಗೆ ಲಾಭ ಮಾಡಿಕೊಡಲು ಇದನ್ನು ರೂಪಿಸಲಾಗಿದೆ. ಹೀಗಾಗಿ ಇದನ್ನು ನಾನು ಸರಕಾರಿ ರಿಯಲ್ ಎಸ್ಟೇಟ್ ದಂಧೆ ಎಂದು ಕರೆಯುತ್ತೇನೆ ಎಂದು ಹೇಳಿದರು.

ರಸ್ತೆಗಳಲ್ಲಿ ಮೊಣಕಾಲುದ್ದ ಗುಂಡಿಗಳು ಬಿದ್ದು ವಾಹನ ಸಂಚಾರ ದೊಡ್ಡ ಪ್ರಯಾಸವಾಗಿದೆ. ಅದೇನೋ ಬ್ರ್ಯಾಂಡ್ ಬೆಂಗಳೂರು ಎಂದು ಹೇಳುತ್ತಿದ್ದರಲ್ಲ, ಅದನ್ನು ಮಾಡುವುದು ಬಿಟ್ಟು ಬಿಡದಿ ರೈತರ ಬದುಕಿಗೆ ಬೆಂಕಿ ಹಾಕಲು ಹೊರಟಿದ್ದಾರೆ.ಬೆಂಗಳೂರು ಅಭಿವೃದ್ಧಿಗೆ ಎಳ್ಳಷ್ಟು ಉಪಯೋಗ ಆಗದ ಈ ಯೋಜನೆಯನ್ನು ತಮ್ಮ ಸ್ವಾರ್ಥಕ್ಕಾಗಿ, ರಿಯಲ್ ಎಸ್ಟೇಟ್ ಮಾಫಿಯಾದೊಂದಿಗೆ ಕೈಜೋಡಿಸಿ ರೈತರ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದ್ದಾರೆ. ಈ ಹಿನ್ನೆಯಲ್ಲಿ ನಮ್ಮ ಪಕ್ಷ ರೈತರ ಪರವಾಗಿ ನಿಲ್ಲುತ್ತದೆ. ಅವರ ಜತೆ ನಿಂತು ಕಾನೂನು ಹೋರಾಟ ನಡೆಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.

ಈ ಯೋಜನೆ ಕುಮಾರಸ್ವಾಮಿ ಅವರ ಕೂಸು ಎಂದು ಮುಖ್ಯಮಂತ್ರಿ ಸೇರಿದಂತೆ ಇನ್ನೂ ಕೆಲವರು ಹೇಳುತ್ತಿದ್ದಾರೆ. ನಾನು ಚಿಂತನೆ ಮಾಡಿದ್ದು 2006ರಲ್ಲಿ, ಈಗ ನಾವು ಇರುವುದು 2026. 20 ವರ್ಷಗಳಲ್ಲಿ ಎಷ್ಟು ಬದಲಾವಣೆಯಾಗಿದೆ, ಎಷ್ಟೊಂದು ಅಭಿವೃದ್ಧಿಯಾಗಿದೆ. ಇಷ್ಟು ವರ್ಷಗಳಲ್ಲಿ ಏನೆಲ್ಲಾ ಆಯಿತು ಎನ್ನುವುದನ್ನು ಈ ಸರ್ಕಾರ ಅರ್ಥಃ ಮಾಡಿಕೊಳ್ಳಬೇಕು. ಯಾವುದೇ ಯೋಜನೆ ಕೈಗೊಳ್ಳುವ ಮೊದಲು ರೈತರ ಒಪ್ಪಿಗೆ ಪಡೆಯಬೇಕು. ಅದನ್ನು ಮಾಡದೇ ಈ ಸರ್ಕಾರ ಸಾರ್ವಕಾಧಿಕಾರಿ ಮನೋಭಾವದಿಂದ ರೈತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮೊದಲಿನಿಂದ ಕಾಂಗ್ರೆಸ್ ಸರಕಾರ ಇಂಥದೇ ದಂಧೆಯಲ್ಲಿ ನಿರತವಾಗಿದೆ. ಬೆಂಗಳೂರು ಸುತ್ತಮುತ್ತ ಅರ್ಕಾವತಿ ಬಡಾವಣೆಗೆ ಸುಮಾರು ಮೂರು ಸಾವಿರ ಎಕರೆ ಭೂಮಿಯನ್ನು ನೋಟಿಫೈ ಮಾಡಲಾಗಿತ್ತು. ಆಮೇಲೆ ಅದರಲ್ಲಿ ಒಂದು ಸಾವಿರ ಎಕರೆ ಭೂಮಿಯನ್ನು ಕೈಬಿಡಲಾಯಿತು. ಇವೆಲ್ಲವೂ ಕಣ್ಣ ಮುಂದೆಯೇ ನಡೆದಿವೆ. ಅದರ ತನಿಖೆಗೆ ಕೆಂಪಣ್ಣ ಆಯೋಗ ರಚನೆ ಮಾಡಿದರು. ಆ ವರದಿ ಎಲ್ಲಿ ಕೊಳೆಯುತ್ತಿದೆಯೋ ಗೊತ್ತಿಲ್ಲ ಎಂದು ಅವರು ಹೇಳಿದರು.

 


Share this with Friends

Related Post