Mon. Jun 15th, 2026

ಶೂನ್ಯ ವೆಚ್ಚದಲ್ಲಿ ವಿದ್ಯುತ್ ಪ್ರಸರಣ ಸಾಮರ್ಥ್ಯ ಶೇ.25 ಹೆಚ್ಚಳ: ಕೆಪಿಟಿಸಿಎಲ್‌ನಿಂದ ಅತ್ಯಾಧುನಿಕ ‘ಡಿಎಲ್‌ಆರ್’ ತಂತ್ರಜ್ಞಾನ ಜಾರಿ!

Share this with Friends

ಬೆಂಗಳೂರು: ರಾಜ್ಯದ ಇಂಧನ ವಲಯದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL), ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಿಲ್ಲದೆ ವಿದ್ಯುತ್ ಪ್ರಸರಣ ಸಾಮರ್ಥ್ಯವನ್ನು ಶೇಕಡಾ 25ರಷ್ಟು ವಿಸ್ತರಿಸುವ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಗೆ ಚಾಲನೆ ನೀಡಿದೆ .

ಬೆಂಗಳೂರು ನಗರದ ಪುಟ್ಟೇನಹಳ್ಳಿ ಮತ್ತು ಸಹಕಾರನಗರ ನಡುವಿನ 220 ಕೆವಿ ವಿದ್ಯುತ್ ಪ್ರಸರಣ ಮಾರ್ಗದಲ್ಲಿ ‘ಡೈನಾಮಿಕ್ ಲೈನ್ ರೇಟಿಂಗ್’ (DLR) ಪ್ರಾಯೋಗಿಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ದಕ್ಷಿಣ ಭಾರತದಲ್ಲೇ ಮೊದಲ ಸಾಧನೆ

ಈ ವಿನೂತನ ಯೋಜನೆಯ ಯಶಸ್ವಿ ಜಾರಿಗೆ ಕೆಪಿಟಿಸಿಎಲ್ ಈಗಾಗಲೇ ಕಾರ್ಯಾದೇಶ ಪತ್ರವನ್ನು (LoI) ವಿತರಿಸಿದೆ. ಈ ಮೂಲಕ ಇಂತಹ ಮುನ್ನಡೆ ಹೊಂದಿದ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ದಕ್ಷಿಣ ಭಾರತದ ಅತ್ಯಂತ ಮೊದಲ ರಾಜ್ಯ ವಿದ್ಯುತ್ ಪ್ರಸರಣ ನಿಗಮ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

ಈ ಹೊಸ ತಂತ್ರಜ್ಞಾನದ ಪ್ರಮುಖ ವಿಶೇಷತೆಯೆಂದರೆ, ವಿದ್ಯುತ್ ಸಾಮರ್ಥ್ಯ ಹೆಚ್ಚಿಸಲು ಯಾವುದೇ ಹೊಸ ಟವರ್‌ಗಳ ನಿರ್ಮಾಣ ಅಥವಾ ಹೆಚ್ಚುವರಿ ಭೂಸ್ವಾಧೀನ ಪ್ರಕ್ರಿಯೆಯ ಅಗತ್ಯವಿರುವುದಿಲ್ಲ . ಪ್ರಸ್ತುತ ಲಭ್ಯವಿರುವ ಮೂಲಸೌಕರ್ಯಗಳನ್ನೇ ಬಳಸಿಕೊಂಡು ಶೇ.25ರಷ್ಟು ಹೆಚ್ಚಿನ ವಿದ್ಯುತ್ ಪ್ರಸರಣ ಮಾಡಬಹುದಾಗಿದೆ.

ಐಒಟಿ ಸಂವೇದಕಗಳ ಆಧುನಿಕ ಸ್ಪರ್ಶ

ಸದ್ಯ ಬಳಕೆಯಲ್ಲಿರುವ ಸಾಂಪ್ರದಾಯಿಕ ‘ಸ್ಟಾಟಿಕ್ ಲೈನ್ ರೇಟಿಂಗ್’ ಪದ್ಧತಿಯ ಬದಲಾಗಿ, ಈ ಹೊಸ ವ್ಯವಸ್ಥೆಯಲ್ಲಿ ಅತ್ಯಾಧುನಿಕ ಐಒಟಿ (IoT) ಸಂವೇದಕಗಳನ್ನು ಬಳಸಲಾಗುತ್ತದೆ. ಈ ಸ್ಮಾರ್ಟ್ ಸಂವೇದಕಗಳು ತಾಪಮಾನ, ಗಾಳಿಯ ವೇಗ, ಸೌರ ವಿಕಿರಣ ಮತ್ತು ವಿದ್ಯುತ್ ತಂತಿಯ ನೈಜ ಸ್ಥಿತಿಗತಿಯನ್ನು (Conductor Sag) ಕ್ಷಣಕ್ಷಣಕ್ಕೂ ನಿರಂತರವಾಗಿ ಪರಿಶೀಲಿಸುತ್ತಿರುತ್ತವೆ. ಈ ನಿಖರ ದತ್ತಾಂಶವು ಗ್ರಿಡ್ ನಿರ್ವಾಹಕರಿಗೆ ಹವಾಮಾನದ ಏರಿಳಿತಗಳಿಗೆ ಅನುಗುಣವಾಗಿ ಸುರಕ್ಷಿತವಾಗಿ ಹೆಚ್ಚಿನ ವಿದ್ಯುತ್ ಹರಿಸಲು ನೆರವಾಗುತ್ತದೆ.

ಹೆಚ್ಚುತ್ತಿರುವ ಬೇಡಿಕೆಗೆ ಡಿಜಿಟಲ್ ಪರಿಹಾರ

ರಾಜ್ಯದಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ನಗರೀಕರಣ, ಎಲೆಕ್ಟ್ರಿಕ್ ವಾಹನಗಳ (EV) ಬಳಕೆ, ಬೃಹತ್ ಡೇಟಾ ಸೆಂಟರ್‌ಗಳು ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ಕೈಗಾರಿಕೆಗಳಿಂದಾಗಿ ವಿದ್ಯುತ್ ಬೇಡಿಕೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಈ ತಂತ್ರಜ್ಞಾನವು ಗ್ರಿಡ್ ಸಮತೋಲನ ಕಾಯ್ದುಕೊಳ್ಳಲು ಅತ್ಯಂತ ಉಪಯುಕ್ತವಾಗಲಿದೆ .

ಪುಟ್ಟೇನಹಳ್ಳಿ-ಸಹಕಾರನಗರ ಮಾರ್ಗದ ಪ್ರಾಯೋಗಿಕ ಯೋಜನೆಯ ಯಶಸ್ಸನ್ನು ಆಧರಿಸಿ, ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಹೆಚ್ಚಿನ ಬೇಡಿಕೆಯಿರುವ ಹಾಗೂ ನವೀಕರಿಸಬಹುದಾದ ಇಂಧನ ಮಾರ್ಗಗಳಿಗೂ ಈ ಡಿಜಿಟಲ್ ಜಾಲವನ್ನು ವಿಸ್ತರಿಸಲು ಕೆಪಿಟಿಸಿಎಲ್ ಬೃಹತ್ ಯೋಜನೆ ರೂಪಿಸಿದೆ.

ಈ ಕುರಿತು ಮಾಹಿತಿ ನೀಡಿದ ಇಂಧನ‌ ಸಚಿವ ಕೆಜೆ ಜಾರ್ಜ್,”ಕರ್ನಾಟಕವು ವಿದ್ಯುತ್ ವಲಯದಲ್ಲಿ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಪುಟ್ಟೇನಹಳ್ಳಿ-ಸಹಕಾರನಗರ ಕಾರಿಡಾರ್‌ನಲ್ಲಿ ಅಳವಡಿಸಲಾಗುತ್ತಿರುವ ಈ ಡೈನಾಮಿಕ್ ಲೈನ್ ರೇಟಿಂಗ್ ಯೋಜನೆಯು, ಲಭ್ಯವಿರುವ ಮೂಲಸೌಕರ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ವಿದ್ಯುತ್ ಜಾಲದ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ. ಹೆಚ್ಚಿನ ಬಂಡವಾಳ ಹೂಡಿಕೆಯಿಲ್ಲದೆ ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್‌ ಬೇಡಿಕೆಯನ್ನು ಪೂರೈಸಲು ಇದು ಸಹಕಾರಿಯಾಗಲಿದೆ. ಈ ತಂತ್ರಜ್ಞಾನ ಅಳವಡಿಕೆ, ರಾಜ್ಯದಲ್ಲಿ ಭವಿಷ್ಯಕ್ಕೆ ಸಜ್ಜಾದ ವಿದ್ಯುತ್ ವ್ಯವಸ್ಥೆಯನ್ನು ನಿರ್ಮಿಸಲು ನಮಗೆ ಅನುವು ಮಾಡಿಕೊಡಲಿದೆ” ಎಂದರು.

ಕೆಪಿಟಿಸಿಎಲ್ ನ ವ್ಯವಸ್ಥಾಪಕ ನಿರ್ದೇಶಕಡಾ. ವಿ. ರಾಮ್ ಪ್ರಸಾತ್ ಮನೋಹರ್,”ಡೈನಾಮಿಕ್ ಲೈನ್ ರೇಟಿಂಗ್ ವ್ಯವಸ್ಥೆಯಿಂದಾಗಿ, ದತ್ತಾಂಶ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಸರಣ ಜಾಲದ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ರಾಜ್ಯದ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ನಮಗೆ ನೆರವಾಗಲಿದೆ”ಎಂದರು.

ಸ್ಟಾಟಿಕ್ ಲೈನ್ ರೇಟಿಂಗ್: ಈ ವಿಧಾನದಲ್ಲಿ ವಿದ್ಯುತ್‌ ತಂತಿಗಳು ಎಷ್ಟು ವಿದ್ಯುತ್‌ ಸಾಗಿಸಬಲ್ಲವು ಎಂದು ಲೆಕ್ಕ ಹಾಕುವಾಗ,  ಇಂಜಿನೀಯರ್‌ಗಳು ʼಅತಿ ಹೆಚ್ಚು ಬಿಸಿಲು ಅಥವಾ ಗಾಳಿಯೇ ಇಲ್ಲದ ಪರಿಸ್ಥಿತಿಯನ್ನು ಮಾನದಂಡವಾಗಿಟ್ಟುಕೊಂಡಿರುತ್ತಾರೆ. ಇದು ಸುರಕ್ಷಿತ ವಿಧಾನ.  ಆದರೆ, ಪರಿಸ್ಥಿತಿ ಮತ್ತು ಹವಾಮಾನ ಉತ್ತಮವಾಗಿದ್ದೂ, ವಿದ್ಯುತ್‌ ತಂತಿಗಳು ಹೆಚ್ಚಿನ ವಿದ್ಯುತ್‌ ಸಾಗಿಸುವ ಸಾಮರ್ಥ್ಯ ಹೊಂದಿದ್ದರೂ ನಾವು ಹಾಕಿಕೊಂಡಿರುವ ಮಿತಿಗಳಿಂದ ಹೆಚ್ಚಿನ ವಿದ್ಯುತ್‌ ಸಾಗಿಸಲು ಸಾಧ್ಯವಾಗುವುದಿಲ್ಲ. ರಸ್ತೆ ಉತ್ತಮವಾಗಿದ್ದರೂ ವೇಗದ ಮಿತಿ ಹೇರಿಕೆಯಿಂದ ವಾಹನ ಸಂಚಾರ ನಿಯಂತ್ರಣದಂತೆ ಇದಾಗಿದೆ. ಇದರಿಂದ ಗ್ರಿಡ್‌ನ ದೊಡ್ಡ ಪ್ರಮಾಣದ ಸಾಮರ್ಥ್ಯ ಸುಮ್ಮನೆ ವ್ಯರ್ಥವಾಗುತ್ತದೆ.

 ‘ಡೈನಾಮಿಕ್ ಲೈನ್ ರೇಟಿಂಗ್’ (DLR) ತಂತ್ರಜ್ಞಾನ ಇದಕ್ಕೆ ತದ್ವಿರುದ್ಧ. ಇದು ವಾಸ್ತವಿಕ ಪರಿಸ್ಥಿತಿಗೆ ತಕ್ಕಂತೆ ಬದಲಾಗುವ ಜಾಣ ತಂತ್ರಜ್ಞಾನ. ತಂತಿಗಳ ಮೇಲೆ ಅಳವಡಿಸುವ ಸ್ಮಾರ್ಟ್ ಸೆನ್ಸಾರ್‌ಗಳು ಗಾಳಿಯ ವೇಗ, ತಾಪಮಾನ ಮುಂತಾದವನ್ನು ಕ್ಷಣಕ್ಷಣಕ್ಕೂ ಗಮನಿಸುತ್ತವೆ. ಗಾಳಿ ಬೀಸುತ್ತಿದ್ದರೆ ತಂತಿಗಳು ತಂಪಾಗಿರುತ್ತವೆ, ಅಂತಹ ಸಮಯದಲ್ಲಿ ಆ ತಂತಿಗಳು ಹೆಚ್ಚು ವಿದ್ಯುತ್ ಸಾಗಿಸಲು ಸಿದ್ಧವಿರುತ್ತವೆ. ಈ ತಂತ್ರಜ್ಞಾನ ಆ ಪರಿಸ್ಥಿತಿಯನ್ನು ಗ್ರಹಿಸಿ, ವ್ಯರ್ಥವಾಗುತ್ತಿದ್ದ ಶೇ. 25ರಷ್ಟು ಹೆಚ್ಚುವರಿ ಸಾಮರ್ಥ್ಯವನ್ನು ಸುರಕ್ಷಿತವಾಗಿ ಬಳಸಿಕೊಳ್ಳಲು ನಮಗೆ ದಾರಿ ಮಾಡಿಕೊಡುತ್ತದೆ. ಹೊಸ ಟವರ್‌ಗಳನ್ನು ಕಟ್ಟುವ ಭಾರಿ ಖರ್ಚಿಲ್ಲದೆ, ಇದ್ದಿದ್ದರಲ್ಲೇ ಹೆಚ್ಚು ವಿದ್ಯುತ್ ಪಡೆಯುವ ಜಾಣ್ಮೆ ಇದಾಗಿದೆ.


Share this with Friends

Related Post