ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನೋಂದಣಿ ಮತ್ತು ಹಣಕಾಸಿನ ಮೂಲಗಳ ಬಗ್ಗೆ ಸ್ಪಷ್ಟನೆ ಕೋರಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಬರೆದಿದ್ದ ಬಹಿರಂಗ ಪತ್ರಕ್ಕೆ ಆರ್‌ಎಸ್‌ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ ಸಚಿವರ ಈ ನಡೆಯನ್ನು ಅವರು ಕೇವಲ ‘ರಾಜಕೀಯ ಗಿಮಿಕ್’ ಮತ್ತು ರಾಜಕೀಯ ಪ್ರೇರಿತ ಎಂದು ವ್ಯಾಖ್ಯಾನಿಸಿದ್ದಾರೆ.
ಕೇರಳದ ತ್ರಿಶೂರ್‌ನಲ್ಲಿ ಸಚಿವರ ಪತ್ರದ ಕುರಿತು ಮಾತನಾಡಿದ ಭಾಗವತ್, “ಈ ವಿಚಾರದಲ್ಲಿ ನಾನು ಯಾಕೆ ಪ್ರತಿಕ್ರಿಯೆ ನೀಡಬೇಕು? ಸಂಘವು ಕದ್ದುಮುಚ್ಚಿ ಕೆಲಸ ಮಾಡುತ್ತಿಲ್ಲ, ಬದಲಿಗೆ ಅತ್ಯಂತ ಬಹಿರಂಗವಾಗಿಯೇ ಕಾರ್ಯನಿರ್ವಹಿಸುತ್ತಿದೆ. ಸಂಘದ ಇತಿಹಾಸ ಮತ್ತು ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಚೆನ್ನಾಗಿ ಗೊತ್ತಿದೆ. ಕಳೆದ 10ರಿಂದ 15 ವರ್ಷಗಳಿಂದ ಇಂತಹ ರಾಜಕೀಯ ಆರೋಪಗಳನ್ನು ನಾವು ಎದುರಿಸುತ್ತಲೇ ಬಂದಿದ್ದೇವೆ. ಇದು ಕೇವಲ ಜನರಲ್ಲಿ ಗೊಂದಲ ಸೃಷ್ಟಿಸುವ ರಾಜಕೀಯ ಪ್ರಯತ್ನವಷ್ಟೇ” ಎಂದು ಕಿಡಿಕಾರಿದ್ದಾರೆ.
ಬ್ರಿಟಿಷ್ ಕಾಲದ ಇತಿಹಾಸ, ನೋಂದಣಿ ಅಗತ್ಯವಿಲ್ಲ
ಆರ್‌ಎಸ್‌ಎಸ್ ಬ್ರಿಟಿಷರ ಕಾಲದಿಂದಲೇ ಸಾರ್ವಜನಿಕವಾಗಿ ದೇಶಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ಸ್ಮರಿಸಿದ ಅವರು, “ದೇಶದಲ್ಲಿ ಹಿಂದೂ ಧರ್ಮವೇ ಎಲ್ಲೂ ನೋಂದಣಿಯಾಗಿಲ್ಲ. ಭಾರತದಲ್ಲಿ ಎಷ್ಟೋ ಪ್ರಮುಖ ಸಂಘ-ಸಂಸ್ಥೆಗಳು ಇನ್ನು ಕೂಡ ಅಧಿಕೃತವಾಗಿ ನೋಂದಣಿಯಾಗಿಲ್ಲ. ಸಂಘವು ಯಾವುದೇ ಸರ್ಕಾರಗಳ ಮೇಲೆ ಒತ್ತಡ ಹೇರುವ ಕೆಲಸ ಮಾಡಿಲ್ಲ, ಅಂಥ ಪರಿಸ್ಥಿತಿ ಇದ್ದಿದ್ದರೆ ನೋಂದಣಿ ಅಗತ್ಯವಾಗುತ್ತಿತ್ತು. ಸುಮಾರು 100 ವರ್ಷಗಳ ಇತಿಹಾಸದಲ್ಲಿ ಯಾರೂ ಸಂಘ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿಲ್ಲ. 1950ರಿಂದಲೂ ನಾವು ಸಂವಿಧಾನಾತ್ಮಕ ಚೌಕಟ್ಟಿನೊಳಗೇ ಶಿಸ್ತಿನಿಂದ ಕಾರ್ಯನಿರ್ವಹಿಸುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಜನರಿಗೆ ಸಂಘದ ಬಗ್ಗೆ ಅರಿವಿದೆ
ಯಾವ ಸರ್ಕಾರವೂ ಈವರೆಗೆ ಆರ್‌ಎಸ್‌ಎಸ್ ನೋಂದಣಿ ಕಡ್ಡಾಯ ಎಂದು ಹೇಳಿಲ್ಲ ಮತ್ತು ಈ ಹಿಂದಿನ ಎಲ್ಲಾ ನಿಷೇಧಗಳನ್ನು ನ್ಯಾಯಾಲಯಗಳೇ ತೆರವುಗೊಳಿಸಿವೆ ಎಂದು ಅವರು ನೆನಪಿಸಿದ್ದಾರೆ. “ಇದು ಯಾವುದೇ ಗಂಭೀರ ವಿಷಯವಲ್ಲ, ಕೆಲವರು ಗೊಂದಲ ಮೂಡಿಸಲು ಯತ್ನಿಸುತ್ತಿದ್ದರೂ ಅದು ಫಲ ನೀಡುವುದಿಲ್ಲ. ನಮ್ಮ ಎಲ್ಲ ಶಾಖೆಗಳು ಸಾರ್ವಜನಿಕರಿಗೆ ಮುಕ್ತವಾಗಿದ್ದು, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಕಾರ್ಯಕರ್ತರು ಸ್ಥಳೀಯವಾಗಿ ಗುರುತಿಸಿಕೊಂಡಿದ್ದಾರೆ” ಎಂದು ಭಾಗವತ್ ತಿಳಿಸಿದ್ದಾರೆ.

