Tue. Jun 23rd, 2026

ರಾಷ್ಟ್ರೀಯ ಅಧ್ಯಕ್ಷರಿಗೆ ಇಂದು ಅಡ್ಡಮತದಾನದ ಸಮಗ್ರ ವರದಿ ಸಲ್ಲಿಕೆ: ನವದೆಹಲಿಯಲ್ಲಿ ಬಿ.ವೈ. ವಿಜಯೇಂದ್ರ ಹೇಳಿಕೆ

Share this with Friends

ನವದೆಹಲಿ: ವಿಧಾನಪರಿಷತ್ ಚುನಾವಣೆಯಲ್ಲಿ ಮೈತ್ರಿಕೂಟದ ಕೆಲವು ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡಮತದಾನ (ಕ್ರಾಸ್ ವೋಟಿಂಗ್) ಮಾಡಿರುವ ಕುರಿತು ಇಂದು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರಿಗೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ರಾಜಧಾನಿ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲ ಹಂತದ ವಿದ್ಯಮಾನಗಳ ಕುರಿತು ಹೈಕಮಾಂಡ್‌ಗೆ ಮಾಹಿತಿ ನೀಡಲು ತಾವು ದೆಹಲಿಗೆ ಬಂದಿರುವುದಾಗಿ ಹೇಳಿದರು. ತಾವಷ್ಟೇ ಅಲ್ಲದೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಚುನಾವಣಾ ಜವಾಬ್ದಾರಿ ಹೊತ್ತಿದ್ದ ಎನ್. ರವಿಕುಮಾರ್ ಮತ್ತು ನವೀನ್ ಅವರು ಜಂಟಿಯಾಗಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಈ ವರದಿಯನ್ನು ಹಸ್ತಾಂತರಿಸಲಿದ್ದಾರೆ ಎಂದು ವಿವರಿಸಿದರು.

ಸಿ.ಟಿ. ರವಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ:

ಅಡ್ಡಮತದಾನದ ಇಡೀ ಪ್ರಕ್ರಿಯೆಯ ಆಳ ಮತ್ತು ಆಂತರಿಕ ಸತ್ಯಾಸತ್ಯತೆಗಳನ್ನು ಹೊರಗೆಳೆಯಲು ಪಕ್ಷದ ಹಿರಿಯ ಮುಖಂಡ ಸಿ.ಟಿ. ರವಿ ಅವರ ನೇತೃತ್ವದಲ್ಲಿ ‘ಸತ್ಯಶೋಧನಾ ಸಮಿತಿ’ಯನ್ನು ರಚಿಸಲಾಗಿದೆ ಎಂದು ವಿಜಯೇಂದ್ರ ಇದೇ ವೇಳೆ ಪ್ರಕಟಿಸಿದರು. ಈ ಸಮಿತಿಯು ಶೀಘ್ರದಲ್ಲೇ ತನ್ನ ತನಿಖಾ ವರದಿಯನ್ನು ರಾಜ್ಯ ಘಟಕಕ್ಕೆ ನೀಡಲಿದ್ದು, ಅದನ್ನು ಕೂಡ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಅಧ್ಯಕ್ಷರಿಗೆ ತಲುಪಿಸಲಾಗುವುದು ಎಂದರು. ಚುನಾವಣೆ ಮುಗಿದ ಮರುದಿನವೇ ತಾವು ರಾಷ್ಟ್ರೀಯ ಅಧ್ಯಕ್ಷರಿಗೆ ಕರೆ ಮಾಡಿ ಪ್ರಾಥಮಿಕ ಮಾಹಿತಿ ನೀಡಿದ್ದಾಗಿ ಮತ್ತು ಅವರು ಕೇಳಿದ ಹೆಚ್ಚಿನ ವಿವರಗಳನ್ನು ನೀಡಲು ಇಂದು ಭೇಟಿಯಾಗುತ್ತಿರುವುದಾಗಿ ಸ್ಪಷ್ಟಪಡಿಸಿದರು.

ಸದಾನಂದಗೌಡರ ಭೇಟಿ ಹಾಗೂ ಧರ್ಮಸ್ಥಳ ಸಭೆ ಕುರಿತು:

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು, “ಸದಾನಂದಗೌಡರು ಯಾವ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಮೊನ್ನೆ ಅವರೇ ನನಗೆ ಕರೆ ಮಾಡಿದ್ದರು. ಹಿರಿಯ ನಾಯಕರು ಕರೆ ಮಾಡಿದಾಗ ಮರಳಿ ಮಾತನಾಡುವುದು ನನ್ನ ಕರ್ತವ್ಯ. ಬೆಂಗಳೂರಿಗೆ ಮರಳಿದ ತಕ್ಷಣ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಚರ್ಚಿಸುತ್ತೇನೆ” ಎಂದರು. ಇದೇ ವೇಳೆ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯುವ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ, “ಆ ಬಗ್ಗೆ ನಾನು ಈಗಾಗಲೇ ನನ್ನ ವೈಯಕ್ತಿಕ ಅಭಿಪ್ರಾಯವನ್ನು ಹಂಚಿಕೊಂಡಿದ್ದೇನೆ. ಅಂತಿಮವಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಎಲ್ಲರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ” ಎಂದು ಉತ್ತರಿಸಿದರು.

 

 


Share this with Friends

Related Post