Wed. Jun 24th, 2026

ಇಡಿ ದಾಳಿಗಳು ರಾಜಕೀಯ ಪ್ರೇರಿತ, ಮುಂದಿನ ಟಾರ್ಗೆಟ್ ನಾನೇ ಇರಬಹುದು: ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

Share this with Friends

ಬೆಂಗಳೂರು:ಕೇಂದ್ರದ ತನಿಖಾ ಸಂಸ್ಥೆಗಳು ಕೇವಲ ವಿರೋಧ ಪಕ್ಷದ ನಾಯಕರನ್ನು ಮಟ್ಟಹಾಕುವ ರಾಜಕೀಯ ಅಸ್ತ್ರಗಳಾಗಿ ಬಳಕೆಯಾಗುತ್ತಿವೆ,ಮುಂದಿನ ಟಾರ್ಗೆಟ್ ನಾನೇ ಇರಬಹುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಅವರು, “ಬಿಜೆಪಿ ಸರ್ಕಾರವು ಕೇವಲ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇವತ್ತಲ್ಲ ನಾಳೆ ನನ್ನ ಮೇಲೂ ಇಡಿ ದಾಳಿ ನಡೆದರೂ ಅಚ್ಚರಿಯಿಲ್ಲ”.ಕೇಂದ್ರ ಸರ್ಕಾರದ ಅಧೀನದಲ್ಲಿರುವ ಐಟಿ, ಇಡಿ ಮತ್ತು ಸಿಬಿಐ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ, ಬದಲಿಗೆ ಆಡಳಿತ ಪಕ್ಷದ ಕೈಗೊಂಬೆಗಳಾಗಿವೆ ಎಂದು ಖರ್ಗೆ ದೂರಿದ್ದಾರೆ.

ಅಂಕಿಅಂಶ ಬಿಚ್ಚಿಟ್ಟ ಸಚಿವ:

ಕೇಂದ್ರದ ತನಿಖಾ ಸಂಸ್ಥೆಗಳ ಕಾರ್ಯವೈಖರಿಯನ್ನು ಅಂಕಿಅಂಶಗಳ ಸಮೇತ ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ, “ಕಳೆದ 12 ವರ್ಷಗಳಲ್ಲಿ ದೇಶಾದ್ಯಂತ ವಿರೋಧ ಪಕ್ಷಗಳ ನಾಯಕರನ್ನು ಹೆದರಿಸಲು ಸಾವಿರಾರು ಇಡಿ ದಾಳಿಗಳನ್ನು ಮಾಡಿಸಲಾಗಿದೆ. ಆದರೆ, ಈ ದಾಳಿಗಳ ಪೈಕಿ ಕಾನೂನುಬದ್ಧವಾಗಿ ಅಪರಾಧ ಸಾಬೀತಾಗಿ ಶಿಕ್ಷೆಯಾಗಿರುವ ಪ್ರಮಾಣ ಶೇಕಡಾ 2 ಕ್ಕಿಂತಲೂ ಕಡಿಮೆ ಇದೆ. ಕೇವಲ ಶೇ. 1.5 ರಷ್ಟು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂದರೆ, ಇನ್ನುಳಿದ ದಾಳಿಗಳು ಕೇವಲ ರಾಜಕೀಯ ದ್ವೇಷದ ಪಿತೂರಿ ಎಂಬುದು ಸ್ಪಷ್ಟವಾಗುತ್ತದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ನಾಯಕರೇ ಟಾರ್ಗೆಟ್:

ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಅಥವಾ ರಾಜಕೀಯವಾಗಿ ಎದುರಿಸಲು ಸಾಧ್ಯವಾಗದಿದ್ದಾಗ ಇಂತಹ ದಾಳಿಗಳನ್ನು ನಡೆಸಲಾಗುತ್ತದೆ. ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಅಡಗಿಸಲು ಇಂತಹ ತಂತ್ರಗಳನ್ನು ಬಳಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ನ ಮತ್ತಷ್ಟು ನಾಯಕರನ್ನು ಇಡಿ ಜಾಲಕ್ಕೆ ಸಿಲುಕಿಸುವ ಪ್ರಯತ್ನ ನಡೆಯಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 


Share this with Friends

Related Post