ಬೆಂಗಳೂರು:ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಡಿ.ಕೆ.ಶಿವಕುಮಾರ್ ಅವರು ಮೊದಲ ಬಾರಿಗೆ ಸರ್ಕಾರದ ಅಧಿಕೃತ ಗೃಹ ಕಚೇರಿ ‘ಕೃಷ್ಣಾ’ಗೆ ಆಗಮಿಸಿ ಕಾರ್ಯಕಲಾಪಗಳನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಅವರು ರಂಭಾಪುರಿ ಪೀಠದ ಜಗದ್ಗುರು ಲಿಂಗೈಕ್ಯ ಶ್ರೀ ಪ್ರಸನ್ನ ರೇಣುಕ ವೀರ ಗಂಗಾಧರ ಶಿವಾಚಾರ್ಯ ಭಗವತ್ಪಾದರ (ಅಜ್ಜಯ್ಯ) ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ಅಜ್ಜಯ್ಯನ ಭಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದರು.
“ಕರ್ನಾಟಕ ರಾಜ್ಯವು ಸುಭಿಕ್ಷವಾಗಿರಲಿ ಹಾಗೂ ಉತ್ತರೋತ್ತರ ಅಭಿವೃದ್ಧಿ ಕಾಣಲಿ” ಎಂದು ಸಂಕಲ್ಪ ಮಾಡಿದ ಸಿಎಂ, ಕಚೇರಿಯಲ್ಲಿ ಶ್ರೀ ಗಣೇಶ ಹಾಗೂ ರಂಭಾಪುರಿ ಅಜ್ಜಯ್ಯನ ಫೋಟೋಗೆ ಧೂಪ-ದೀಪ ಬೆಳಗಿ ಆಡಳಿತಾತ್ಮಕ ಕೆಲಸಗಳಿಗೆ ಚಾಲನೆ ನೀಡಿದರು.
ಗಮನ ಸೆಳೆದಿದ್ದ ‘ಅಜ್ಜಯ್ಯ’ನ ಭಕ್ತಿ:
ಡಿ.ಕೆ.ಶಿವಕುಮಾರ್ ಅವರಿಗೆ ರಂಭಾಪುರಿ ಶ್ರೀಗಳ ಮೇಲಿರುವ ಅಪಾರ ನಡೆ-ನುಡಿ ಮತ್ತು ಭಕ್ತಿ ಸಾರ್ವಜನಿಕ ವಲಯದಲ್ಲಿ ಹೊಸದೇನಲ್ಲ. ಈ ಹಿಂದೆ ನಡೆದ ಅವರ ಭವ್ಯ ಪ್ರಮಾಣವಚನ ಸ್ವೀಕಾರ ಸಮಾರಂಭದ ವೇದಿಕೆಯಲ್ಲೂ ಅಜ್ಜಯ್ಯನವರ ಫೋಟೋ ಪ್ರಮುಖವಾಗಿ ರಾರಾಜಿಸಿ ಇಡೀ ರಾಜ್ಯದ ಗಮನ ಸೆಳೆದಿತ್ತು. ಆ ಬಳಿಕ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯನ್ನು ಪ್ರವೇಶಿಸಿದ ದಿನವೂ ಅವರು ಮೊದಲು ಪೂಜಿಸಿದ್ದು ಇದೇ ವೀರ ಗಂಗಾಧರ ಶ್ರೀಗಳ ಭಾವಚಿತ್ರವನ್ನು. ಈಗ ಗೃಹ ಕಚೇರಿ ‘ಕೃಷ್ಣಾ’ದಲ್ಲೂ ಅದೇ ಭಕ್ತಿಯ ಪರಂಪರೆಯನ್ನು ಮುಂದುವರಿಸಿರುವುದು ವಿಶೇಷವಾಗಿ ಎಲ್ಲರ ಗಮನ ಸೆಳೆದಿದೆ.
ಕಚೇರಿಯಲ್ಲೇ ಶಾಸಕರ ಅಹವಾಲು ಸ್ವೀಕಾರ:
ಪೂಜಾ ಕಾರ್ಯಕ್ರಮಗಳ ಮುಕ್ತಾಯದ ಬೆನ್ನಲ್ಲೇ ಮುಖ್ಯಮಂತ್ರಿಗಳು ಗೃಹ ಕಚೇರಿಯಲ್ಲಿ ಜನಪ್ರತಿನಿಧಿಗಳ ಭೇಟಿಗೆ ಕಾಲಾವಕಾಶ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಿ.ಎಂ. ಲಿಂಗಪ್ಪ, ಶಾಸಕರಾದ ವಿಜಯಾನಂದ ಕಾಶಪ್ಪನವರ್ ಹಾಗೂ ಶ್ರೀನಿವಾಸ್ ಮಾನೆ ಉಪಸ್ಥಿತರಿದ್ದು, ಸಿಎಂ ಅವರಿಗೆ ಶುಭ ಕೋರಿದರು. ಭೇಟಿಯ ವೇಳೆ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಪ್ರಾಥಮಿಕ ಚರ್ಚೆ ನಡೆಸಿದರು

