Thu. Jun 25th, 2026

ಸಾಮಾಜಿಕ ಭದ್ರತಾ ಪಿಂಚಣಿ ವ್ಯವಸ್ಥೆ ಸುಧಾರಣೆ: 91,152 ಅನರ್ಹರ ಪಿಂಚಣಿ ರದ್ದು, 63 ಲಕ್ಷಕ್ಕೂ ಹೆಚ್ಚು ಜನರಿಗೆ ನಗದು ಪಾವತಿ!

Share this with Friends

ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಡಿ ವಿತರಿಸಲಾಗುತ್ತಿರುವ ಪಿಂಚಣಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ನಕಲಿ ದಾಖಲೆ ನೀಡಿ ಅನರ್ಹವಾಗಿ ಸೌಲಭ್ಯ ಪಡೆಯುತ್ತಿದ್ದ ಒಟ್ಟು 91,152 ಜನರ ಪಿಂಚಣಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಾದ್ಯಂತ ಸದ್ಯ 83,11,493 ಫಲಾನುಭವಿಗಳು ವಿವಿಧ ಪಿಂಚಣಿ ಯೋಜನೆಗಳ ವ್ಯಾಪ್ತಿಯಲ್ಲಿದ್ದಾರೆ. ಇವರಲ್ಲಿ ಪ್ರಾಥಮಿಕ ಹಂತದ ತಪಾಸಣೆ ನಡೆಸಿದಾಗ 23,13,664 ಫಲಾನುಭವಿಗಳ ವಿವರಗಳು ಸಂದೇಹಾಸ್ಪದವಾಗಿ ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ ಆಧುನಿಕ ತಂತ್ರಜ್ಞಾನದ ‘ಸಂಯೋಜನೆ’ ಮೊಬೈಲ್ ಆ್ಯಪ್ ಮೂಲಕ ಇಂತಹ ಖಾತೆಗಳ ನೈಜತೆಯನ್ನು ಕೂಲಂಕಷವಾಗಿ ಮರುಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

63 ಲಕ್ಷಕ್ಕೂ ಅಧಿಕ ಅರ್ಹರಿಗೆ ಪಿಂಚಣಿ ವಿತರಣೆ

ಸಂದೇಹಾಸ್ಪದ ಪಟ್ಟಿಯಲ್ಲಿದ್ದ ಖಾತೆಗಳ ಪೈಕಿ ಗ್ರಾಮ ಆಡಳಿತ ಅಧಿಕಾರಿಗಳು (VA) ಖುದ್ದಾಗಿ ಸ್ಥಳ ತಪಾಸಣೆ ನಡೆಸಿದ್ದಾರೆ. ಈ ವೇಳೆ ಸದ್ಯ 3,35,610 ಫಲಾನುಭವಿಗಳು ಅರ್ಹರಾಗಿರುವುದು ದೃಢಪಟ್ಟಿದೆ. ಇವರನ್ನೂ ಒಳಗೊಂಡಂತೆ ರಾಜ್ಯದ ಒಟ್ಟು 63,04,554 ಅರ್ಹ ನಾಗರಿಕರಿಗೆ ಮೇ-2026ರ ಮಾಹೆಯವರೆಗಿನ ಬಾಕಿ ಪಿಂಚಣಿ ಹಣವನ್ನು ಯಶಸ್ವಿಯಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ.

ತಪ್ಪು ದಾಖಲೆ ನೀಡಿದವರ ವಿರುದ್ಧ ಕ್ರಮ

ಪಿಂಚಣಿ ಮಂಜೂರಾತಿ ಸಮಯದಲ್ಲಿ ವಯಸ್ಸಿನ ದೃಢೀಕರಣದ ಬಗ್ಗೆ ನಕಲಿ ಪ್ರಮಾಣಪತ್ರಗಳನ್ನು ನೀಡಿ, ಕಾನೂನುಬಾಹಿರವಾಗಿ ಇಷ್ಟು ದಿನ ಸರ್ಕಾರದ ಹಣ ಪಡೆಯುತ್ತಿದ್ದವರ ಖಾತೆಗಳನ್ನು ಪತ್ತೆ ಹಚ್ಚಿ ಅಮಾನತುಗೊಳಿಸಲಾಗಿದೆ. ಅರ್ಹ ಬಡ ಜನರಿಗೆ ಮಾತ್ರ ಸರ್ಕಾರದ ಧನಸಹಾಯ ತಲುಪಬೇಕು ಮತ್ತು ತೆರಿಗೆ ಹಣ ದುರುಪಯೋಗವಾಗಬಾರದು ಎಂಬ ಉದ್ದೇಶದಿಂದ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಉಳಿದ ಸಂದೇಹಾಸ್ಪದ ಖಾತೆಗಳ ಪರಿಶೀಲನೆ ಮುಂದುವರಿದಿದೆ.

ದಾಖಲೆ ಸಲ್ಲಿಸಲು ಕಂದಾಯ ಇಲಾಖೆಯಿಂದ ಕೊನೆಯ ಅವಕಾಶ:

ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಸಾರ್ವಜನಿಕರಿಗೆ ಕಂದಾಯ ಇಲಾಖೆಯು ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ. ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಟ್ಟು 16,42,303 ಫಲಾನುಭವಿಗಳ ಪಿಂಚಣಿ ಸೌಲಭ್ಯವನ್ನು ಸದ್ಯ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.

ಗ್ರಾಮ ಆಡಳಿತ ಅಧಿಕಾರಿಗಳು ನಡೆಸಿದ ಸ್ಥಳ ಪರಿಶೀಲನೆಯ ಸಮಯದಲ್ಲಿ ಯಾವುದೇ ಅಧಿಕೃತ ಗುರುತಿನ ಚೀಟಿಗಳನ್ನು ಹಾಜರುಪಡಿಸಲು ವಿಫಲರಾದ, ಇಲಾಖೆಯ ದಾಖಲೆಗಳಲ್ಲಿ ನೀಡಲಾದ ವಿಳಾಸದಲ್ಲಿ ವಾಸವಿಲ್ಲದ ಹಾಗೂ ನಿಗದಿತ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸದ ಖಾತೆಗಳನ್ನು ಸದ್ಯ ತಡೆಹಿಡಿಯಲಾಗಿದೆ. ಅರ್ಹ ಬಡ ಜನರಿಗೆ ಮಾತ್ರ ಸಾಮಾಜಿಕ ಭದ್ರತೆಯ ಪ್ರಯೋಜನಗಳನ್ನು ತಲುಪಿಸುವ ಮತ್ತು ಯೋಜನೆಯ ದುರುಪಯೋಗವನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ದಾಖಲೆ ಸಲ್ಲಿಕೆಗೆ 30 ದಿನಗಳ ಕಾಲಾವಕಾಶ

ದಾಖಲೆಗಳ ಕೊರತೆಯಿಂದಾಗಿ ಪಿಂಚಣಿ ಸ್ಥಗಿತಗೊಂಡಿರುವ 16.42 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಕಂದಾಯ ಇಲಾಖೆಯು ಸೂಕ್ತ ತಿಳುವಳಿಕೆ ಪತ್ರವನ್ನು ನೀಡಲು ಆದೇಶಿಸಿದೆ. ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರರ ಮೂಲಕ ಇವರಿಗೆ ಅಧಿಕೃತ ನೋಟಿಸ್ ನೀಡಿ, ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು 30 ದಿನಗಳ ಅಂತಿಮ ಕಾಲಾವಕಾಶವನ್ನು ಕಲ್ಪಿಸಿಕೊಡಲಾಗಿದೆ.

ನಿಗದಿತ ಅವಧಿಯೊಳಗೆ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ತಾಲೂಕು ಕಚೇರಿಗೆ ಸಲ್ಲಿಸಬೇಕಾಗುತ್ತದೆ. ಅಧಿಕಾರಿಗಳು ಈ ದಾಖಲೆಗಳನ್ನು ಮರುಪರಿಶೀಲಿಸಿದ ನಂತರ, ಅವರು ನಿಜವಾಗಿಯೂ ಅರ್ಹ ಫಲಾನುಭವಿಗಳಾಗಿದ್ದಲ್ಲಿ ಅಂತಹವರ ಪಿಂಚಣಿ ಸೌಲಭ್ಯವನ್ನು ತಕ್ಷಣವೇ ಮುಂದುವರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸೀಲ್ದಾರರುಗಳಿಗೆ ಇಲಾಖೆಯು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

 


Share this with Friends

Related Post