Thu. Jun 25th, 2026

ಬಾಧಿತ ರೈತರ ಸಂಕಷ್ಟ ಆಲಿಸಲು ಜೂನ್ 27ಕ್ಕೆ ಭೈರಮಂಗಲಕ್ಕೆ ಕುಮಾರಸ್ವಾಮಿ ಭೇಟಿ; ಮುಖ್ಯಮಂತ್ರಿಗಳಿಗೂ ಮುಕ್ತ ಆಹ್ವಾನ!

Share this with Friends

ಬೆಂಗಳೂರು: ಬಿಡದಿ ಭಾಗದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ‘ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ’ಗೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ಪತ್ರ ಸಮರ ತೀವ್ರಗೊಂಡಿದೆ. ಯೋಜನೆಯಿಂದ ಸಂಕಷ್ಟಕ್ಕೆ ಒಳಗಾಗುವ ಸ್ಥಳೀಯರ ಅಹವಾಲು ಆಲಿಸಲು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸುವಂತೆ ಕೋರಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೊಂದು ಪ್ರಮುಖ ಪತ್ರ ಬರೆದಿದ್ದಾರೆ.

ಈ ಹಿಂದೆ ಜೂನ್ 22 ರಂದು ಉಭಯ ನಾಯಕರ ನಡುವೆ ನಡೆದ ಪತ್ರ ವ್ಯವಹಾರವನ್ನು ಉಲ್ಲೇಖಿಸಿರುವ ಹೆಚ್.ಡಿ. ಕುಮಾರಸ್ವಾಮಿ ಅವರು, ಮುಂಬರುವ ಜೂನ್ 27 ರಂದು ತಾವು ಬಿಡದಿ ಸಮೀಪದ ಭೈರಮಂಗಲ ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಪ್ರವಾಸದ ವೇಳೆ ಯೋಜನೆಯಿಂದ ಬಾಧಿತರಾಗಲಿರುವ ಕೃಷಿಕರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಜಂಟಿ ಭೇಟಿಗೆ ಮುಕ್ತ ಆಹ್ವಾನ

ಉದ್ದೇಶಿತ ಉಪನಗರ ಯೋಜನೆಯಿಂದಾಗಿ ಸ್ಥಳೀಯ ರೈತರು, ಕೃಷಿ ಕಾರ್ಮಿಕರು, ಹೈನುಗಾರಿಕೆಯಲ್ಲಿ ತೊಡಗಿರುವ ಮಹಿಳೆಯರು ಹಾಗೂ ಸಣ್ಣ ಉದ್ಯಮಿಗಳು ಎದುರಿಸಬಹುದಾದ ಕುಂದುಕೊರತೆಗಳನ್ನು ನೇರವಾಗಿ ಆಲಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ. ಹೀಗಾಗಿ, ಮುಖ್ಯಮಂತ್ರಿಗಳು ಸಹ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಂಬಂಧಪಟ್ಟ ಉನ್ನತಾಧಿಕಾರಿಗಳೊಂದಿಗೆ ಅದೇ ದಿನ ಭೈರಮಂಗಲ ಗ್ರಾಮಕ್ಕೆ ಆಗಮಿಸಬೇಕು ಎಂದು ಕುಮಾರಸ್ವಾಮಿ ಅವರು ಆಹ್ವಾನ ನೀಡಿದ್ದಾರೆ.

ನಾವಿಬ್ಬರೂ ಒಟ್ಟಾಗಿ ಸ್ಥಳದಲ್ಲೇ ಉಪಸ್ಥಿತರಿದ್ದರೆ ಬಾಧಿತ ವರ್ಗದ ಜನರ ನೈಜ ಸಂಕಷ್ಟಗಳನ್ನು ಖುದ್ದಾಗಿ ಅರ್ಥಮಾಡಿಕೊಳ್ಳಲು ಮತ್ತು ಯೋಜನೆಗೆ ಪರ್ಯಾಯ ಮಾರ್ಗಗಳ ಬಗ್ಗೆ ಸ್ಥಳದಲ್ಲೇ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಪತ್ರದ ಮೂಲಕ ಆಶಯ ವ್ಯಕ್ತಪಡಿಸಿದ್ದಾರೆ. ಈ ಜಂಟಿ ಭೇಟಿಯ ಆಹ್ವಾನದ ಪತ್ರ ಸದ್ಯ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

 

 


Share this with Friends

Related Post