Sun. Jun 28th, 2026

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ: ಮೇಖ್ರಿ ವೃತ್ತದಿಂದ ಹೆಬ್ಬಾಳಕ್ಕೆ ಟೋಲ್ ರಹಿತ ಅವಳಿ ಸುರಂಗ ಮಾರ್ಗ ನಿರ್ಮಾಣಕ್ಕೆ ಚಾಲನೆ

Share this with Friends

ಬೆಂಗಳೂರು: “ಬೆಂಗಳೂರು ನಗರದ ಪ್ರಮುಖ ಹೆಬ್ಬಾಗಿಲಾಗಿರುವ ಹೆಬ್ಬಾಳ ಭಾಗದ ಸಂಚಾರ ದಟ್ಟಣೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವುದೇ ನಮ್ಮ ಪ್ರಮುಖ ಆದ್ಯತೆಯಾಗಿದೆ” ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಮೇಖ್ರಿ ವೃತ್ತದಿಂದ ಹೆಬ್ಬಾಳ ಜಂಕ್ಷನ್ ವರೆಗಿನ ನೂತನ ಮೂರು ಪಥದ ಅವಳಿ ಸುರಂಗ ರಸ್ತೆ ಯೋಜನೆಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು,ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ತನ್ನ ಸ್ವಂತ ಅನುದಾನ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ಈ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದೆ. 2.5 ಕಿಲೋ ಮೀಟರ್ ಉದ್ದದ ಈ ಕಟ್ ಅಂಡ್ ಕವರ್ ಸುರಂಗ ರಸ್ತೆಯು ಸಂಪೂರ್ಣವಾಗಿ ಟೋಲ್ ಮುಕ್ತವಾಗಿರಲಿದ್ದು, ಸಾರ್ವಜನಿಕರು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಸಂಚರಿಸಬಹುದಾಗಿದೆ. ಮುಂದಿನ 50 ವರ್ಷಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಸಿಎಂ ವಿವರಿಸಿದರು.

ಬೆಂಗಳೂರು ಬಿಸಿನೆಸ್ ಕಾರಿಡಾರ್ ಮತ್ತು ರೈತರಿಗೆ ನೆರವು

ಅವಕಾಶ ಸಿಕ್ಕಾಗ ಜನಪರ ಕೆಲಸಗಳನ್ನು ಮಾಡಬೇಕು ಎಂದ ಸಿಎಂ, ಈ ಹಿಂದೆ ನೆನೆಗುದಿಗೆ ಬಿದ್ದಿದ್ದ ಯೋಜನೆಗಳ ವಿಳಂಬದಿಂದಾಗಿ ವೆಚ್ಚ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. 2006 ರಲ್ಲೇ ಆರಂಭವಾಗಿದ್ದರೆ 2-3 ಸಾವಿರ ಕೋಟಿಯಲ್ಲಿ ಮುಗಿಯುತ್ತಿದ್ದ ಯೋಜನೆಗೆ ಈಗ 24 ಸಾವಿರ ಕೋಟಿ ರೂಪಾಯಿ ತಗಲುತ್ತಿದೆ. ಪ್ರಸ್ತುತ ಈ ಯೋಜನೆಗೆ ‘ಬೆಂಗಳೂರು ಬಿಜಿನೆಸ್ ಕಾರಿಡಾರ್’ ಎಂದು ಮರುನಾಮಕರಣ ಮಾಡಲಾಗಿದ್ದು, ಒಟ್ಟು 123 ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಾಣವಾಗಲಿದೆ. ಈ ಯೋಜನೆಗಾಗಿ ಜಮೀನು ನೀಡಿದ ರೈತರಿಗೆ ಟಿಡಿಆರ್, ಎಫ್‌ಎಆರ್ ಹಾಗೂ ಉತ್ತಮ ಪರಿಹಾರವನ್ನು ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಸಮಯ ಉಳಿತಾಯವೇ ಮೂಲ ಮಂತ್ರ

ಹೆಬ್ಬಾಳದಿಂದ ರೇಷ್ಮೆ ಸಂಸ್ಥೆಯವರೆಗೆ 17 ಕಿಲೋ ಮೀಟರ್ ಉದ್ದದ ಮತ್ತೊಂದು ಬೃಹತ್ ಟನಲ್ ಯೋಜನೆಯ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಈ ಯೋಜನೆ ಮೂರ್ನಾಲ್ಕು ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ಇದರಿಂದ ಸಾರ್ವಜನಿಕರ ಅಮೂಲ್ಯ ಸಮಯ ಉಳಿಯಲಿದೆ. ಕಚೇರಿ ಕೆಲಸ ಮುಗಿಸಿ ಜನರು ಸಂಜೆ 5-6 ಗಂಟೆಯೊಳಗೆ ನಿರಾಳವಾಗಿ ಮನೆ ಸೇರಲು ಪೂರಕವಾದ ಎಲ್ಲಾ ಮೂಲಸೌಕರ್ಯಗಳನ್ನು ಸರ್ಕಾರ ಕಲ್ಪಿಸಲಿದೆ ಎಂದು ಅವರು ಭರವಸೆ ನೀಡಿದರು.

ಟೆಂಡರ್ ಪ್ರಕ್ರಿಯೆಯೇ ನಡೆಯದಿದ್ದರೂ 10 ಸಾವಿರ ಕೋಟಿ ಲಂಚದ ಆರೋಪ: 

“ಬೆಂಗಳೂರು ನಗರದಲ್ಲಿ 1.40 ಕೋಟಿ ಜನಸಂಖ್ಯೆಗೆ ಸರಿಸಮಾನವಾಗಿ ಅಂದರೆ 1.35 ಕೋಟಿ ವಾಹನಗಳಿವೆ. ಇಡೀ ನಗರವನ್ನು ಕಾಡುತ್ತಿರುವ ತ್ಯಾಜ್ಯ ಸಮಸ್ಯೆಗೆ ಈ ಹಿಂದೆ ಅಧಿಕಾರದಲ್ಲಿದ್ದವರು ಯಾವುದೇ ಶಾಶ್ವತ ಪರಿಹಾರ ಕಂಡುಕೊಳ್ಳಲಿಲ್ಲ” ಎಂದು ಮುಖ್ಯಮಂತ್ರಿಗಳು ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಾವು ಅಧಿಕಾರ ವಹಿಸಿಕೊಂಡ ತಕ್ಷಣವೇ 10 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ವಿಪಕ್ಷದ ನಾಯಕರು ಮಾಡಿದ ಆರೋಪಗಳನ್ನು ಅವರು ಸಂಪೂರ್ಣವಾಗಿ ತಳ್ಳಿಹಾಕಿದರು. “ಯೋಜನೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಟೆಂಡರ್ ಪ್ರಕ್ರಿಯೆಗಳಾಗಲಿ ಅಥವಾ ಅಂತಿಮ ತೀರ್ಮಾನಗಳಾಗಲಿ ನಡೆದಿಲ್ಲ. ಕಸ ವಿಲೇವಾರಿಯ ಯಂತ್ರೋಪಕರಣಗಳಿಗೆ ಕೇವಲ 4 ರಿಂದ 5 ಸಾವಿರ ಕೋಟಿ ರೂಪಾಯಿ ವೆಚ್ಚವಾಗಬಹುದು. ಆದರೆ ವಿಪಕ್ಷಗಳು ಹತ್ತು ಸಾವಿರ ಕೋಟಿ ಎಂದು ಆರೋಪಿಸುತ್ತಿವೆ. ಇಷ್ಟೊಂದು ಬೃಹತ್ ಮೊತ್ತದ ಹಣವನ್ನು ಇಡಲು 20 ದೊಡ್ಡ ಶೆಡ್‌ಗಳೇ ಬೇಕಾಗಬಹುದು” ಎಂದು ಲೇವಡಿ ಮಾಡಿದರು. ವಿಪಕ್ಷಗಳ ಟೀಕೆಗಳನ್ನು ತಾವು ಸ್ವಾಗತಿಸುವುದಾಗಿಯೂ, ಅವರು ಟೀಕಿಸಿದಷ್ಟೂ ತಾವು ಹೆಚ್ಚು ಎಚ್ಚರಿಕೆಯಿಂದ ಕೆಲಸ ಮಾಡುವುದಾಗಿಯೂ ಸಿಎಂ ತಿಳಿಸಿದರು.

ಕಸದಿಂದ ಗೊಬ್ಬರ, ಇಂಧನ ತಯಾರಿಕೆಗೆ ಆದ್ಯತೆ

ಪ್ರಸ್ತುತ ವಿರೋಧ ಪಕ್ಷದಲ್ಲಿರುವವರು ಅಧಿಕಾರದಲ್ಲಿದ್ದಾಗ ಒಂದು ಲಾರಿ ಕಸವನ್ನೂ ಸಹ ಗೊಬ್ಬರ ಅಥವಾ ಇಂಧನವನ್ನಾಗಿ ಪರಿವರ್ತಿಸುವ ಯಾವುದೇ ರಚನಾತ್ಮಕ ಕೆಲಸಗಳನ್ನು ಮಾಡಲಿಲ್ಲ ಎಂದು ಸಿಎಂ ಟೀಕಿಸಿದರು. “ಬೇರೆಯವರನ್ನು ಟೀಕಿಸಿದಂತೆ ಡಿ ಕೆ ಶಿವಕುಮಾರ್ ಅಥವಾ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರೆ ಅದು ನಡೆಯುವುದಿಲ್ಲ. ಅವರು ಪ್ರತಿಭಟನೆ ನಡೆಸಲಿ ಅಥವಾ ಸೂಕ್ತ ಮಾರ್ಗದರ್ಶನ ನೀಡಲಿ, ಜನಪರ ಕೆಲಸಗಳಾಗಿದ್ದರೆ ನಾನು ಖಂಡಿತ ಆಲಿಸುತ್ತೇನೆ” ಎಂದು ಸ್ಪಷ್ಟಪಡಿಸಿದರು.

ಐದು ಪಾಲಿಕೆಗಳ ರಚನೆ ಸರ್ವಾನುಮತದ ತೀರ್ಮಾನ

ಬೆಂಗಳೂರು ನಗರದ ಆಡಳಿತಾತ್ಮಕ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಐದು ಪ್ರತ್ಯೇಕ ಮಹಾನಗರ ಪಾಲಿಕೆಗಳನ್ನು ರಚಿಸುವ ನಿರ್ಧಾರವನ್ನು ಕೇವಲ ತಮ್ಮೊಬ್ಬರ ತೀರ್ಮಾನದಿಂದ ಕೈಗೊಂಡಿಲ್ಲ ಎಂದು ಸಿಎಂ ವಿವರಿಸಿದರು. ವಿರೋಧ ಪಕ್ಷದ ನಾಯಕರ ಸಲಹೆ ಹಾಗೂ ಒಮ್ಮತವನ್ನು ಪಡೆದೇ ಈ ಮಹತ್ವದ ತೀರ್ಮಾನಕ್ಕೆ ಬರಲಾಗಿದೆ. ಯಲಹಂಕ, ಕೆಂಗೇರಿ ಸೇರಿದಂತೆ ಪ್ರಮುಖ ಉಪನಗರಗಳನ್ನು (ಟೌನ್‌ಶಿಪ್) ಅವರೇ ರೂಪಿಸಿದ್ದರೂ, ಈಗ ರಾಜಕೀಯ ಕಾರಣಗಳಿಗಾಗಿ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು

 


Share this with Friends

Related Post