ಬೆಂಗಳೂರು: ರಾಜ್ಯ ಸರ್ಕಾರವು ₹1,139 ಕೋಟಿ ಭಾರಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ 2 ಕಿಲೋಮೀಟರ್ ಉದ್ದದ ಹೆಬ್ಬಾಳ ಸುರಂಗ ಮಾರ್ಗ ಯೋಜನೆಯನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತೀವ್ರವಾಗಿ ವಿರೋಧಿಸಿದ್ದಾರೆ. ಈ ಯೋಜನೆಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ ಬೆನ್ನಲ್ಲೇ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಇದು ನಗರದ ಸಂಚಾರ ಸಮಸ್ಯೆಯನ್ನು ಬಗೆಹರಿಸಲು ವಿಫಲವಾಗುವ ತೀರಾ ಅವೈಜ್ಞಾನಿಕ ನಿರ್ಧಾರ ಎಂದು ಟೀಕಿಸಿದ್ದಾರೆ.
” ಮುಖ್ಯಮಂತ್ರಿಗಳೇ, ನೀವು ಇಂದು ಕೇವಲ ಶಂಕುಸ್ಥಾಪನೆ ಮಾಡಿಲ್ಲ. ಬದಲಿಗೆ ಬೆಂಗಳೂರಿನ ವೈಜ್ಞಾನಿಕ ನಗರಾಭಿವೃದ್ಧಿಯ ಸಮಾಧಿ ಕಲ್ಲನ್ನು ನೆಟ್ಟಿದ್ದೀರಿ” ಎಂದು ತೇಜಸ್ವಿ ಸೂರ್ಯ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೊದಲ ದಿನವೇ ಟ್ರಾಫಿಕ್ ಜಾಮ್!
ಈ ಸುರಂಗ ಮಾರ್ಗವು ಆರಂಭವಾದ ಮೊದಲ ದಿನದಿಂದಲೇ ವಾಹನ ದಟ್ಟಣೆಯಿಂದ ಸಂಪೂರ್ಣವಾಗಿ ತುಂಬಿರುತ್ತದೆ ಎಂಬುದನ್ನು ಸರ್ಕಾರದ ಸ್ವಂತ ಸವಿಸ್ತಾರ ಯೋಜನಾ ವರದಿಯೇ (DPR) ಒಪ್ಪಿಕೊಂಡಿದೆ ಎಂದು ಸಂಸದರು ಎತ್ತಿ ತೋರಿಸಿದ್ದಾರೆ. “ಇದು ಐದು ಅಥವಾ ಹತ್ತು ವರ್ಷಗಳ ನಂತರದ ಕಥೆಯಲ್ಲ. ಯೋಜನೆಯ ವರದಿಯೇ ಇದು ಮೊದಲ ದಿನವೇ ಟ್ರಾಫಿಕ್ ಜಾಮ್ನೊಂದಿಗೆ ಯಾನ ಆರಂಭಿಸುತ್ತದೆ ಎಂದು ಹೇಳುವುದಾದರೆ, ಇಷ್ಟೊಂದು ಕೋಟಿ ವೆಚ್ಚದ ಯೋಜನೆ ಯಾರಿಗೆ ಉಪಯೋಗ? ಖಂಡಿತವಾಗಿಯೂ ಸಾಮಾನ್ಯ ಪ್ರಯಾಣಿಕರಿಗಂತೂ ಅಲ್ಲ” ಎಂದು ಅವರು ಪ್ರಶ್ನಿಸಿದ್ದಾರೆ.
ಕೇವಲ ವಿಐಪಿಗಳಿಗೆ ಮಾತ್ರ ಅನುಕೂಲ?
ಈ ಯೋಜನೆಯು ಕೇವಲ ಕೆಲವೇ ಕೆಲವು ಪ್ರಭಾವಿ ವ್ಯಕ್ತಿಗಳು ಮತ್ತು ಗಣ್ಯರಿಗೆ ಪ್ರಯೋಜನ ನೀಡುತ್ತದೆ ವಿನಃ ಇದರ ಆರ್ಥಿಕ ಹೊರೆಯನ್ನು ಇಡೀ ನಗರದ ಸಾಮಾನ್ಯ ಜನರು ಭರಿಸಬೇಕಾಗುತ್ತದೆ ಎಂದು ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸದಾಶಿವನಗರದ ವಿಐಪಿಗಳು, ಮುಖ್ಯಮಂತ್ರಿಗಳು ಹಾಗೂ ವಿಮಾನ ನಿಲ್ದಾಣಕ್ಕೆ ಹೋಗಲು ಈ ರಸ್ತೆಯನ್ನು ಬಳಸುವ ನಗರದ ಗಣ್ಯರ ಜೀವನವನ್ನು ಸುಗಮಗೊಳಿಸಲು ಈ ಯೋಜನೆ ರೂಪಿಸಿದಂತಿದೆ. ಆದರೆ ಬೆಂಗಳೂರಿನಾದ್ಯಂತ ಇರುವ ಸಾಮಾನ್ಯ ತೆರಿಗೆದಾರರು ಇದಕ್ಕೆ ಹಣ ಪಾವತಿಸಬೇಕಾಗಿದೆ” ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ನಿಸ್ಸಂದೇಹವಾಗಿ, ಈ ಯೋಜನೆಯ ಪ್ರಮುಖ ಫಲಾನುಭವಿಗಳು ಗುತ್ತಿಗೆದಾರರಾಗಿದ್ದಾರೆ. ಅವರು ಕಾಂಗ್ರೆಸ್ನ ಚುನಾವಣಾ ನಿಧಿಗೆ ಭಾರಿ ಪ್ರಮಾಣದ ಕಿಕ್ಬ್ಯಾಕ್ಗಳನ್ನು ನೀಡಲು ಈ ಯೋಜನೆ ಬಳಕೆಯಾಗಬಹುದು” ಎಂದು ಗಂಭೀರ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.
ಸುರಂಗ ರಸ್ತೆ ಬದಲು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಿ, ಮೆಟ್ರೋ ವೇಗಗೊಳಿಸಿ:
ರಾಜ್ಯ ಸರ್ಕಾರಕ್ಕೆ ನಗರದ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಪ್ರಾಮಾಣಿಕ ಇಚ್ಛೆಯಿದ್ದರೆ ಅದು ಮೆಟ್ರೋ ಯೋಜನೆಗೆ ಒತ್ತು ನೀಡುತ್ತಿತ್ತು ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ. “ನಗರದಲ್ಲಿ ಈಗಾಗಲೇ ಫ್ಲೈಓವರ್ಗಳು ವಿಫಲವಾಗಿವೆ. ಮುಂದಿನ ದಿನಗಳಲ್ಲಿ ಈ ಸುರಂಗ ಮಾರ್ಗಗಳೂ ಸಹ ಸಂಪೂರ್ಣ ವಿಫಲವಾಗುತ್ತವೆ. ಬೆಂಗಳೂರಿಗೆ ಈಗ ಬೇಕಿರುವುದು ಹೆಚ್ಚಿನ ಮೆಟ್ರೋ ರೈಲುಗಳು, ಹೆಚ್ಚಿನ ಬಸ್ಗಳು, ಸುಧಾರಿತ ಉಪನಗರ ರೈಲು (Suburban Rail) ಮತ್ತು ವ್ಯವಸ್ಥಿತ ನಗರಾಭಿವೃದ್ಧಿ ಯೋಜನೆಯೇ ಹೊರತು, ಸೋತ ಆಲೋಚನೆಗಳ ದುಬಾರಿ ಸ್ಮಾರಕಗಳಲ್ಲ” ಎಂದು ಅವರು ಪ್ರತಿಪಾದಿಸಿದರು.
ಕೃಷ್ಣ ಬೈರೇಗೌಡರ ಹಳೇ ಹೇಳಿಕೆ ನೆನಪಿಸಿದ ಸಂಸದರು
ಸಣ್ಣ ಫ್ಲೈಓವರ್ಗಳನ್ನು ನಿರ್ಮಿಸುವುದರಿಂದ ಸಂಚಾರ ದಟ್ಟಣೆಯನ್ನು ಎಂದಿಗೂ ನಿವಾರಿಸಲು ಸಾಧ್ಯವಿಲ್ಲ ಎಂದು ಈ ಹಿಂದೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೃಷ್ಣ ಬೈರೇಗೌಡ ಅವರು ಪದೇ ಪದೇ ವಾದಿಸುತ್ತಿದ್ದನ್ನು ತೇಜಸ್ವಿ ಸೂರ್ಯ ನೆನಪಿಸಿದ್ದಾರೆ. “ಇಂತಹ ಅವೈಜ್ಞಾನಿಕ ಯೋಜನೆಗಳನ್ನು ಸಚಿವ ಸಂಪುಟದಲ್ಲಿ ವಿರೋಧಿಸಲು ಪ್ರಸ್ತುತ ಸಚಿವರಿಗೆ ಸಾಧ್ಯವಾಗದಿದ್ದರೆ, ನಗರದ ಒಟ್ಟಾರೆ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದರ್ಥ” ಎಂದು ಸರ್ಕಾರದ ನಿಲುವನ್ನು ಅವರು ಪ್ರಶ್ನಿಸಿದ್ದಾರೆ.
ದಕ್ಷಿಣ ಬೆಂಗಳೂರಿನಲ್ಲಿ ಸುರಂಗ ಯೋಜನೆಗೆ ತಡೆ
ಬೃಹತ್ ಸುರಂಗ ರಸ್ತೆಗಳ ಪ್ರಸ್ತಾಪಕ್ಕೆ ತಮ್ಮ ಕಠಿಣ ವಿರೋಧವನ್ನು ವ್ಯಕ್ತಪಡಿಸಿದ ಸೂರ್ಯ, “ಈ ಸಣ್ಣ ಸುರಂಗ ಮಾರ್ಗವು ಇದಕ್ಕಿಂತ ದೊಡ್ಡದಾದ ಬೃಹತ್ ಸುರಂಗ ಯೋಜನೆಗೆ ಹೆಬ್ಬಾಗಿಲು ಆಗಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅಂತಹ ಪ್ರತಿಯೊಂದು ಪ್ರಯತ್ನವನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಅದರಲ್ಲೂ ವಿಶೇಷವಾಗಿ ಬೆಂಗಳೂರು ದಕ್ಷಿಣ ಭಾಗದಲ್ಲಿ ಪ್ರಸ್ತಾವಿತ ದೀರ್ಘ ಸುರಂಗ ಮಾರ್ಗವನ್ನು ಅನುಮತಿಸುವ ಪ್ರಶ್ನೆಯೇ ಇಲ್ಲ” ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

