ಮೈಸೂರು: “ದೇಶದಲ್ಲಿ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಜನರ ಹೆಸರುಗಳನ್ನು ವ್ಯವಸ್ಥಿತವಾಗಿ ತೆಗೆದುಹಾಕುವ ಮೂಲಕ ದೊಡ್ಡ ಮಟ್ಟದ ‘ಮತ ದ್ರೋಹ’ ಎಸಗಲಾಗುತ್ತಿದೆ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಆಯೋಜಿಸಲಾಗಿದ್ದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SSR) ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಬಡವರು ಮತ್ತು ಅಲ್ಪಸಂಖ್ಯಾತರ ಮತಗಳೇ ಟಾರ್ಗೆಟ್
ದೇಶದ ಒಟ್ಟು 141 ಕೋಟಿ ಜನಸಂಖ್ಯೆಯಲ್ಲಿ 96 ಕೋಟಿ ಮತದಾರರಿದ್ದಾರೆ. ರಾಜ್ಯದ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕೇವಲ 1,000 ದಿಂದ 5,000 ಮತಗಳ ಅತ್ಯಲ್ಪ ಅಂತರದಿಂದ ಜಯಗಳಿಸಿರುತ್ತಾರೆ. ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ನಾಲ್ಕೈದು ಸಾವಿರ ಮತಗಳನ್ನು ಕಡಿತಗೊಳಿಸಿದರೆ ಫಲಿತಾಂಶವೇ ಬದಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. “ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಬಡವರು, ರೈತರು, ಕಾರ್ಮಿಕರು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮತಗಳನ್ನು ಡಿಲೀಟ್ ಮಾಡುವುದೇ ಬಿಜೆಪಿಯ ಮುಖ್ಯ ತಂತ್ರವಾಗಿದೆ” ಎಂದು ಅವರು ಆರೋಪಿಸಿದರು.
ಒಂದು ತಿಂಗಳ ಕಾಲ ಕಾರ್ಯಕರ್ತರು ಎಚ್ಚರದಿಂದಿರಲಿ
ಕಳೆದ ಚುನಾವಣೆಯಲ್ಲಿ ಕೇವಲ ಶೇ. 36 ರಷ್ಟು ಮತ ಪಡೆದಿರುವ ಬಿಜೆಪಿ ವಿರುದ್ಧ ದೇಶದ ಶೇ. 64 ರಷ್ಟು ಜನ ಮತ ಚಲಾಯಿಸಿದ್ದಾರೆ. ಈ ಶೇ. 64 ರಷ್ಟು ಮತಗಳಲ್ಲಿ ಕೇವಲ ಶೇ. 10 ರಷ್ಟು ಮತಗಳನ್ನು ಕೈಬಿಟ್ಟರೂ ಪ್ರಜಾಪ್ರಭುತ್ವಕ್ಕೆ ದೊಡ್ಡ ಧಕ್ಕೆಯಾಗಲಿದೆ. “ಜೂನ್ 30 ರಿಂದ ಜುಲೈ 29 ರ ವರೆಗೆ ನಡೆಯಲಿರುವ ಒಂದು ತಿಂಗಳ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಮ್ಮ ಪಕ್ಷದ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರು ಅತ್ಯಂತ ಜಾಗರೂಕರಾಗಿ ಕೆಲಸ ಮಾಡಬೇಕು” ಎಂದು ಅವರು ಕರೆ ನೀಡಿದರು. ಬೆಲೆಯೇರಿಕೆ ಮತ್ತು ನಿರುದ್ಯೋಗದ ಕಾರಣದಿಂದಾಗಿ 2019 ರಲ್ಲಿ 303 ಸ್ಥಾನ ಗೆದ್ದಿದ್ದ ಬಿಜೆಪಿ, 2024 ರಲ್ಲಿ 240 ಕ್ಕೆ ಕುಸಿದಿದೆ. ಈ ಹಿನ್ನಡೆಯನ್ನು ಸರಿಪಡಿಸಿಕೊಳ್ಳಲು ಈಗ ಇಂತಹ ಮಾರ್ಗಗಳನ್ನು ಬಳಸಲಾಗುತ್ತಿದೆ ಎಂದು ಲೇವಡಿ ಮಾಡಿದರು.
ಸಂವಿಧಾನ ವಿರೋಧಿ ನೀತಿಗೆ ಶೂದ್ರರು ಬಲಿಯಾಗಬೇಡಿ
ಬಿಜೆಪಿ ಮತ್ತು ಆರ್‌ಎಸ್‌ಎಸ್ ಸದಾ ಸರ್ವಾಧಿಕಾರ, ‘ಒನ್ ನೇಷನ್, ಒನ್ ಎಲೆಕ್ಷನ್’ ನೀತಿಯನ್ನು ನಂಬಿವೆ ಎಂದು ಟೀಕಿಸಿದ ಅವರು, ಹಿಂದುತ್ವದ ಹೆಸರಿನಲ್ಲಿ ಜಾತಿ ಮತ್ತು ವರ್ಣಾಶ್ರಮ ಪದ್ಧತಿಯನ್ನು ಬೆಳೆಸಿ ಜನರನ್ನು ಶೋಷಿಸಲಾಗುತ್ತಿದೆ ಎಂದರು. ಸಾಮಾಜಿಕ ನ್ಯಾಯ ಬಂದರೆ ತಮಗೆ ಶೋಷಣೆ ಮಾಡಲು ಅವಕಾಶ ಸಿಗುವುದಿಲ್ಲ ಎಂಬುದು ಅವರಿಗೆ ಗೊತ್ತು. ಹೀಗಾಗಿ ಶೂದ್ರ ಸಮುದಾಯಗಳು ಯಾವುದೇ ಕಾರಣಕ್ಕೂ ಬಿಜೆಪಿಯ ಸುಳ್ಳುಗಳನ್ನು ನಂಬಿ ಅವರ ಜೊತೆ ಹೋಗಬಾರದು ಎಂದು ಸಿದ್ದರಾಮಯ್ಯ ಎಚ್ಚರಿಸಿದರು.
ಆರ್ಎಸ್ಎಸ್ ಸರ್ವಾಧಿಕಾರದ ವ್ಯಾಮೋಹ ಇಟಲಿ-ಜರ್ಮನಿಯಿಂದ ಬಂದಿದ್ದು:
“ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮೂಲ ಸಿದ್ಧಾಂತವೇ ಸರ್ವಾಧಿಕಾರದಿಂದ ಕೂಡಿದೆ. ಸಂಘಟನೆಯ ಸಂಸ್ಥಾಪಕ ಹೆಡ್ಗೆವಾರ್ ಅವರು ಅಂದಿನ ದಿನಗಳಲ್ಲೇ ತಮ್ಮ ಆಪ್ತರನ್ನು ಇಟಲಿ ಹಾಗೂ ಜರ್ಮನಿಗೆ ಕಳುಹಿಸಿ ಅಲ್ಲಿನ ಸರ್ವಾಧಿಕಾರಿ ಆಡಳಿತದ ಬಗ್ಗೆ ಅಧ್ಯಯನ ನಡೆಸುವಂತೆ ಮಾಡಿದ್ದರು. ಇವರ ಇಡೀ ಸರ್ವಾಧಿಕಾರದ ವ್ಯಾಮೋಹ ಹುಟ್ಟಿದ್ದೇ ಅಲ್ಲಿಂದ” ಎಂದು ಸಿದ್ದರಾಮಯ್ಯ ಕೇಂದ್ರ ಸರ್ಕಾರ ಹಾಗೂ ಸಂಘ ಪರಿವಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದೇಶದ 13 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಕುತಂತ್ರ ನಡೆದಿದೆ. ಹರಿಯಾಣ, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರದ ಚುನಾವಣಾ ಫಲಿತಾಂಶಗಳಲ್ಲಿ ಇದು ಪ್ರತಿಫಲಿಸಿದೆ. ಆದರೆ ಕೇರಳದಲ್ಲಿ ಮಾತ್ರ ಇವರ ಇಂತಹ ಯಾವುದೇ ಆಟಗಳು ನಡೆಯಲಿಲ್ಲ ಎಂದು ವಿವರಿಸಿದರು.
ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ
ಕರ್ನಾಟಕದಲ್ಲಿ ಬಿಜೆಪಿ ಎಂದಿಗೂ ನೇರವಾಗಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿಲ್ಲ. ಎರಡು ಬಾರಿಯೂ ಕೇವಲ ‘ಆಪರೇಷನ್ ಕಮಲ’ ಎಂಬ ಹಿಂಬಾಗಿಲ ರಾಜಕಾರಣದ ಮೂಲಕವೇ ಅಧಿಕಾರದ ಗದ್ದುಗೆ ಏರಿದ್ದಾರೆ. ಕುರ್ಚಿಯಲ್ಲಿ ಉಳಿಯಲು ಅವರು ಎಂತಹ ಕೆಳಮಟ್ಟದ ನಿರ್ಧಾರಗಳನ್ನಾದರೂ ಕೈಗೊಳ್ಳುತ್ತಾರೆ. ಸಂಘ ಪರಿವಾರದ ಮುಖಂಡರಾದ ಹೆಡ್ಗೆವಾರ್ ಆಗಲಿ ಅಥವಾ ಗೋಲ್ವಾಲ್ಕರ್ ಆಗಲಿ ದೇಶದ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಇತಿಹಾಸವಿದೆಯೇ ಎಂದು ಪ್ರಶ್ನಿಸಿದ ಅವರು, ಜೈಲಿನಿಂದ ಬ್ರಿಟಿಷರ ಕ್ಷಮಾಪಣೆ ಕೇಳಿ ಹೊರಬಂದ ಸಾವರ್ಕರ್ ಅವರನ್ನು ಇವರು ವೈಭವೀಕರಿಸುತ್ತಿದ್ದಾರೆ ಎಂದು ಟೀಕಿಸಿದರು.
ಬೂತ್ ಮಟ್ಟದಲ್ಲಿ ಜಾಗೃತರಾಗದಿದ್ದರೆ ರಾಜಕೀಯ ಮಾರಣಹೋಮ
ಮುಂದಿನ ಜುಲೈ ತಿಂಗಳು ಪಕ್ಷದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. “ನನ್ನ ರಾಜಕೀಯ ಜೀವನದ ಪರ್ವ ಮುಗಿಯುತ್ತಾ ಬಂದಿದೆ. ಆದರೆ ನೀವು ಇನ್ನೂ ಸುದೀರ್ಘ ಕಾಲ ರಾಜಕೀಯ ಮಾಡಬೇಕಿದೆ. ನೀವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ನಿಮ್ಮ ರಾಜಕೀಯ ಬದುಕಿನ ಮಾರಣಹೋಮ ನಿಶ್ಚಿತ” ಎಂದು ಸ್ವಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದರು. ಪಕ್ಷದ ಎಲ್ಲಾ ಹಾಲಿ-ಮಾಜಿ ಶಾಸಕರು, ಸಂಸದರು ಹಾಗೂ ಪರಾಜಿತ ಅಭ್ಯರ್ಥಿಗಳು ಬೂತ್ ಮಟ್ಟದ ಅಧಿಕಾರಿಗಳಾದ ಬಿಎಲ್‌ಒ (BLO) ಗಳ ಜೊತೆ ಸಮನ್ವಯ ಸಾಧಿಸಿ ಮನೆ ಮನೆಗೆ ಭೇಟಿ ನೀಡಬೇಕು. ಪ್ರತಿ ಬೂತ್‌ಗೆ ಕನಿಷ್ಠ ಇಬ್ಬರು ಸ್ಥಳೀಯ ನಿವಾಸಿಗಳನ್ನು ಜವಾಬ್ದಾರರನ್ನಾಗಿ ನೇಮಿಸಿ, ಮತದಾರರ ಪಟ್ಟಿಯಿಂದ ಅರ್ಹರ ಹೆಸರುಗಳು ಡಿಲೀಟ್ ಆಗದಂತೆ ತಡೆಯಬೇಕು ಎಂದು ಕರೆ ನೀಡಿದರು.
ನಿಮಗೆ ಅವಕಾಶ ಇದೆ, ಈ ಅವಕಾಶದಿಂದ ವಂಚಿತರಾದರೆ ಅಪಾಯ ಕಟ್ಟಿಟ್ಟಬುತ್ತಿ. ಎನಮರೇಷನ್ ಫಾರ್ಮ್ ನಿಮಗೆ ಕೊಡುತ್ತಾರೆ, ಅದನ್ನು ಸರಿಯಾಗಿ ಭರ್ತಿ ಮಾಡಿ, ಸ್ವೀಕೃತಿ ದೃಢೀಕರಣ ಪಡೆಯಿರಿ. ಇದೇ ಬಹಳಾ ಮುಖ್ಯವಾದುದ್ದು. ಇದಕ್ಕಾಗಿ ಸುದರ್ಶನ್ ಅವರು ಇಡೀ ರಾಜ್ಯ ಸುತ್ತಿ ಜನಜಾಗೃತಿ ಕಾರ್ಯ ಮಾಡುತ್ತಿದ್ದಾರೆ. ಸಂವಿಧಾನ, ದೇಶ ಉಳಿಸುವುದು ಕಾಂಗ್ರೆಸ್ ಮಾತ್ರ. ಮುಂದಿನ ಒಂದು ತಿಂಗಳು ಎಲ್ಲ ಕೆಲಸ ಬಿಟ್ಟು ಎಸ್‌ಐಆರ್ ಮೇಲೆ ನಿಗಾ ಇಡುವ ಕೆಲಸ ಮಾಡಬೇಕು ಎಂದು ತಮ್ಮಲ್ಲಿ ಕೈಮುಗಿದು ಪ್ರಾರ್ಥಿಸುತ್ತೇನೆ. ಒಬ್ಬನೇ ಒಬ್ಬ ಅರ್ಹ ಮತದಾರ ಪಟ್ಟಿಯಿಂದ ಬಿಟ್ಟುಹೋಗಬಾರದು. ಹಾಗೆ ನೀವು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

