Mon. Jun 29th, 2026

‘ಶ್ರಮ ಹಾಗೂ ಶುದ್ಧ ಗುರಿಯಿದ್ದರೆ ಮಾತ್ರ ಜೀವನ ಗೆಲ್ಲಲು ಸಾಧ್ಯ’: ಹಳೆಯ ನೆನಪು ಹಂಚಿಕೊಂಡ ನಟ ಜಗ್ಗೇಶ್!

Share this with Friends

ಬೆಂಗಳೂರು:ಕನ್ನಡ ಚಿತ್ರರಂಗದ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಳೆಯ ದಿನಗಳ ಅಪರೂಪದ ಫೋಟೋ ಒಂದನ್ನು ಹಂಚಿಕೊಳ್ಳುವ ಮೂಲಕ ಯುವ ಪೀಳಿಗೆಗೆ ಸ್ಪೂರ್ತಿದಾಯಕ ಸಂದೇಶವೊಂದನ್ನು ನೀಡಿದ್ದಾರೆ. ತಮ್ಮ ಹದಿನೆಂಟನೇ ವಯಸ್ಸಿನ ಕನಸುಗಳು ಮತ್ತು ಜೀವನದ ಯಥಾರ್ಥತೆಯನ್ನು ಅವರು ಈ ಪೋಸ್ಟ್‌ನಲ್ಲಿ ಬಿಚ್ಚಿಟ್ಟಿದ್ದಾರೆ.

ಯುವ ಮನಸ್ಸಿನ ಕನಸುಗಳು

ತಾವು ಶೇಷಾದ್ರಿಪುರಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ (PCMB) ಓದುತ್ತಿದ್ದಾಗ ತೆಗೆದ ಭಾವಚಿತ್ರವನ್ನು ಹಂಚಿಕೊಂಡಿರುವ ಜಗ್ಗೇಶ್, “ಆ ವಯಸ್ಸಿನಲ್ಲಿ ನಾನು ದೊಡ್ಡ ಸಾಧನೆ ಮಾಡಬೇಕು, ಹಣ ಗಳಿಸಬೇಕು, ನನ್ನನ್ನು ಹಂಗಿಸಿದವರ ಮುಂದೆ ಹೆಮ್ಮರದಂತೆ ಬದುಕಿ ತೋರಿಸಬೇಕು ಹಾಗೂ ಹೆತ್ತವರು ಹೆಮ್ಮೆ ಪಡುವಂತಹ ಮಗನಾಗಬೇಕು ಎಂಬ ಹಂಬಲವಿತ್ತು” ಎಂದು ಬರೆದುಕೊಂಡಿದ್ದಾರೆ. ಈ ರೀತಿಯ ಯೋಚನೆಗಳು ಕೇವಲ ನನ್ನದಷ್ಟೇ ಅಲ್ಲ, ಜಗತ್ತಿನ ಪ್ರತಿಯೊಬ್ಬ ಯುವಕನ ಮನಸ್ಸಿನಲ್ಲೂ ಇರುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯಶಸ್ಸಿಗೆ ಶ್ರಮವೇ ಮೂಲ

ಬರೀ ಕಲ್ಪನೆಗಳಲ್ಲೇ ಮುಳುಗಿರದೆ, ಕಠಿಣ ಶ್ರಮ ಹಾಗೂ ಸ್ಪಷ್ಟ ಗುರಿಯಿಟ್ಟು ಸಾಗಿದಾಗ ಮಾತ್ರ ಜೀವನದಲ್ಲಿ ಗೆಲುವು ಸಾಧ್ಯ. ಪರಿಶ್ರಮವಿಲ್ಲದ ಕನಸುಗಳು ಕೇವಲ ಗಾಳಿಯಲ್ಲಿ ಕರಗುವ ಮೋಡಗಳಂತೆ ಎಂದು ಜಗ್ಗೇಶ್ ಯುವಕರಿಗೆ ಕಿವಿಮಾತು ಹೇಳಿದ್ದಾರೆ. ಅವರವರ ಯೋಗ ಮತ್ತು ಶ್ರಮಕ್ಕೆ ತಕ್ಕಂತೆ ಆಸೆಗಳು ಫಲಿಸುತ್ತವೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.

ರಜನಿಕಾಂತ್ ಹೇಳಿಕೆಯನ್ನು ಸ್ಮರಿಸಿದ ನಟ

ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ ನಂತರದ ವಾಸ್ತವದ ಬಗ್ಗೆ ಮಾತನಾಡಿರುವ ಅವರು, ಇತ್ತೀಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಹೇಳಿದ ನೋವಿನ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ. “ಜಗತ್ತಿನಲ್ಲಿ ಎಲ್ಲರೂ ನಮ್ಮನ್ನು ಇಷ್ಟಪಡುತ್ತಾರೆ ಎಂಬುದು ಸುಳ್ಳು. ಹಾಗೆಯೇ ನಮ್ಮನ್ನು ಇಷ್ಟಪಟ್ಟವರು ನಾವು ಮಾಡುವುದೆಲ್ಲವನ್ನೂ ಒಪ್ಪುತ್ತಾರೆ ಅಂದುಕೊಳ್ಳುವುದು ಮೂರ್ಖತನ” ಎಂಬ ರಜನಿಕಾಂತ್ ಅವರ ಮಾತುಗಳು ನನ್ನ ಕಣ್ಣು ತೆರೆಸಿದವು ಎಂದು ಜಗ್ಗೇಶ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಜೀವನದ ಏಳುಬೀಳುಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಮಾತ್ರ ಬದುಕು ಸುಂದರವಾಗಿರುತ್ತದೆ (Life is beautiful if understood) ಎಂಬ ಲೈಫ್ ಅಡ್ವೈಸ್‌ನೊಂದಿಗೆ ಜಗ್ಗೇಶ್ ತಮ್ಮ ಬರಹವನ್ನು ಮುಗಿಸಿದ್ದಾರೆ. ಸದ್ಯ ಇವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 


Share this with Friends

Related Post